ಬೆಂಗಳೂರು: ರಾಜ್ಯದ ವಿವಿಧೆಡೆ ಅಂದಾಜು 33,771 ಮಂದಿಗೆ ಉದ್ಯೋಗ ಸೃಷ್ಟಿಸುವ 6407.82 ಕೋಟಿ ರೂ. ಬಂಡವಾಳ ಹೂಡಿಕೆಯ 128 ಪ್ರಸ್ತಾವನೆಗಳಿಗೆ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಅನುಮೋದನೆ ನೀಡಿದೆ.
ಶಿಕ್ಷಣ-ಸಂಶೋಧನ ಸಂಸ್ಥೆಗಳ ಸ್ಥಾಪನೆ, ಉಗ್ರಾಣ, ಶೈತ್ಯಾಗಾರಗಳ ನಿರ್ಮಾಣ, ವಾಹನ ಬಿಡಿಭಾಗ, ಪಿವಿಸಿ ಪೈಪ್ ತಯಾರಿಕೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ 143ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನ ಸಮಿತಿ ಸಭೆಯಲ್ಲಿ ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ.
50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ 22 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ 4230.64 ಕೋಟಿ ರೂ. ಹೂಡಿಕೆಯೊಂದಿಗೆ 24,846 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. 15 ಕೋಟಿ ರೂ.ಗಳಿಂದ 50 ಕೋಟಿ ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 104 ಹೊಸ ಯೋಜನೆಗಳಿಗೆ ಅನುಮತಿ ದೊರೆತಿದೆ.
ಇವುಗಳಿಂದ 2056.68 ಕೋಟಿ ಬಂಡವಾಳ ಹೂಡಿಕೆಯೊಂದಿಗೆ 8,425 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ.
ಬೆಂಗಳೂರು ಗ್ರಾಮಾಂತರ, ಬೆಳಗಾವಿ, ರಾಮನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯ ವಿವಿಧ ಯೋಜನೆಗಳು ಸೇರಿವೆ.
ಈ ಯೋಜನೆಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 485 ಕೋಟಿ ರೂ. ಬಂಡವಾಳದ ಯಾಂತ್ರಿಕೃತ ಎರಕಹೊಯ್ಯುವ ಘಟಕ ಸ್ಥಾಪನೆ, ಬೆಂ.ಗ್ರಾ. ಜಿಲ್ಲೆಯ ದೇವನಹಳ್ಳಿಯಲ್ಲಿ 484.33 ಕೋಟಿ ರೂ. ಮೊತ್ತದ ವಿಜ್ಞಾನ, ತಂತ್ರಜ್ಞಾನ ಸಂಶೋಧನೆ ಹಾಗೂ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ, ಮೈಸೂರು ಜಿಲ್ಲೆಯಲ್ಲಿ 415 ಕೋಟಿ ರೂ. ಮೊತ್ತದ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಶಿಕ್ಷಣ ವಿಶ್ವವಿದ್ಯಾಲಯ ಸ್ಥಾಪನೆ ಮುಂತಾದವು ಸೇರಿವೆ.