ಯಕ್ಷಗಾನ ರಂಗದಲ್ಲಿ ಪ್ರಸ್ತುತದಲ್ಲಿ ಹೆಚ್ಚಾಗಿ ಕ್ಷೇತ್ರ ಮಹಾತ್ಮೆಗಳನ್ನು ಹೆಚ್ಚಾಗಿ ಇಷ್ಟ ಪಡುವ ಅಭಿಮಾನಿಗಳು ಹೆಚ್ಚಿದ್ದಾರೆ. ಬಯಲಾಟ ಮೇಳಗಳು ಪೌರಾಣಿಕ ಪ್ರಸಂಗಳಿಗಿಂತ ಕ್ಷೇತ್ರ ಮಹಾತ್ಮೆಗಳನ್ನು ಆಡುವುದು ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಉಡುಪಿ ಜಿಲ್ಲೆಯ ಕುಂಜಾಲಿನ ನೀಲಾವರ ಕ್ರಾಸ್ ಬಳಿ ನಿರಂತರ 7 ದಿನಗಳ ಕಾಲ ನಡೆದ ಕ್ಷೇತ್ರ ಮಹಾತ್ಮೆಗಳ ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸಿತು.
ನೀಲಾವರ ಕ್ರಾಸ್ ಫ್ರೆಂಡ್ಸ್ ಮತ್ತು ರೋಟರಿ ರಾಯಲ್ ಬ್ರಹ್ಮಾವರದ ಸಹಭಾಗಿತ್ವದಲ್ಲಿ ಅದ್ಧೂರಿ 7 ದಿನಗಳ ಯಕ್ಷೋತ್ಸವ ಯಶಸ್ವಿಯಾಗಿ ನಡೆದು ಹೊಸ ದಾಖಲೆಗೆ ಪಾತ್ರವಾಯಿತು.
ಡಿಸೆಂಬರ್ 16 ರಂದು ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಸ್ಥಳೀಯ ಪ್ರಸಿದ್ದ ನಾಟಿ ವೈದ್ಯ ಶ್ರೀ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿಯವರು ನೀಲಾವರ ಕ್ಷೇತ್ರ ಮಹಾತ್ಮೆಯನ್ನು ಕಾಲಮಿತಿಯಲ್ಲಿ ಸೊಗಸಾಗಿ ಪ್ರದರ್ಶಿಸಿದರು.
ಮರುದಿನ ಡಿಸೆಂಬರ್ 17 ರಂದು ಶನೀಶ್ವರ ಮೇಳ ಆಜ್ರಿ, ಚೋನೆಮನೆ ಇವರಿಂದ ಶ್ರೀ ಶನೀಶ್ವರ ಕ್ಷೇತ್ರ ಮಹಾತ್ಮೆಯನ್ನು ಪ್ರದರ್ಶಿಸಲಾಯಿತು.
18 ರಂದು ಅಮೃತೇಶ್ವರಿ ಮೇಳ ಕೋಟ ಇವರು ಅಮೃತೇಶ್ವರಿ ಕ್ಷೇತ್ರ ಮಹಾತ್ಮೆಯನ್ನು ಪ್ರದರ್ಶಿಸಿದರು.
19 ರಂದು ಶ್ರೀ ದುರ್ಗಾಪರಮೇಶ್ವರಿ ಮೇಳ ಮೇಗರವಳ್ಳಿ ಅವರು ಮಹಿಮೆದ ಮಹಾಂಕಾಳಿ ಮಹಾತ್ಮೆಯನ್ನು ಆಡಿ ತೋರಿಸಿದರು.
20 ರಂದು ಹಟ್ಟಿಯಂಗಡಿ ಮೇಳದವರು ಸಾಲಿಗೆದ್ದೆ ವೀರ ಕಲ್ಕುಡ ಮಹಾತ್ಮೆ ಯನ್ನು ಪ್ರದರ್ಶಿಸಿದರು.
ಡಿಸೆಂಬರ್ 21 ರಂದು ದುರ್ಗಾಪರಮೇಶ್ವರಿ ಮೇಳ ಸೌಕೂರು ಇವರು ಸೌಕೂರು ಕ್ಷೇತ್ರ ಮಹಾತ್ಮೆಯನ್ನು ವೈಭವಯುತವಾಗಿ ಆಡಿ ತೋರಿಸಿದರು.
ಎಲ್ಲಾ ಪ್ರದರ್ಶನಗಳು ಕಾಲಮಿತಿಯಲ್ಲಿ ನಡುರಾತ್ರಿಯ ವರೆಗೆ ನಡೆದು ಯುವ ಪ್ರೇಕ್ಷಕರಿಗೆ ಭರ್ಜರಿ ಮನ ರಂಜನೆ ನೀಡುವಲ್ಲಿ ಯಶಸ್ವಿಯಾದವು.
ಯಕ್ಷೋತ್ಸವದ ಕೊನೆಯ ದಿನ ಡಿಸೆಂಬರ್ 22 ರಂದು ಶನಿವಾರ ವೀರಭದ್ರಸ್ವಾಮಿ ಮೇಳ ಹಿರಿಯಡಕ ಇವರು ಹಿರಿಯಡಕ ಕ್ಷೇತ್ರ ಮಹಾತ್ಮೆಯನ್ನು ಅದ್ಧೂರಿಯಾಗಿ ಆಡಿ ತೋರಿಸಿದರು.
ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಎರಡೂ ಪ್ರಕಾರಗಳು ಕೂಡಿರುವ ಮೇಳ ಅದ್ದೂರಿಯಾಗಿ ಯಕ್ಷೋತ್ಸವಕ್ಕೆ ಮಂಗಳ ಹಾಡಿತು.
ಹಲವು ದಿಗ್ಗಜ ಕಲಾವಿದರನ್ನು ರಂಗಕ್ಕೆ ನೀಡಿರುವ ಕುಂಜಾಲಿನ ಪ್ರದೇಶದಲ್ಲಿ 7 ದಿನಗಳ ಕಾಲ ನಡೆದ ಯಕ್ಷೋತ್ಸವ ಹಲವು ಯುವ ಕಲಾವಿದರ ಪ್ರತಿಭೆಯನ್ನು ಹೊರ ಸೂಸಲು ವೇದಿಕೆಯಾಯಿತು. ಸಾವಿರಾರು ಮಂದಿ ಯಕ್ಷಾಭಿಮಾನಿಗಳು ದೂರದ ಊರುಗಳಿಂದಲೂ ಆಗಮಿಸಿ ಯಶಸ್ಸಿಗೆ ಸಹಕರಿಸಿದರು.
ಪುಣ್ಯ ಕ್ಷೇತ್ರಗಳ ಸ್ಥಳ ಮಹಿಮೆ, ದೈವಗಳ ಪ್ರಭಾವ ಏನು ಎನ್ನುವುದನ್ನು ಕಥಾ ಭಾಗಗಳ ಮೂಲಕ ನೂರಾರು ಕಲಾವಿದರು ಪ್ರೇಕ್ಷಕರಿಗೆ ಮನ ಮುಟ್ಟಿಸಿದರು.
ಕಾರ್ಯಕ್ರಮದ ಸಮಾರೋಪದಂದು ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಿದ್ದು ಕಾರ್ಯಕ್ರಮವನ್ನು ಇನ್ನಷ್ಟು ಸ್ಮರಣೀಯವಾಗಿಸಿತು.