Advertisement
ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ, ಜನವರಿಯಿಂದ ಮೇ 31ರ ವರೆಗೆ ಆನ್‌ಲೈನ್‌ನಲ್ಲಿ ಜಿಲ್ಲೆಯಲ್ಲಿ 85691 ಅರ್ಜಿಗಳು ಸಲ್ಲಿಕೆಯಾಗಿದ್ದು, 79815 ಅರ್ಜಿ ಸ್ವೀಕೃತಗೊಂಡಿವೆ.
Related Articles
Advertisement
ಕೆ.ಆರ್.ನಗರ ತಾಲೂಕಿನಲ್ಲಿ 5296 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 162 ಅರ್ಜಿಗಳ ಸ್ಥಳ ಪರಿಶೀಲನೆ ನಡೆಸಲಾಗಿದ್ದು, 325 ಅರ್ಜಿಗೆ ಅನುಮೋದನೆ ನೀಡಲಾಗಿದೆ. 2 ಅರ್ಜಿ ತಿರಸ್ಕೃತಗೊಂಡಿದೆ.
ಮೈಸೂರು ತಾಲೂಕಿನಲ್ಲಿ 30516 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 31 ಅರ್ಜಿಗಳ ಸ್ಥಳ ಪರಿಶೀಲನೆ ಮಾಡಲಾಗಿದೆ. 69 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 4 ಅರ್ಜಿ ತಿರಸ್ಕೃತಗೊಂಡಿದೆ. 29610 ಅರ್ಜಿ ಬಾಕಿ ಇದೆ.
ನಂಜನಗೂಡು ತಾಲೂಕಿನಲ್ಲಿ 14776 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 20 ಅರ್ಜಿಗಳ ಸ್ಥಳ ಪರಿಶೀಲನೆ ನಡೆಸಲಾಗಿದೆ. 3 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 14514 ಅರ್ಜಿ ಬಾಕಿ ಇದೆ.
ಪಿರಿಯಾಪಟ್ಟಣ ತಾಲೂಕಿನಲ್ಲಿ 6702 ಅರ್ಜಿ ಸಲ್ಲಿಕೆಯಾಗಿದ್ದು, 157 ಅರ್ಜಿ ಸ್ಥಳ ಪರಿಶೀಲನೆಯಾಗಿದೆ. 115 ಅರ್ಜಿ ಅನುಮೋದನೆ ಮಾಡಲಾಗಿದೆ. 9 ಅರ್ಜಿ ತಿರಸ್ಕೃತಗೊಂಡಿದೆ. ಒಟ್ಟಾರೆ 6400 ಅರ್ಜಿ ಬಾಕಿ ಇದೆ. ತಿ.ನರಸೀಪುರ ತಾಲೂಕಿನಲ್ಲಿ 7733 ಅರ್ಜಿ ಸಲ್ಲಿಕೆಯಾಗಿದ್ದು, 14 ಅರ್ಜಿಗಳ ಸ್ಥಳ ಪರಿಶೀಲನೆ ನಡೆಸಸಿದ್ದು, 52 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ.
3 ಅರ್ಜಿ ತಿರಸ್ಕೃತಗೊಂಡಿದೆ. 7533 ಅರ್ಜಿ ಬಾಕಿ ಇದೆ. ಒಟ್ಟಾರೆ ಜಿಲ್ಲೆಯಲ್ಲಿ 85691 ಅರ್ಜಿ ಸಲ್ಲಿಕೆಯಾಗಿದ್ದು, 903 ಅರ್ಜಿಗಳ ಸ್ಥಳ ಪರಿಶೀಲನೆ ಮಾಡಿ 646 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೀರಿಹುಂಡಿ ಬಸವಣ್ಣ, 6 ತಿಂಗಳಿಗೆ 600 ಪಡಿತರ ಚೀಟಿ ಕೊಡುವುದಾದರೆ ನಿಮ್ಮ ಇಲಾಖೆ ಏನು ಕೆಲಸ ಮಾಡುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲೂ ಬಿಪಿಎಲ್ ಕಾರ್ಡ್ ಬೇಕಾಗುತ್ತದೆ. ಕೊಡಲೇಕೆ ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಸಿಬ್ಬಂದಿ ಕೊರತೆ ಇರುವುದರಿಂದ ಪಡಿತರ ಚೀಟಿ ವಿತರಣೆ ವಿಳಂಬವಾಗುತ್ತಿದೆ. ಇನ್ನೂ ಹೆಚ್ಚು ಶ್ರಮ ಹಾಕಿದರೆ ತಿಂಗಳಿಗೆ 2 ಸಾವಿರ ಪಡಿತರ ಚೀಟಿ ವಿತರಣೆ ಮಾಡಬಹುದು. ಅದಕ್ಕಿಂತ ಹೆಚ್ಚು ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಮಧ್ಯಪ್ರವೇಶಿಸಿದ ಜಿಪಂ ಸಿಇಒ ಪಿ.ಶಿವಶಂಕರ್, ಆಹಾರ ಇಲಾಖೆ ಈ ವೇಗದಲ್ಲಿ ಹೋದರೆ ಅರ್ಜಿದಾರರಿಗೆ ಪಡಿತರ ಚೀಟಿ ನೀಡಲು ಇನ್ನೂ 3 ವರ್ಷ ಬೇಕಾಗುತ್ತದೆ. ಇದು ಕೆಲಸ ಮಾಡುವ ರೀತಿಯಲ್ಲಾ ಎಂದು ಆಕ್ಷೇಪಿಸಿದರು.
ಸಿಬ್ಬಂದಿ ಕೊರತೆ ಇದ್ದರೆ ಗ್ರಾಮಲೆಕ್ಕಿಗರನ್ನು ಬಳಸಿಕೊಳ್ಳಿ ಎಂದು ಬಸವಣ್ಣ ಸೂಚಿಸಿದರು, ಆದರೆ, ಆಹಾರ ಇಲಾಖೆ ಕೆಲಸ ಮಾಡುವುದಿಲ್ಲ ಎಂದು ಗ್ರಾಮಲೆಕ್ಕಿಗರ ಸಂಘ ತೀರ್ಮಾನಿಸಿದೆ. ಗ್ರಾಮಲೆಕ್ಕಿಗರ ಸಂಘ ತೀರ್ಮಾನ ಮಾಡಿದೆ ಅವರಿಂದ ಕೆಲಸ ತೆಗೆದುಕೊಳ್ಳಲಾಗುವುದಿಲ್ಲ ಎನ್ನುವುದಾದರೆ ಸರ್ಕಾರ ಏಕೆ ಬೇಕು?
ಹಳ್ಳಿಗಳಲ್ಲಿ ರೇಷನ್ ಕಾರ್ಡ್ ಕೊಡಿಸಲಾಗದಿದ್ದರೆ ನೀವೇನಕ್ಕೆ ಗೆದ್ದಿದ್ದೀರಾ ಎಂದು ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ನಾವೇನು ಉತ್ತರ ಕೊಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಇಲಾಖೆ ಅಧಿಕಾರಿ, ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದ ನಂತರ ಚರ್ಚೆ ಮುಕ್ತಾಯಗೊಳಿಸಲಾಯಿತು.
ಆರ್‌ಟಿಇಯಡಿ ದಾಖಲಾತಿ ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಕೌಟಿಲ್ಯ, ಜಾnನ ಸರೋವರ, ಎನ್‌ಪಿಎಸ್, ಆರ್ಕಿಡ್ ಹಾಗೂ ನವಕಿಡ್ಸ್ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಿಆರ್‌ಪಿ- ಬಿಆರ್‌ಪಿಗಳ ನೇಮಕಕ್ಕೆ ಸರ್ಕಾರದ ಪರಿಷ್ಕೃತ ಆದೇಶದಂತೆ ಹೊಸದಾಗಿ ಕೌನ್ಸೆಲಿಂಗ್ ಮಾಡಿ, ಡೆಂಘೀ ಪರೀಕ್ಷೆ ಕಿಟ್‌ಗಳನ್ನು ತಾಲೂಕು ಆಸ್ಪತ್ರೆಗಳಿಗೂ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಜಿಲ್ಲೆಯಲ್ಲಿ ರೈತರಿಗೆ ಟಾರ್ಪಾಲು, ಸ್ಪ್ರೆಯರ್, ಪವರ್ ಟಿಲ್ಲರ್‌ಗಳನ್ನು ಬೇಡಿಕೆ ಆಧರಿಸಿ ಕೊಡಿಸಲು ಸರ್ಕಾರಕ್ಕೆ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು ಅವರಿಗೆ ಸೂಚಿಸಲಾಯಿತು. ಬಹುಗ್ರಾಮ ಕುಡಿಯುವ ನೀರು ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಅನುಪಯುಕ್ತ ಹಾಗೂ ವಿಫಲ ಕೊಳವೆ ಬಾವಿಗಳನ್ನು ಮುಚ್ಚಿಸುವ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು.
ಜಿಪಂ ಉಪಾಧ್ಯಕ್ಷ ಜಿ.ನಟರಾಜ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷಿ ರಾಜಣ್ಣ, ಜಿಪಂ ಸಿಇಒ ಪಿ.ಶಿವಶಂಕರ್, ಮುಖ್ಯಯೋಜನಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇತರರು ಇದ್ದರು.