Advertisement

6ನೇ ಶತಮಾನದ ಶಾಸನ ಪತ್ತೆ

10:46 AM Feb 12, 2019 | |

ಹಟ್ಟಿ ಚಿನ್ನದ ಗಣಿ: ಸಮೀಪದ ಪಾಮನಕೆಲ್ಲೂರು ಗ್ರಾಪಂ ವ್ಯಾಪ್ತಿಯ ಯತಗಲ್ಲ ಗ್ರಾಮದ ಬೆಟ್ಟದ ಬಂಡೆಗಳಲ್ಲಿ ಕ್ರಿ.ಶ. 6ನೇ ಶತಮಾನದ ಶಾಸನವನ್ನು ಸಂಶೋಧಕ ಡಾ| ಚನ್ನಬಸಪ್ಪ ಮಲ್ಕಂದಿನ್ನಿ ಪತ್ತೆ ಹಚ್ಚಿದ್ದಾರೆ.

Advertisement

ಗ್ರಾಮದ ಬೆಟ್ಟದ ಬಂಡೆಗಲ್ಲುಗಳಲ್ಲಿ ಪ್ರಾಗೈತಿಹಾಸಿಕ ಕಾಲದ ಚಿತ್ರಗಳಾದ ಆನೆ, ಗೂಳಿ, ಸಾರಂಗ, ಹುಲಿ, ಮಾನವರ ಜೀವನಕ್ಕೆ ಸಂಬಂಧಿಸಿದ ಕೆತ್ತಿದ ಮತ್ತು ಗೀರಿದ ಚಿತ್ರಗಳು ಇವೆ. ಬೆಟ್ಟದಲ್ಲಿ ಪರಮಾನಂದ (ಶಿವ) ಊರಲ್ಲಿ ಪಾರ್ವತಿ, ಪೀರಲ ದೇವರು, ಮಾರುತಿ ದೇವಾಲಯಗಳು ಇವೆ.

ಬೆಟ್ಟದ ಕಣಶಿಲೆಯ ಕ್ರಿ.ಶ. 6ನೇ ಶತಮಾನದ ಶಾಸನವು ಪತ್ತೆಯಾಗಿದ್ದು, ಹಳೆಗನ್ನಡ ಲಿಪಿ ಇದೆ. ಬಾದಾಮಿ ಚಾಲುಕ್ಯ ಅರಸ ಮಂಗಳೇಶ ಕ್ರಿಶ 596-609ನೇ ಕಾಲದ್ದಾಗಿದೆ. ಮಂಗಳೇಶನು ಬಾದಾಮಿ ಚಾಲುಕ್ಯರ ಎರಡನೇ ರಣರಾಗನ ಮೊಮ್ಮಗ. ಅಂದರೆ ಒಂದನೇ ಪುಲಿಕೇಶಿಯ ಎರಡನೇ ಮಗ ಮಂಗಳೇಶನಾಗಿದ್ದು, ಈತ ಹಲವಾರು ಬಿರುದುಗಳನ್ನು ಧರಿಸಿದ್ದು ಚರಿತ್ರೆಯಲ್ಲಿ ದಾಖಲಾಗಿದೆ. ಇಲ್ಲಿ ದೊರೆತ ಶಾಸನದಲ್ಲಿ ಮಂಗಳೇಶನನ್ನು ‘ಶ್ರೀರಣವಿಕ್ರಾಂನ್ತ’ ಎಂಬ ಬಿರುದಿನಿಂದ ಉಲ್ಲೇಖೀಸಲಾಗಿದೆ. ಏಕೆಂದರೆ ಈತನ ಅಜ್ಜನಾದ ರಣರಾಗನು ಕೂಡ ಶಾಸನದಲ್ಲಿ ರಣವಿಕ್ರಾಂತನೆಂದು ಉಲ್ಲೇಖಗೊಂಡಿದ್ದ. ಬಾದಾಮಿ ಚಾಲುಕ್ಯರ ಸ್ಥಾಪಕ 1ನೇ ಜಯಸಿಂಹನ ಮಗನಾದ ರಣರಾಗನು ಸಾಮಂತ ಅರಸನಾಗಿದ್ದ. ಬಾದಾಮಿ ಚಾಲುಕ್ಯ ಅರಸರು ಸ್ವತಂತ್ರವಾಗಿ ಆಡಳಿತ ನಡೆಸಿದ್ದು 1ನೇ ಪುಲಿಕೇಶಿ ಕಾಲದಿಂದ. ಈತನ ಮೊದಲನೇ ಮಗ 1ನೇ ಕೀರ್ತಿವರ್ಮ ಕ್ರಿ.ಶ 566-596 ರಾಜ್ಯಭಾರ ಮಾಡಿದ ಮೇಲೆ ಆನಂತರ 2ನೇ ಮಗ ಮಂಗಳೇಶನು ರಾಜ್ಯಭಾರ ಮಾಡಿದ.

ಬಾದಾಮಿ ಚಾಲುಕ್ಯರ ಕುರಿತು ದೊರೆತ ಮೊದಲ ಶಾಸನ ಇದಾಗಿದೆ. ಪ್ರಸ್ತುತ ಅಪ್ರಕಟಿತ ಶಾಸನವು 4,420 ವರ್ಷಗಳಷ್ಟು ಹಳೆಯದಾಗಿದೆ. ಮಂಗಳೇಶನ ಕೆಲವೇ ಶಾಸನಗಳಲ್ಲಿ ಇದು ಪ್ರಮುಖವಾಗಿದೆ. ಗ್ರಾಮದಲ್ಲಿ ಮತ್ತೂಂದು ಶಾಸನವಿದ್ದು ನವ ಶಿಲಾಯುಗದ ಕಾಲದ ಕೊಡಲಿ ಮಾದರಿಯಲ್ಲಿದೆ. ಇದು ಕ್ರಿ.ಶ. 19ನೇ ಶತಮಾನಕ್ಕೆ ಸೇರಿದೆ. ಸ್ಥಳೀಯ ನಾಯಕರಾದ ನರಸಪ್ಪ ಮತ್ತು ಆದನಗೌಡರ ಬಗ್ಗೆ ತಿಳಿಸುತ್ತದೆ. ಇದರ ಜೊತೆಗೆ ನಾಲ್ಕು ವೀರಗಲ್ಲುಗಳು, ಒಂದು ವೀರಮಹಾಸತಿ ಶಿಲ್ಪ, ಪೋತರಾಜನ ಸ್ತಂಭ ಮತ್ತು ಬೆಟ್ಟದಲ್ಲಿ ಮಲ್ಲಯ್ಯನ ಗವಿ ಹಾಗೂ ಕೊಳದ ಅಮರಯ್ಯನ ಅವಶೇಷಗಳು ಕಾಣಬರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next