ಹಾಂಗ್ ಕಾಂಗ್: ಗಗನಚುಂಬಿ ಕಟ್ಟಡಗಳನ್ನು ಏರುವ ಸಾಹಸದಲ್ಲಿಯೇ ಜನಪ್ರಿಯನಾಗಿದ್ದ ಫ್ರೆಂಚ್ ಡೇರ್ ಡೆವಿಲ್ ರೆಮಿ ಎನಿಗ್ಮಾ ಲೂಸಿಡಿ (30ವರ್ಷ) ಹಾಂಗ್ ಕಾಂಗ್ ನ 68 ಮಹಡಿಗಳುಳ್ಳ ಟ್ರೆಗುಂಟರ್ ಟವರ್ ಅನ್ನು ಏರಿದ್ದು, ಈ ಸಂದರ್ಭದಲ್ಲಿ ಬರೋಬ್ಬರಿ 721 ಅಡಿ ಎತ್ತರದಿಂದ ಆಯತಪ್ಪಿ ಬಿದ್ದು ದುರಂತ ಅಂತ್ಯ ಕಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:WFI Elections: ನನ್ನ ಕುಟುಂಬದವರು ಯಾರೂ ನಾಮಪತ್ರ ಸಲ್ಲಿಸುತ್ತಿಲ್ಲ: ಬ್ರಿಜ್ ಭೂಷಣ್
ರೆಮಿ ಲೂಸಿಡಿ ಜಗತ್ತಿನ ಅತೀ ಎತ್ತರದ ಗಗನಚುಂಬಿ ಕಟ್ಟಡಗಳನ್ನು ಏರುವ ಸಾಹಸದಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದ. ಇನ್ ಸ್ಟಾಗ್ರಾಮ್ ಡೇರ್ ಡೆವಿಲ್ ಎಂದೇ ಹೆಸರಾಗಿದ್ದ ರೆಮಿ ತನ್ನ ಸ್ಟಂಟ್ ನಿಂದಲೇ ಕೊನೆಯುಸಿರೆಳೆದಿರುವುದು ದುರಂತ ಎಂದು ವರದಿ ತಿಳಿಸಿದೆ.
ಗುರುವಾರ ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಗುರುವಾರ ಟ್ರೆಗುಂಟರ್ ಟವರ್ ಪ್ರದೇಶಕ್ಕೆ ಬಂದಿದ್ದ ರೆಮಿ ಎನಿಗ್ಮಾ ತಾನು 40ನೇ ಮಹಡಿಯಲ್ಲಿರುವ ತನ್ನ ಗೆಳೆಯನನ್ನು ಭೇಟಿಯಾಗಲು ಬಂದಿರುವುದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದ.
ಆದರೆ ಹುಚ್ಚು ಸಾಹಸಕ್ಕೆ ಇಳಿದಿದ್ದ ರೆಮಿ ಹಾಂಗ್ ಕಾಂಗ್ ನ ಅತೀ ಎತ್ತರದ (721ಕ್ಕೂ ಅಧಿಕ ಅಡಿ) ಟ್ರೆಗುಂಟರ್ ಟವರ್ ಅನ್ನು ಏರುತ್ತಾ 68ನೇ ಮಹಡಿ ತಲುಪಿದ್ದ. ಈ ಸಂದರ್ಭದಲ್ಲಿ ಟವರ್ ನಲ್ಲಿದ್ದ ಮನೆಯ ಕಿಟಕಿ ಬಾಗಿಲನ್ನು ಬಡಿದು ಒಳಗೆ ಸೇರುವ ಪ್ರಯತ್ನ ಮಾಡಿದ್ದ ರೆಮಿ. ಆದರೆ ಮನೆಯೊಳಗಿದ್ದ ವ್ಯಕ್ತಿ ಮನೆಯ ಬಾಗಿಲನ್ನು ತೆರೆಯುವ ಮಧ್ಯೆಯೇ ಆಯತಪ್ಪಿ ಬಿದ್ದು ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
ಸಾಹಸಿಗ ರೆಮಿ ಎನಿಗ್ಮಾ ಸಾವಿನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿರುವುದಾಗಿ ವರದಿ ತಿಳಿಸಿದೆ.