ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನೀರೆರೆಯುತ್ತಿದ್ದ ಪ್ರತ್ಯೇಕತಾವಾದಿಗಳ ಬುಡಕ್ಕೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇದೀಗ ಕೈ ಹಾಕಿದ್ದು, ಹುರಿಯತ್ ಕಾನ್ಫರೆನ್ಸ್ (ತೀವ್ರವಾದಿ) ಸಯ್ಯದ್ ಅಲಿ ಶಾ ಗಿಲಾನಿಯವರ ಅಳಿಯ ಅಲ್ತಾಫ್ ಶಾ ಸೇರಿದಂತೆ 7 ಮಂದಿಯನ್ನು ಬಂಧಿಸಿದೆ. ಬಂಧಿತರು ಪಾಕ್ ಪ್ರಾಯೋಜಿತ ಉಗ್ರ ಚಟುವಟಿಕೆಗಳಿಗೆ, ಕಲ್ಲೆಸೆತಗಾರರಿಗೆ ಪಾಕ್‌ನಿಂದ ಬಂದ ಹಣ ಪೂರೈಸುವಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರೆಲ್ಲರೂ ಪ್ರತ್ಯೇಕತಾವಾದಿಗಳು ಎಂದು ಗುರುತಿಸಿಕೊಂಡಿದ್ದು, ಪಾಕ್‌ನೊಂದಿಗೆ ಕಾಶ್ಮೀರ ಸೇರಬೇಕು ಎಂಬ ನಿಲುವು ಹೊಂದಿದವರು. ಬಂಧಿತರಿಗೆ ಪಾಕ್‌ನ ಉಗ್ರ ಸಂಘಟನೆಗಳೊಂದಿಗೆ ನೇರ ಸಂಪರ್ಕವಿದ್ದು, ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಹಣದ ವ್ಯವಸ್ಥೆ ಮಾಡುತ್ತಿದ್ದರು ಎಂಬುದಕ್ಕೆ ನಿಖರ ಸಾಕ್ಷ್ಯಗಳು ಲಭಿಸಿವೆ ಎಂದು ಎನ್‌ಐಎ ಹೇಳಿದೆೆ. ಬಂಧಿತರ ಬಳಿಯಿದ್ದ 2 ಕೋಟಿ ರೂ., ನಿಷೇಧಿತ ಉಗ್ರ ಸಂಘಟನೆಗಳ ಲೆಟರ್‌ಹೆಡ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಬಂಧನ ಖಂಡಿಸಿ ಪ್ರತ್ಯೇಕತಾವಾದಿಗಳು ಕಣಿವೆ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದಾರೆ.