Advertisement
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಜಾತ್ರೆ ಜರುಗಿದರೂ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿರಲಿಲ್ಲ. ಯಾವುದೇ ನಿರ್ಬಂಧಗಳಿಲ್ಲದೆ ಮಾ. 20 ರಂದು ಜಾತ್ರೆ ಜರುಗಿತು. ಹೀಗಾಗಿ ಸುಮಾರು ಎರಡು ಲಕ್ಷ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಸಾಮಾನ್ಯವಾಗಿ ಹುಂಡಿ ಹಣ ಎಣಿಕೆ ಕಾರ್ಯ ಬೆಳಗ್ಗೆ ಆರಂಭವಾಗಿ ಸಂಜೆ ಮುಕ್ತಾಯವಾಗುತ್ತಿತ್ತು. ಆದರೆ ಈ ಬಾರಿಯ ಹುಂಡಿ ಹಣದ ಎಣಿಕೆ ಕಾರ್ಯ ಮುಕ್ತಾಯವಾದಾಗ ರಾತ್ರಿ 8 ಗಂಟೆಯಾಗಿತ್ತು. ಜಾತ್ರೆಗೆ ಮುಂಚೆ ಜ. 28ರಂದು ಹುಂಡಿ ಹಣವನ್ನು ಎಣಿಕೆ ಮಾಡಲಾಗಿತ್ತು. ಅಂದು 57.93 ಲಕ್ಷ ರೂ. ಸಂಗ್ರಹವಾಗಿತ್ತು. ಜಾತ್ರೆಯ ಮುಂಚೆ, ಜಾತ್ರೆಯ ನಂತರ ಹಾಗೂ ಶ್ರಾವಣ ಮಾಸದ ನಂತರ ಹುಂಡಿ ಹಣವನ್ನು ವರ್ಷದಲ್ಲಿ ಮೂರು ಬಾರಿ ಎಣಿಸಲಾಗುತ್ತದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇಲ್ಲಿನ ದೇವಾಲಯವನ್ನು ‘ಎ’ ಶ್ರೇಣಿಯ ದೇವಾಲಯ ಎಂದು ಪರಿಗಣಿಸಲಾಗಿದೆ.
Related Articles
Advertisement
ಜಾತ್ರೆಯಲ್ಲಿ ಅತಿ ಹೆಚ್ಚಿನ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಜನಸಂದಣೆ ಹೆಚ್ಚಾಗಿರುವುದರಿಂದ ನೇರ ದರ್ಶನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಇದಕ್ಕಾಗಿ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. 6,950 ಜನರು ನೇರ ದರ್ಶನ ಪಡೆದಿದ್ದು, ಇದರಿಂದ ದೇವಾಲಯಕ್ಕೆ 6.95 ಲಕ್ಷ ರೂ. ಆದಾಯ ದೊರೆತಿದೆ.
ಕಂದಾಯ ಇಲಾಖೆ, ಕೆನರಾ ಬ್ಯಾಂಕ್, ದೇವಾಲಯ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ್ ಎನ್. ರಘುಮೂರ್ತಿ, ದೇವಾಲಯದ ಇಒ. ಎಚ್. ಗಂಗಾಧರಪ್ಪ, ಪಿಎಸ್‌ಐ ಜೆ. ಶಿವರಾಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸೂರ್ಯದೇವ ನಾಯ್ಕ, ರಾಜಸ್ವ ನಿರೀಕ್ಷಕ ಚೇತನ್, ಶಿರಸ್ತೇದಾರ್ ಸದಾಶಿವಪ್ಪ, ಸಿಬ್ಬಂದಿ ರೇಖಾ, ದೇವಾಲಯದ ಸಿಬ್ಬಂದಿ ಸತೀಶ್ ಮತ್ತಿತರರು ಇದ್ದರು.
ಹುಂಡಿಯಲ್ಲಿತ್ತು ವಿದೇಶಿ ನಾಣ್ಯ-ಕರೆನ್ಸಿ
ಹುಂಡಿಯಲ್ಲಿ ಸಂಗ್ರಹವಾದ ನಾಣ್ಯಗಳಲ್ಲಿ ಹಲವಾರು ವಿದೇಶಿ ನಾಣ್ಯ ಹಾಗೂ ಕರೆನ್ಸಿಗಳು ಕಂಡುಬಂದವು. ಯೂರೋ, ಸೆಂಟ್, ಅರಬ್ ದೇಶದ ನಾಣ್ಯಗಳನ್ನು ಭಕ್ತಾದಿಗಳು ಹುಂಡಿಗೆ ಹಾಕಿದ್ದರು. ಈ ಬಾರಿ ನಾಣ್ಯಗಳಿಗಿಂತ ನೋಟುಗಳ ಸಂಖ್ಯೆ ಹೆಚ್ಚಾಗಿರುವುದು ವಿಶೇಷವಾಗಿತ್ತು. 1.98 ಲಕ್ಷ ರೂ.ಗಳಷ್ಟು ನಾಣ್ಯಗಳು ಹುಂಡಿಯಲ್ಲಿದ್ದವು. 69 ಸಾವಿರ ಮೌಲ್ಯದ 5 ರೂ. ನಾಣ್ಯಗಳು, 70 ಸಾವಿರ ರೂ. ಮೌಲ್ಯದ 2 ರೂ., 55,920 ರೂ.ಗಳಷ್ಟು 1 ರೂ. ನಾಣ್ಯಗಳು ಹುಂಡಿಯಲ್ಲಿದ್ದವು. ಇದರ ಜತೆಗೆ ಹಲವಾರು ರೀತಿಯ ಬೆಳ್ಳಿ ಆಭರಣಗಳೂ ಇದ್ದವು. ಹುಂಡಿ ಎಣಿಕಾ ಕಾರ್ಯವನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಯಿತು.