Advertisement

Kasaragod;ವ್ಯಾಪಾರಿಯ 65 ಲಕ್ಷ ರೂ. ಎಗರಿಸಿದ ಬಿಹಾರ ನಿವಾಸಿ ಬಂಧನ

10:50 PM Jul 18, 2023 | Team Udayavani |

ಕಾಸರಗೋಡು: ಫೋನ್‌ ಮೂಲಕ ವ್ಯಾಪಾರಿಯ 65 ಲಕ್ಷ ರೂ. ಎಗರಿಸಿದ ಪ್ರಕರಣದ ಆರೋಪಿ ಬಿಹಾರ ನಿವಾಸಿ ಓಂ ಕುಮಾರ್‌ ರಾಯ್‌ (34)ನನ್ನು ಕಾಸರಗೋಡು ಸೈಬರ್‌ ಠಾಣೆಯ ಠಾಣಾಧಿಕಾರಿ ಪಿ.ನಾರಾಯಣನ್‌ ನೇತೃತ್ವದ ಪೊಲೀಸ್‌ ತಂಡ ಬಂಧಿಸಿದೆ.

Advertisement

ಆತನ ವಾಟ್ಸ್‌ಆ್ಯಪ್‌ ನಂಬ್ರದ ಜಾಡು ಹಿಡಿದು ಸೈಬರ್‌ ಪೊಲೀಸರು ಕಳೆದ ಏಳು ತಿಂಗಳಿನಿಂದ ನಿರಂತರವಾಗಿ ನಡೆಸಿದ ತನಿಖೆಯ ಫಲವಾಗಿ ಹರಿಯಾಣದ ಗುರು ಗ್ರಾಮದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾನೆ. ಬೇಕಲ ನಿವಾಸಿಯಾಗಿರುವ ವ್ಯಾಪಾರಿ ಹಾಗೂ ಶೇರು ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಯನ್ನು ವಂಚಿಸಿ 2022 ರಿಂದ ಫೋನ್‌ ಮೂಲಕ 65 ಲಕ್ಷ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ. ಮುಂಬಯಿ ವಿಮಾ ಸಂಸ್ಥೆಯೊಂದರ ಹೆಸರಿನಲ್ಲಿ ಆರೋಪಿ ಈ ವ್ಯಾಪಾರಿಯನ್ನು ಸಂಪರ್ಕಿಸಿದ್ದನು. ಶೇರು ವ್ಯವಹಾರದಲ್ಲಿ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ತಲುಪಿದೆ ಎಂದೂ ಆದರೆ ತೆರಿಗೆ ಹಾಗೂ ಸರ್ವೀಸ್‌ ಚಾರ್ಜ್‌ ರೂಪದಲ್ಲಿ ನಿಗದಿತ ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕಾಗಿದೆ.

ಈ ಹಣವನ್ನೂ ಫೋನ್‌ ಮುಖಾಂತರ ಕಳುಹಿಸಿಕೊಡಬೇಕೆಂದು ನಂಬಿಸಿ ಆರೋಪಿ ವಂಚನೆಗೆ ಚಾಲನೆ ನೀಡಿದ್ದನು. ವಾಸ್ತವತೆಯನ್ನು ತಿಳಿಯದೆ ಆತನ ವಂಚನೆಯ ಬಲೆಗೆ ಬಿದ್ದ ವ್ಯಾಪಾರಿ ಜನವರಿ ತಿಂಗಳಿಂದ ಆರಂಭಗೊಂಡು ನವೆಂಬರ್‌ ತನಕ ಹಲವು ಬಾರಿಯಾಗಿ 65 ಲಕ್ಷ ರೂ. ವನ್ನು ಆರೋಪಿಯ 12 ಬ್ಯಾಂಕ್‌ ಖಾತೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕವಷ್ಟೇ ತಾನು ವಂಚನೆಗೊಳಗಾಗಿರುವ ವಿಷಯ ವ್ಯಾಪಾರಿಯ ಗಮನಕ್ಕೆ ಬಂದಿದೆ.

ಆ ಬಳಿಕ 2022ರಲ್ಲಿ ವ್ಯಾಪಾರಿಯ ಪುತ್ರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾಸರಗೋಡು ಸೈಬರ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೆ. ಪ್ರೇಮ್‌ಸದನ್‌ ನೇತೃತ್ವದ ಪೊಲೀಸರ ತಂಡ ನಡೆಸಿದ ತನಿಖೆಯಲ್ಲಿ ಆರೋಪಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿತ್ತು. ಅಷ್ಟರಲ್ಲಿ ಪ್ರೇಮ್‌ಸದನ್‌ ಬೇರೆಡೆಗೆ ವರ್ಗಾವಣೆಗೊಂಡಿದ್ದರು. ಆ ಬಳಿಕ ತೆರವುಗೊಂಡ ಆ ಸ್ಥಾನಕ್ಕೆ ಪಿ.ನಾರಾಯಣನ್‌ ಅವರನ್ನು ಇನ್‌ಸ್ಪೆಕ್ಟರನ್ನಾಗಿ ನೇಮಿಸಲಾಗಿತ್ತು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next