Advertisement

ಬಾಯಿ ಕ್ಯಾನ್ಸರ್‌ನ 7 ಆರಂಭಿಕ ಚಿಹ್ನೆಗಳು

12:33 PM Dec 18, 2022 | Team Udayavani |

 

  1. ಗಂಟಲಿನಲ್ಲಿ ದಪ್ಪಗಾಗಿರುವಂತಹ ಅನುಭವ ಬಾಯಿಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದು ಗಂಟಲಿನ ಭಾಗದಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವ ಅಥವಾ ದಪ್ಪಗಾಗಿರುವಂತಹ ಅನುಭವ. ಇದು ತೀರಾ ಸೂಕ್ಷ್ಮ ಅನುಭವ ಆಗಿರಬಹುದು, ಆದರೆ ನಿಮ್ಮ ಗಂಟಲಿನಲ್ಲಿ ಮತ್ತು ನುಂಗುವಾಗ ಸಾಮಾನ್ಯಕ್ಕಿಂತ ಏನೋ ಒಂದು ಹೊಸ ಅನುಭವ ಆಗುತ್ತಿರುತ್ತದೆ.
  2. ಧ್ವನಿ ಬದಲಾವಣೆ ಅಥವಾ ಧ್ವನಿ ದೊರಗಾಗುವುದು ಧ್ವನಿಯಲ್ಲಿ ಬದಲಾವಣೆ ಆಗುವುದು ಅಥವಾ ಧ್ವನಿ ದೊರಗಾಗುವುದು ಕೂಡ ಏನೋ ತಾಳ ತಪ್ಪಿದೆ ಎಂಬುದರ ಸೂಚನೆಯಾಗಿದೆ. ಕೆಲವೊಮ್ಮೆ ಕೆಳಧ್ವನಿಯಲ್ಲಿ ಮಾತನಾಡಲು ಕಷ್ಟವಾಗುತ್ತದೆ ಅಥವಾ ದೊಡ್ಡ ಧ್ವನಿಯಲ್ಲಿ ಮಾತನಾಡಲು ಕಷ್ಟವಾಗುತ್ತದೆ. ಇದು ಕೂಡ ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ಇಷ್ಟು ಮಾತ್ರವಲ್ಲದೆ ಗಂಟಲನ್ನು ಆಗಾಗ ಸರಿಪಡಿಸಬೇಕಾಗಿ ಬರುವುದು ಕೂಡ ಒಂದು ಲಕ್ಷಣವಾಗಿರಬಹುದು.
  3. ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದು ಕುತ್ತಿಗೆಯ ಭಾಗದಲ್ಲಿ ಒಂದು ಅಥವಾ ಹೆಚ್ಚು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್‌ನ ಆರಂಭಿಕ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ಗಂಟು ದೊಡ್ಡದಾಗುತ್ತಿದ್ದರೆ ಬಾಯಿಯ ಸರ್ಜನ್‌ರನ್ನು ಕೂಡಲೇ ಭೇಟಿಯಾಗುವುದು ಅಗತ್ಯ.
  4. ಜಗಿಯಲು, ನುಂಗಲು ಅಥವಾ ಮಾತನಾಡಲು ಕಷ್ಟ ಬಾಯಿ ಕ್ಯಾನ್ಸರ್‌ ನಾವು ಬಾಯಿಯ ಮೂಲಕ ಮಾಡುವ ಹಲವು ಕೆಲಸಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನುಂಗುವುದು ಕಷ್ಟವಾಗಬಹುದು, ಜಗಿಯುವುದು ಕೂಡ ಕಠಿನವಾಗಬಹುದು. ಜಗಿಯುವ ಸಂದರ್ಭದಲ್ಲಿ ನೋವು ಅನುಭವಕ್ಕೆ ಬರಬಹುದು ಅಥವಾ ಹಲ್ಲು ಅಭದ್ರವಾಗಿದೆ ಎಂಬ ಭಾವನೆ ಉಂಟಾಗಬಹುದು. ಕೆಲವೊಮ್ಮೆ ಮಾತನಾಡುವುದಕ್ಕೆ ಕೂಡ ಕಷ್ಟವಾಗಬಹುದು.
  5. ಕಿವಿಗಳಲ್ಲಿ ನೋವು ಮತ್ತು ತಲೆನೋವು ಕಿವಿಗಳು ಮುಚ್ಚಿಕೊಂಡಂತೆ, ಕೇಳುವಿಕೆಯಲ್ಲಿ ಸಮಸ್ಯೆ ಇರುವಂತೆ ಅನಿಸಬಹುದು. ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಕಿವಿ ನೋವು ಕೂಡ ಒಂದಾಗಿದೆ. ಸಾಮಾನ್ಯಕ್ಕಿಂತ ಹೆಚ್ಚು ತಲೆನೋವಿನ ಅನುಭವ ಆಗುವುದು ಕೂಡ ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.
  6. ಬಾಯಿ ಜೋಮುಗಟ್ಟುವಿಕೆ ಬಾಯಿ, ತುಟಿ ಅಥವಾ ನಾಲಿಗೆ ಸತತವಾಗಿ, ಕಾರಣವಿಲ್ಲದೆ, ವಿವರಿಸಲಾಗದಂತೆ ಜೋಮು ಹಿಡಿದಿರುವುದು ಕೂಡ ಬಾಯಿ ಕ್ಯಾನ್ಸರ್‌ ಬೆಳವಣಿಗೆ ಹೊಂದುತ್ತಿರುವುದರ ಪ್ರಾಥಮಿಕ ಲಕ್ಷಣವಾಗಿರುತ್ತದೆ.
  7. ಯಾವುದೇ ಸಕಾರಣವಿಲ್ಲದೆ ಒಂದು ಹಲ್ಲು ಅಥವಾ ಹಲವು ಹಲ್ಲುಗಳು ಸಡಿಲವಾಗುವುದು ಹಲ್ಲುಗಳಿಗೆ ಸಂಬಂಧಿಸಿದ ಯಾವುದೇ ತೊಂದರೆ ಇಲ್ಲದೆಯೇ ಹಲ್ಲು ಅಥವಾ ಹಲವು ಹಲ್ಲುಗಳು ಸಡಿಲವಾಗುವುದು ಅಥವಾ ಅಲುಗಾಡುವುದು ಬಾಯಿಯ ಕ್ಯಾನ್ಸರ್‌ನ ಒಂದು ಲಕ್ಷಣವಾಗಿರುತ್ತದೆ. ಹಲ್ಲು ಅಥವಾ ಹಲವು ಹಲ್ಲುಗಳು ಅಲುಗಾಡು ವುದು, ಸಡಿಲವಾಗುವುದು, ಜತೆಗೆ ದವಡೆ ಮತ್ತು ನಾಲಗೆಯಲ್ಲಿ ಆಗಿರುವ ಬದಲಾವಣೆಯನ್ನು ಎಚ್ಚರಿಕೆಯಿಂದ ಗಮನಿಸಿ ದಂತವೈದ್ಯರಲ್ಲಿ ತೋರಿಸಬೇಕು.          – ಡಾ| ಆನಂದ್‌ದೀಪ್‌ ಶುಕ್ಲಾ, ಅಸೋಸಿಯೇಟ್‌ ಪ್ರೊಫೆಸರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ , ಎಂಸಿಡಿಒಎಸ್‌, ಮಾಹೆ, ಮಣಿಪಾಲ
Advertisement

 

  1. (ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)
Advertisement

Udayavani is now on Telegram. Click here to join our channel and stay updated with the latest news.

Next