ಬೆಂಗಳೂರು: ಗಣಿಗಾರಿಕೆಯಿಂದ ಪ್ರಸಕ್ತ ಸಾಲಿನಲ್ಲಿ 6,500 ಕೋಟಿ ರೂ.ರಾಜಧನ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಮುಖವಾಗಿ ಕಲ್ಲು ಗಣಿಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಿ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಕಲ್ಲು ಗಣಿಗಾರಿಕೆಗೆ ಹೆಚ್ಚು ಅವಕಾಶ ನೀಡಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವ ಜತೆಗೆ ರಾಜಧನ ಸಂಗ್ರಹವಾಗಲಿದೆ. ಹಿಂದಿನ ವರ್ಷ 3000 ಕೋಟಿ ರೂ. ಗುರಿ ಹೊಂದಿತ್ತಾದರೂ 6000 ಕೋಟಿ ರೂ. ಸಂಗ್ರಹ ಮೂಲಕ ಶೇ.145 ಗುರಿ ಸಾಧನೆ ಮಾಡಲಾಗಿತ್ತು ಎಂದು ಹೇಳಿದರು.
ಚಿನ್ನ ಗಣಿಗಾರಿಕೆಗೆ ಹರಾಜು ಕರೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ. ಹಟ್ಟಿ ಚಿನ್ನದ ಗಣಿ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್‌ಗಳಿಗೆ ಮರಳು ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕಂಪನಿಗಳು 800 ರೂ. ಟನ್ ನಂತೆ ಮರಳು ಮಾರಾಟ ಮಾಡಲಿವೆ ಎಂದು ತಿಳಿಸಿದರು.
ಅಂಗನವಾಡಿ ಆಹಾರ ಗುಣಮಟ್ಟದ ಹೊಣೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿಇಒಗಳಿಗೆ ನೀಡಲಾಗಿದೆ. ಪ್ರದೇಶವಾರು ಪಾರಂಪರಿಕ ಆಹಾರ ಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೂ ಆಗಿರುವ ಅವರು ಹೇಳಿದರು.
ಕೋàವಿಡ್ ಕಾರಣ ಇಬ್ಬರೂ ಪೋಷಕರನ್ನು ಕಳೆದುಕೊಂಡ 233 ಮಕ್ಕಳಿಗೆ ಸರ್ಕಾರ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ 18 ವರ್ಷದ ಒಳಗಿನ ಫಲಾನುಭವಿಗಳಿಗೆ ಮಾಹೆ 3,500 ರೂ. ಆರ್ಥಿಕ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.