ಮುಂಬೈ:60-70ರ ವಯಸ್ಸಿನವರು ತುಂಬಾ ಸಾಹಸ ಪ್ರವೃತ್ತಿಯ ಚಟುವಟಿಕೆಯಿಂದ ದೂರ ಇರುವುದು ಸಹಜ. ಮುಖ್ಯವಾಗಿ ಚಾರಣ, ಪರ್ವತಾರೋಹಣದಂತಹ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ. ಆದರೆ ಮಹಾರಾಷ್ಟ್ರದ ನಾಸಿಕ್ ಸಮೀಪ ಇರುವ ಹರಿಹರ್ ಕೋಟೆಯನ್ನು 68 ವರ್ಷದ ಹಿರಿಯ ಮಹಿಳೆ ನಿರಾತಂಕವಾಗಿ ಏರಿದ್ದಾರೆ.
ಹೀಗೆ ಎತ್ತರದ ಕೋಟೆಯನ್ನು ಏರಿದ ಮಹಿಳೆಯನ್ನು ಆಶಾ ಅಂಬಾಡೆ ಎಂದು ಗುರುತಿಸಲಾಗಿದೆ. ಟ್ರಕ್ಕಿಂಗ್ ಮೂಲಕ ಕೋಟೆಯನ್ನು ಹತ್ತಿ, ಕೊನೆಗೂ ಮೇಲ್ಭಾಗವನ್ನು ತಲುಪಿದ್ದರು.
ಅಂಬಾಡೆ ಅವರು ಕಡಿದಾದ ಮೆಟ್ಟಿಲುಗಳನ್ನು ಏರುವ (ಸಮರ್ಪಕ ದಿನಾಂಕ ನಮೂದಾಗಿಲ್ಲ) ವಿಡಿಯೋ ಮತ್ತು ಫೋಟೊವನ್ನು ಟ್ವಿಟರ್ ನಲ್ಲಿ ದಯಾನಂದ್ ಕಾಂಬ್ಳೆ ಎಂಬವರು ಅಪ್ ಲೋಡ್ ಮಾಡಿದ್ದರು. ಇದಕ್ಕೆ ನೂರಾರು ಮಂದಿ ಟ್ವೀಟ್ ಮೂಲಕ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಿಡಿಯೋ ವೈರಲ್: ಆನೆ ಮೇಲೆ ಯೋಗ: ದಿಢೀರ್ ಕೆಳಗೆ ಬಿದ್ದ ಬಾಬಾರಾಮ್ ದೇವ್
ಈ ಹರಿಹರ್ ಕೋಟೆ ಎತ್ತರದ ಗುಡ್ಡದ ಮೇಲಿದ್ದು, ಇದನ್ನು ಟ್ರಕ್ಕಿಂಗ್ ಮೂಲಕ ಏರಿಕೊಂಡು ಹೋಗಬೇಕು. ಇದು 90 ಡಿಗ್ರಿಯಷ್ಟು ನೇರವಾಗಿದ್ದು, ಸುಲಭವಾಗಿ ಎಲ್ಲರಿಗೂ ಕೋಟೆ ಹತ್ತಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.