ಲಕ್ಷ್ಮೇಶ್ವರ: ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಿತು.
ಲಕ್ಷಮೇಶ್ವರ ತಾಪಂ ವ್ಯಾಪ್ತಿ 14 ಗ್ರಾಪಂ ಹೊಂದಿದ್ದು, ಇದರಲ್ಲಿ ಬಟ್ಟೂರು ಗ್ರಾಪಂ ಚುನಾವಣೆ ಇಲ್ಲದ್ದರಿಂದ 13 ಪಂಚಾಯತಿಗಳಿಗೆ ಒಟ್ಟು 174 ಸದಸ್ಯ ಸ್ಥಾನಕ್ಕೆ ಡಿ. 22 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ನಾಮಪತ್ರ ಸಲ್ಲಿಕೆ ಡಿ.7ರಿಂದಲೇ ಪ್ರಾರಂಭವಾಗಿದ್ದರೂ ಬಹುತೇಕರುಶುಭ ದಿನ, ಶುಭ ಮಹೂರ್ತ, ಘಳಿಗೆ, ಸಂಖ್ಯಾಶಾಸ್ತ್ರದ ಲೆಕ್ಕಾಚಾರದಲ್ಲಿ ಗುರುವಾರ ಮತ್ತು ಶುಭ ಶುಕ್ರವಾರದ ದಿನ ಹೆಚ್ಚುನಾಮಪತ್ರ ಸಲ್ಲಿಸಿದರು. ಬೆಳಿಗ್ಗೆಯಿಂದಲೇನಾಮಪತ್ರ ಸಲ್ಲಿಸುವ ಅಭ್ಯರ್ಥಿ ತಮ್ಮ ಕುಟುಂಬದ ಸದಸ್ಯರು, ಬೆಂಬಲಿಗರೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕನಾಮಪತ್ರ ಸಲ್ಲಿಸಿದ್ದು ಕಂಡು ಬಂದಿತು. ಇನ್ನು ಗ್ರಾಮ ಪಂಚಾಯತಿ ಹೊಂದಿರದ ಗ್ರಾಮದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಟ್ರ್ಯಾಕ್ಟರ್, ಕಾರು, ಬೈಕ್‌ಗಳ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಬಳಿಕ ತಮ್ಮ ಜೊತೆ ಬಂದವರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಿದ್ದು ಸಾಮಾನ್ಯವಾಗಿತ್ತು.ಕೊನೆಯ ದಿನವೇ ನಾಮಪತ್ರ ಸಲ್ಲಿಸಲು ನಿರ್ಧರಿಸಿದ ಅನೇಕರು ಅವಶ್ಯಕ ಕಾಗದ ಪತ್ರಗಳನ್ನು ಸಿದ್ದಪಡಿಸುವುದರಲ್ಲಿ ಹೆಣಗಾಡಿದ್ದು ಕಂಡು ಬಂದಿತು. ಇನ್ನು ನಾಮಪತ್ರ ತಿರಸ್ಕೃತವಾಗಬಾರದು. ನಾನೂ ಒಂದು ಕೈ ನೋಡೇ ಬಿಡೋಣಾ, ಮತ್ತೂಬ್ಬರಿಗೆ ಟಾಂಗ್ ಕೊಡಲು, ಡಿಮ್ಯಾಂಡ್ ಮಾಡಲು ಹೀಗೆ ಅನೇಕ ಕಾರಣಗಳಿಂದ ಸಂಬಂಧ, ಗೆಳೆತನ, ಸಹೋದರತ್ವ ಎಲ್ಲವನ್ನೂ ಮೀರಿ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಶುಕ್ರವಾರ ತಾಲೂಕಿನ ಮಾಡಳ್ಳಿ, ಹುಲ್ಲೂರು ಗೊಜನೂರ, ಬಾಳೆಹೊಸೂರಿನಲ್ಲಿ ಆಕಾಂಕ್ಷಿಗಳಿಗೆ ಚೀಟಿ ಕೊಟ್ಟು ರಾತ್ರಿ 8 ಗಂಟೆಯವರೆಗೂ ನಾಮಪತ್ರ ಸ್ವೀಕರಿಸಲಾಗಿದೆ.
174 ಸ್ಥಾನಕ್ಕೆ 655 ನಾಮಪತ್ರ ಸಲ್ಲಿಕೆ: 28 ಸದಸ್ಯರನ್ನೊಳಗೊಂಡ ಶಿಗ್ಲಿ ಪಂಚಾಯತಿಗೆ 126ನಾಮಪತ್ರಗಳು, 13 ಸದಸ್ಯರನ್ನೊಳಗೊಂಡ ಆದರಳ್ಳಿಗೆ 78, 11 ಸದಸ್ಯರಿರುವಅಡರಕಟ್ಟಿಗೆ 57, 15 ಸದಸ್ಯರಿರುವ ಬಾಲೇಹೊಸೂರಿಗೆ 41, 15 ಸದಸ್ಯರಿರುವ ದೊಡ್ಡೊರಿಗೆ-48, 9 ಸದಸ್ಯರಿರುವ ಪು. ಬಡ್ನಿಗೆ 27, 13 ಸದಸ್ಯರಿರುವ ಗೊಜನೂರಿಗೆ 35, 8 ಸದಸ್ಯರಿರುವ ಗೋವನಾಳಕ್ಕೆ 31, 9 ಸದಸ್ಯರಿರುವ ಹುಲ್ಲೂರಿಗೆ 31, 11 ಸದಸ್ಯರಿರುವ ಮಾಡಳ್ಳಿ 21, 10 ಸದಸ್ಯರಿರುವ ರಾಮಗಿರಿಗೆ 51, 12 ಸದಸ್ಯರಿರುವ ಯಳವತ್ತಿಗೆ 30, 20 ಸದಸ್ಯರಿರುವ ಸೂರಣಗಿಗೆ-79 ಸೇರಿ ಒಟ್ಟು ನಾಮಪತ್ರ ಸಲ್ಲಿಸಿ ಚುನಾವಣೆಗೆ ಸರ್ಧಿಸಲೇಬೇಕು ಎಂಬ ದಿಟ್ಟ ನಿರ್ಧಾರ ಕೈಗೊಂಡ ಅಭ್ಯರ್ಥಿಗಳು ಪಕ್ಷ, ಜಾತಿ ಇತರೆಲ್ಲ ಲೆಕ್ಕಾಚಾರದಲ್ಲಿ ಗೆಲ್ಲುವ ತಂತ್ರ ರೂಪಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಮತದಾರರ ಓಲೈಸುವಲ್ಲಿ ನಿರತರಾಗಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರು, ಯುವಕರಿಗೆ ಹೋಟೆಲ್, ದಾಬಾಗಳಿಗೆ ಕರೆದುಕೊಂಡು ಹೋಗಿ ಓಲೈಸಿಕೊಳ್ಳುವ ತಂತ್ರ-ಪ್ರತಿತಂತ್ರಕ್ಕೆ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ.