Advertisement

ಒಂದೇ ದಿನ 7 ಕೋವಿಡ್‌ 19 ಪ್ರಕರಣ

07:11 AM May 16, 2020 | Lakshmi GovindaRaj |

ಹಾಸನ: ಕೊರೊನಾ ಹರಡದಂತೆ ಕೈಗೊಂಡಿದ್ದ ಮುನ್ನೆಚ್ಚರಿಕೆ ಕ್ರಮಗಳಿಂದ ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಗೆ ಮಂಬೈನ ನಂಟು ಮಾರಕವಾಗಿ ಪರಿಣಮಿಸಿದೆ. ಶುಕ್ರವಾರ ಒಂದೇ ದಿನ 7 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು  ನಾಲ್ಕೇ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಸಂಖ್ಯೆ 16ಕ್ಕೆ ಏರಿದೆ.

Advertisement

ಲಾಕ್‌ಡೌನ್‌ ಸಡಿಲಿಕೆ ಸೇವಾಸಿಂಧು ಆ್ಯಪ್‌ ಮೂಲಕ ಪಾಸ್‌ ಪಡೆದು ಮುಂಬೈನಿಂದ ಬಂದವರಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಕಳೆದ 2 ದಿನದ  ಪಾಸಿಟಿವ್‌ ಪ್ರಕರಣಗಳು ಚನ್ನರಾಯಪಟ್ಟಣ ತಾಲೂಕಿನ ಮೀಲದವರಿಗೆ ಮಾತ್ರ ಸೀಮಿತವಾಗಿದ್ದು, ಶುಕ್ರವಾರ ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕಿನ ಮೂಲದವರಲ್ಲೂ ಕೊರೊನಾ ಪಾಸಿಟಿವ್‌ ಕಂಡು ಬಂದಿದೆ.

ಆತಂಕ ಸೃಷ್ಟಿ:ಮೇ 12 ರಂದು ಚನ್ನರಾಯ ಪಟ್ಟಣದ ಮೂಲದ ಐವರಲ್ಲಿ ಕೊರೊನಾ ಪಾಸಿಟಿವ್‌ ಕಂಡು ಬಂದಿದ್ದರೆ, ಮೇ 13ರ ಬುಧವಾರ ಮತ್ತೆ ನಾಲ್ವರಲ್ಲಿ ಕೊರೊನಾ ಪಾಸಿಟಿವ್‌ ಕಂಡು ಬಂದಿದ್ದು ಈ ಮೂಲಕ ಕೊರೊನಾ  ಶಂಕಿತರ ಸಂಖ್ಯೆ 9ಕ್ಕೆ ಏರಿತ್ತು. ಆದರೆ ಮೇ14ರಂದು ಪಾಸಿಟಿವ್‌ ಪ್ರಕರಣಗಳು ವರದಿಯಾಗದೆ ತುಸು ಸಮಾಧಾನ ತಂದಿತ್ತು. ಆದರೆ, ಶುಕ್ರವಾರ 7 ಪಾಸಿಟಿವ್‌ ಪ್ರಕರಣ ವರದಿ ಆಗುವುದರೊಂದಿಗೆ ಆತಂಕ ಹೆಚ್ಚಿಸಿದೆ.

ಪಾಸಿಟಿವ್‌:ಶುಕ್ರವಾರ ಕಂಡು ಬಂದಿ ರುವ ಪ್ರಕರಣಗಳಲ್ಲಿ ಅರಕಲ ಗೂಡು ತಾಲೂಕಿನ ಮೂಲದ ಇಬ್ಬರು, ಹೊಳೆನರಸೀಪುರ ಮೂಲದ ಇಬ್ಬರು,ಚನ್ನರಾಯಪಟ್ಟಣ ಮೂಲದ ಮೂವರು ಸೇರಿದ್ದಾರೆ. ಮೇ 12ರ ರಾತ್ರಿ 26 ಜನರು  ಮುಂಬೈನ ದಾದರ್‌ನಿಂದ ಖಾಸಗಿ ಬಸ್‌ ಮಾಡಿಕೊಂಡು ಬಂದಿದ್ದು, ಅವರಲ್ಲಿ ಹೊಳೆನರಸೀಪುರ ತಾಲೂಕಿನ ಮೂಲದ ಇಬ್ಬರಿಗೆ ಪಾಸಿಟಿವ್‌ ಕಂಡು ಬಂದಿದೆ.

ಅರಕಲಗೂಡು ತಾಲೂಕಿನ ಮೂಲದ ಮೂವರು ಒಂದು ಕಾರಿನಲ್ಲಿ  ನೇರವಾಗಿ ಬಂದಿದ್ದರು. ಅವರಲ್ಲಿ ಒಬ್ಬ ಯುವಕನಿಗೆ ಪಾಸಿಟಿವ್‌ ಕಂಡು ಬಂದಿದೆ. ಅದೇ ತಾಲೂಕಿನ ಒಬ್ಬ ಮಹಿಳೆಗೂ ಪಾಸಿಟಿವ್‌ ಬಂದಿದೆ. ಚನ್ನರಾಯಪಟ್ಟಣ ತಾಲೂಕಿನ 8 ಮಂದಿ ಒಂದು ಕ್ವಾಲಿಸ್‌ ವ್ಯಾನ್‌ನಲ್ಲಿ ಮುಂಬೈನಿಂದ ಬಂದಿದ್ದು ಅವರಲ್ಲಿ ಮೂವರಿಗೆ ಪಾಸಿಟಿವ್‌ ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

Advertisement

ಕ್ವಾರಂಟೈನ್‌ನಲ್ಲಿ ಸಾಮೂಹಿಕ ಟಿಕ್‌ಟಾಕ್:‌ ಆಕ್ರೋಶ
ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಜನರ ನಿದ್ದೆಗೆಡಿಸಿರುವ ಗೂರಮಾರನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆದಿರುವ ಸಮುದಾಯ ಕ್ವಾರಂಟೈನ್‌ ಕೇಂದ್ರ ಮತ್ತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಆಗಮಿಸಿದವರನ್ನು ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಈಗಾಗಲೇ 11 ಮಂದಿಗೆ ಕೊರೊನಾ ತಗುಲಿದೆ.

ಆದರೆ ಇದೇ ಸ್ಥಳದಲ್ಲಿ ಬೇರೆ ಕಟ್ಟಡದಲ್ಲಿ ಕ್ವಾರಂಟೈನ್‌ನಲ್ಲಿ ಇರುವವರು ಸಾಮಾಜಿಕ ಅಂತರ  ಕಾಯ್ದುಕೊಳ್ಳದೆ “ಜೇನಿನ ಗೂಡು ನಾವೆಲ್ಲಾ, ಬೇರೆಯಾದರೆ ಜೇನಿಲ್ಲ’ ಎಂಬ ಹಾಡಿಗೆ ಟಿಕ್‌ಟಾಕ್‌ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕ್ವಾರಂಟೈನ್‌ನಲ್ಲಿರುವ ಹಲವರು ಸಾಮಾಜಿಕ  ತರ ಮರೆತು ಬೇಜವಾಬ್ದಾರಿತನದಿಂದ ಒಟ್ಟಿಗೆ ಸೇರಿ ಹಾಡಿ ಕುಣಿದು ಸ್ವತಃ ಅವರೇ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ತುಣುಕು ಹರಿಬಿಟ್ಟಿದ್ದಾರೆ. ತಾಲೂಕು ಆಡಳಿತ ಹಾಗೂ ತಾಲೂಕು ಆರೋಗ್ಯ ಇಲಾಖೆ ಇತ್ತ ಗಮನಹರಿಸಿ  ಕ್ವಾರಂಟೈನ್‌ನಲ್ಲಿರುವವರು ಸಾಮಾಜಿಕ ಅಂತರ ಮರೆತು ಟಿಕ್‌ಟಾಕ್‌ ಮಾಡುತ್ತಿರುವ ಕಾರ್ಯಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next