Advertisement

ಏಳಕ್ಕೆ ಏಳು ಸಿನ್ಮಾ; ಏಳು-ಬೀಳು ನಡುವೆ ನಿಲ್ಲೋದ್ಯಾರು?

11:52 AM Jul 03, 2017 | Sharanya Alva |

07.07.2017…’ ಏಳು, ಏಳು ಮತ್ತು ಏಳು.. ಇದರೊಂದಿಗೆ ಮತ್ತೆ ಏಳು! ಆಷಾಢದಲ್ಲಿ ಹೊಸ ಸಿನಿಮಾಗಳು ಸೆಟ್ಟೇರುವುದಿಲ್ಲ. ಸೆಟ್ಟೇರಿದರೂ ಬಹುಶಃ ಸಂಖ್ಯೆ ವಿರಳ. ಹಾಗಂತ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಆಷಾಢದಲ್ಲೂ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಬರುತ್ತಲೂ ಇವೆ. ಈ ವಾರ ಬರೋಬ್ಬರಿ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬುದು ವಿಶೇಷ. ಜುಲೈ 7ರಂದು ಏಳು ಸಿನಿಮಾಗಳು ಒಂದಷ್ಟು ಲೆಕ್ಕಾಚಾರ ಹಾಕಿಕೊಂಡೇ ಚಿತ್ರಮಂದಿರಕ್ಕೆ ಬರುತ್ತಿವೆ. 

Advertisement

ಈ ಏಳು ಚಿತ್ರಗಳಲ್ಲಿ ಯಾವ ಚಿತ್ರಗಳು ಗಟ್ಟಿಯಾಗಿ ನಿಲ್ಲುತ್ತವೆ ಅನ್ನುವುದಕ್ಕೆ ಇನ್ನೂ ಒಂದು ವಾರ ಕಾಯಬೇಕು. ಅಂದಹಾಗೆ, ಬಹುತೇಕ ಹೊಸಬರ ಚಿತ್ರಗಳೇ ಈ ವಾರ ತೆರೆಗೆ ಬರುತ್ತಿವೆ ಎಂಬುದು ವಿಶೇಷ. ಯೋಗಿ ಅಭಿನಯದ ಚಿತ್ರ ಬಿಡುಗಡೆಯಾಗಿ ಬಹಳ ದಿನಗಳೇ ಆಗಿವೆ. “ಜಾನ್‌ ಜಾನಿ ಜನಾರ್ದನ್‌’ ನಂತರ ಅವರು ನಟಿಸಿರುವ “ಕೋಲಾರ 1990′ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮಹೇಶ್‌ ನಿರ್ದೇಶನದ ಈ ಚಿತ್ರವನ್ನು ಆರ್‌. ಲಕ್ಷ್ಮೀನಾರಾಯಣ ಗೌಡ ಹಾಗೂ ರಮೇಶ್‌ ನಿರ್ಮಿಸಿದ್ದಾರೆ.

ಇದು ರೌಡಿ ತಂಗಂ ಕುರಿತ ಕಥೆ. 1990ರಿಂದ 1997ರವರೆಗೆ ಕೋಲಾರ ನಗರವನ್ನು ಬೆಚ್ಚಿಬೀಳಿಸಿದ ತಂಗಂ ಕುರಿತ ಕಥೆ ಇದು. ಯೋಗಿಗೆ ಇಲ್ಲಿ ನಾಯಕಿಯಾಗಿ ನೈನಾ ನಟಿಸಿದ್ದಾರೆ. ಚಿತ್ರಕ್ಕೆ ಹೇಮಂತ್‌ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ದರ್ಶನ್‌ ಕನಕ ಕ್ಯಾಮೆರಾ ಹಿಡಿದಿದ್ದಾರೆ.

ಇನ್ನು, ಈಗಾಗಲೇ ಸುದ್ದಿಯಾಗಿ, ಕುತೂಹಲ ಮೂಡಿಸಿರುವ “ಒಂದು ಮೊಟ್ಟೆಯ ಕಥೆ’ ಕೂಡ ತೆರೆಗೆ ಬರುತ್ತಿದೆ. ಪವನ್‌
ಕುಮಾರ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಪವನ್‌ಕುಮಾರ್‌ ಹಾಗೂ ಸುಹಾನ್‌ ಪ್ರಸಾದ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ರಾಜ್‌ ಬಿ ಶೆಟ್ಟಿ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೇಲರ್‌ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಮಂಗಳೂರಿನ ಬೋಳು ತಲೆಯುಳ್ಳ ಜನಾರ್ದನ ಎಂಬ
ಕನ್ನಡ ಉಪನ್ಯಾಸಕನೊಬ್ಬನ ಅಸಹಾಯಕ ಸ್ಥಿತಿ, ಅವನನ್ನು ಅಣಕಿಸುವಂತಹ ಸಂಭಾಷಣೆಗಳು, ಅವನ ತೊಳಲಾಟ ಮತ್ತು ಒಳಗಿರುವ ಸಂಕಟ ಇವೆಲ್ಲವೂ ಈಗಾಗಲೇ ಟ್ರೇಲರ್‌ ಮೂಲಕ ಮೆಚ್ಚುಗೆ ಪಡೆದಿದ್ದು, ಈ ವಾರ ಸಿನಿಮಾ ಕೂಡ ತೆರೆಗೆ ಬರುತ್ತಿದೆ.

Advertisement

ಈ ಚಿತ್ರಕ್ಕೆ ಮಿದುನ್‌ ಮುಕುಂದನ್‌ ಸಂಗೀತವಿದೆ. ಪ್ರವೀಣ್‌ ಶ್ರೀಯಾನ್‌ ಕ್ಯಾಮೆರಾ ಹಿಡಿದಿದ್ದಾರೆ. ಇದರೊಂದಿಗೆ ಹೊಸಬರ “ಡೀಲ್‌’ ಎಂಬ ಚಿತ್ರವೂ ಬಿಡುಗಡೆಯಾಗುತ್ತಿದೆ. ವಿಜಯ್‌ ತಮ್ಮಣ್ಣ ನಿರ್ದೇಶನದ ಈ ಚಿತ್ರದಲ್ಲಿ ಆದಿಲೋಕೇಶ್‌ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕ ಹೊಸಬರೇ ಸೇರಿ ಈ ಚಿತ್ರವನ್ನು ಮಾಡಿದ್ದಾರೆ. ನಂದೀಶ ಹಾಗೂ ಲೋಕೇಶ ಈ ಚಿತ್ರದ ನಿರ್ಮಾಪಕರು. ವೀರ್‌ಸಮರ್ಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಾಜು ಜಿ.ಹಳ್ಳಿ ಕ್ಯಾಮೆರಾ ಹಿಡಿದಿದ್ದಾರೆ.

“ಹೊಂಬಣ್ಣ’ ಎಂಬ ಮತ್ತೂಂದು ಹೊಸಬರ ಸಿನಿಮಾ ಕೂಡ ತೆರೆಗೆ ಬರುತ್ತಿದ್ದು, ರಕ್ಷಿತ್‌ ತೀರ್ಥಹಳ್ಳಿ ಈ ಚಿತ್ರದ
ನಿರ್ದೇಶಕರು.ಅರಣ್ಯ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಹೆಣೆದಿರುವ ಕಥೆ ಇದು. ರಾಮಕೃಷ್ಣ ನಿಗಡೆ ನಿರ್ಮಾಣ
ಮಾಡಿದ್ದಾರೆ. ವಿನು ಮನಸು ಸಂಗೀತವಿದ್ದು, ಚಿತ್ರದಲ್ಲಿ ಏಳು ಹಾಡುಗಳಿವೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಹಿನ್ನೆಲೆ
ಸಂಗೀತ ನೀಡಿದ್ದಾರೆ. ಪ್ರವೀಣ್‌ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶರ್ಮಿತಾ ಶೆಟ್ಟಿ, ನಿವೇದನ್‌, ಸುಬ್ಬು, ಧನುಗೌಡ, ಸುಚೇಂದ್ರ ಪ್ರಸಾದ್‌, ದತ್ತಣ್ಣ, ನೀನಾಸಂ ಅಶ್ವತ್ಥ್ ಇತರರು ನಟಿಸಿದ್ದಾರೆ.

ಸಂಪೂರ್ಣ ಹೊಸತಂಡವೇ ಸೇರಿ ಮಾಡಿರುವ ಇನ್ನೊಂದು ಹೊಸ ಚಿತ್ರ “ಕಥಾ ವಿಚಿತ್ರ’ ಈ ವಾರ ಬಿಡುಗಡೆಯಾಗುತ್ತಿದೆ. ಅನೂಪ್‌ ಆಂಟೋನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಧಾಕರ್‌ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಹರ್ಷವರ್ಧನ್‌ ಹೀರೋ ಆಗಿದ್ದಾರೆ. ಅವರಿಗೆ ನಾಯಕಿಯಾಗಿ “ಕರ್ವ’ ಖ್ಯಾತಿಯ ಅನು ನಟಿಸಿದ್ದಾರೆ. ಚಿತ್ರಕ್ಕೆ ಮ್ಯಾಥ್ಯೂಸ್‌ ಮನು ಸಂಗೀತವಿದೆ. ಇದೊಂದು ಥ್ರಿಲ್ಲರ್‌ ಸಸ್ಪೆನ್ಸ್‌ ಸಿನಿಮಾ ಆಗಿದ್ದು, ಇದಕ್ಕೆ ಅಭಿಲಾಶ್‌ ಛಾಯಾಗ್ರಹಣವಿದೆ.

ಇದರೊಂದಿಗೆ ಹಾರರ್‌ ಫೀಲ್‌ ಇರುವ “ಶ್ವೇತ’ ಎಂಬ  ಹೊಸಬರ ಚಿತ್ರವೂ ಬಿಡುಗಡೆಯಾಗುತ್ತಿದೆ. ರಾಜೇಶ್‌ ಆರ್‌
ಬಲಿಪ ನಿರ್ದೇಶನದ ಈ ಚಿತ್ರದಲ್ಲಿ ಹೊಸ ಪ್ರತಿಭೆಗಳೇ ಇವೆ. ಪಿ.ಎಂ.ರಾಮಚಂದ್ರರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.
ಡಿ.ನಾಗಾರ್ಜುನ್‌, ಕಿರಣ್‌ ರವೀಂದ್ರನಾಥ್‌, ಎನ್‌.ಎಂ.ವಿಶ್ವ ಸೇರಿದಂತೆ ಹೊಸಬರೇ ಈ ಚಿತ್ರವನ್ನು ಆವರಿಸಿದ್ದಾರೆ.
ಇದರ ಜೊತೆಗೆ “ಹಳ್ಳಿ ಪಂಚಾಯ್ತಿ’, “ಅಮಾವಾಸೆ’ ಮುಂತಾದ ಚಿತ್ರಗಳು ಸಹ ಬಿಡುಗಡೆಯಾಗುತ್ತವೆ ಎಂದು
ಹೇಳಲಾಗುತ್ತಿದೆ.

ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಲೆಕ್ಕ ಇದು. ಇನ್ನೂ ಎರಡ್ಮೂರು ದಿನಗಳಲ್ಲಿ ರಿಲೀಸ್‌ ಆಗುವ ಸಿನಿಮಾಗಳ ಸಂಖ್ಯೆ ಏರಿದರೂ, ಕಡಿಮೆಯಾದರೆ ಅಚ್ಚರಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next