Advertisement

ಹತ್ತಿ ಬಿಡಿಸಲು ಹೊರಟಿದ್ದ 7 ಮಕ್ಕಳು ಮರಳಿ ಶಾಲೆಗೆ

01:36 PM Dec 21, 2019 | Team Udayavani |

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕು ದೇವಾಪುರ ಮತ್ತು ಇತರೆ ಗ್ರಾಮಗಳಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಹತ್ತಿ ಬಿಡಿಸಲು ಹೊರಟಿದ್ದ 6ರಿಂದ 18 ವರ್ಷದೊಳಗಿನ 7 ಮಕ್ಕಳ ವರದಿ ಪಡೆದು ಶಾಲೆಗೆ ದಾಖಲಿಸಿದ್ದಾರೆ.

Advertisement

ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿದರು. ದಾಳಿ ವೇಳೆ ಪತ್ತೆಯಾದ 7 ಮಕ್ಕಳಲ್ಲಿ 9ನೇ ತರಗತಿಯ 2 ಬಾಲಕಿಯರನ್ನು ದೇವಾಪುರ ಪ್ರೌಢಶಾಲೆಗೆ, ಓರ್ವ ಬಾಲಕ ಮತ್ತು ಇಬ್ಬರು ಬಾಲಕಿಯರನ್ನು ಆಲ್ದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹಾಗೂ ಇಬ್ಬರು ಬಾಲಕಿಯರನ್ನು ಸುರಪುರ ತಾಲೂಕಿನ ಪ್ರಿಯದರ್ಶಿನಿ ಅನುದಾನಿತ ಎಚ್‌ಎಸ್‌ ಶಾಲೆಗೆ ದಾಖಲಿಸಿದ್ದಾರೆ.

ದಾಳಿ ವೇಳೆ ಟಂಟಂ ಮತ್ತು ಜೀಪ್‌ಗ್ಳಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂತು. ವಾಹನಗಳನ್ನು ತಡೆಹಿಡಿದು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳ ತಂಡ ವಾಹನ ಚಾಲಕರ ಮತ್ತು ಮಕ್ಕಳ ಮಾಹಿತಿ ಪಡೆಯಿತು. ಪೊಲೀಸರು ಒಟ್ಟು 4 ವಾಹನಗಳನ್ನು ಜಪ್ತಿ ಮಾಡಿ ಪ್ರತಿಯೊಂದಕ್ಕೂ ದಂಡ ವಿಧಿಸಿದ್ದಾರೆ.

ಜತೆಗೆ 1988ರ ಮೋಟಾರು ವಾಹನ ಕಾಯ್ದೆಯಡಿ ಸಂಬಂಧಿಸಿದ ವಾಹನ ಚಾಲಕರ ಚಾಲನೆ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಬಾಲಕಾರ್ಮಿಕ ಇಲಾಖೆ ಯೋಜನಾನಿರ್ದೇಶಕ ರಘುವೀರಸಿಂಗ್‌ ಠಾಕೂರ್‌, ಉಪ ತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ಕಂದಾಯ ನಿರೀಕ್ಷಕ ವಿಠಲ ಬನ್ಸಾಲ್‌, ಗುರುಬಸಯ್ಯ, ಗ್ರಾಮ ಲೆಕ್ಕಿಗರಾದ ಪ್ರತಾಪ, ಬಸವರಾಜ ಶೆಟ್ಟಿ, ಅಂಗನವಾಡಿ ಮೇಲ್ವಿಚಾರಕಿ ಸರೋಜಿನಿ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next