ನವ ದೆಹಲಿ : ಕಳೆದ ಒಂದು ವಾರದಲ್ಲಿ ದೇಶದಾದ್ಯಂತ ದಾಖಲಾಗಿರುವ ಹೊಸ ಕೋವಿಡ್ ಸೋಂಕಿನ ಪ್ರಕರಣಗಳ ಪೈಕಿ ಬಹು ಭಾಗ ಕೇರಳ ರಾಜ್ಯದ ಮೂಲದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ( ಸಪ್ಟೆಂಬರ್ 9, ಗುರುವಾರ) ಹೇಳಿದೆ.
ಈ ಬಗ್ಗೆ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ದಾಖಲಾಗುತ್ತಿರುವ ಕೋವಿಡ್ ಸೋಂಕುಗಳಲ್ಲಿ ಹೆಚ್ಚಿನದ್ದು ಕೇರಳ ರಾಜ್ಯದ್ದಾಗಿದೆ. ಕಳೆದ ಒಂದು ವಾರದಲ್ಲಿ ದೇಶದಾದ್ಯಂತ ದಾಖಲಾಗಿರುವ ಕೋವಿಡ್ ಸೋಂಕಿನ ಒಟ್ಟು ಪ್ರಕರಣಗಳ ಪೈಕಿ ಶೇಕಡಾ 68 ರಷ್ಟು ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ಪತ್ತೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೋವಿಡ್: ಅಭ್ಯಾಸ ಸ್ಥಗಿತಗೊಳಿಸಿದ ಟೀಂ ಇಂಡಿಯಾ
ಮೊದಲ ಅಲೆಯಲ್ಲಿ ದಾಖಲಾಗುತ್ತಿದ್ದ ಸೋಂಕಿನ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹೊಸ ಪ್ರಕರಣಗಳು ದಿನ ನಿತ್ಯ ಪತ್ತೆಯಾಗುತ್ತಿದ್ದರೂ, ಕೋವಿಡ್ ಸೋಂಕಿನ ಎರಡನೇ ಅಲೆ ಇನ್ನೂ ಮುಗಿದಿಲ್ಲ ಎನ್ನುವುದನ್ನು ದೇಶದ ಜನರು ಗಮನದಲ್ಲಿಟ್ಟುಕೊಳ್ಳಬೇಕು. ಸೋಂಕನ್ನು ತಡೆಗಟ್ಟುವಲ್ಲಿ ಸರ್ಕಾರದೊಂದಿಗೆ ನಾಗರಿಕರು ಕೈಜೋಡಿಸಬೇಕು ಎಂದು ಅವರು ಹೇಳಿದ್ದಾರೆ.
ಇನ್ನು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 43,263 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 338 ಮಂದಿ ಸಾವನ್ನಪ್ಪಿದ್ದಾರೆಂದು ಇಂದು(ಸಪ್ಟೆಂಬರ್ 9, ಗುರುವಾರ) ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ವಿರೋಧ ಪಕ್ಷಗಳು ಒಂದಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು: ಖರ್ಗೆ