Advertisement

 ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯ : ನಾಟಿಗೆ 63 ಸಾವಿರ ಸಸಿಗಳು ಸಿದ್ಧ

02:55 PM Jun 10, 2020 | mahesh |

ಬೆಳ್ತಂಗಡಿ: ಹಸುರೇ ಉಸಿರು ಎಂಬ ಧ್ಯೇಯದೊಂದಿಗೆ ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಒಳಪಟ್ಟಂತೆ ಈ ಸಾಲಿನಲ್ಲಿ ನೆಡಲು 63,180 ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ನಡ ನರ್ಸರಿಯಲ್ಲಿ ಈ ಬಾರಿ 2020ರ ಮಳೆಗಾಲದಲ್ಲಿ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳಿಗೆ ಮತ್ತು ಕೃಷಿಕರಿಗೆ ವಿತರಿಸಲು ಹಣ್ಣು, ನೆರಳು ನೀಡುವ ಸಸಿಗಳನ್ನು ಸಿದ್ಧಗೊಳಿಸಲಾಗಿದೆ. ಒಟ್ಟು 27 ಹೆಕ್ಟೇರ್‌ ನೆಡುತೋಪನ್ನು ಬೆಳೆಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ 11,800 ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ರಸ್ತೆ ಬದಿ ಸುಮಾರು 8 ಕಿ.ಮೀ. ನೆಡುತೋಪು ನಿರ್ಮಾಣಕ್ಕಾಗಿ 2,640 ಹಣ್ಣಿನ, ನೆರಳು ಕೊಡುವ ದೊಡ್ಡ ಗಾತ್ರದ ಸಸಿಗಳನ್ನು ಬೆಳೆಸಲಾಗಿದೆ.

Advertisement

ನರೇಗಾ ಯೋಜನೆ
ನರೇಗಾ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಸುಮಾರು 2,000 ಗೇರು ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜತೆಗೆ ಗಿಡನಾಟಿ ಮಾಡಲು ಕೂಲಿ ಪಾವತಿ ಕೂಡ ನರೇಗಾ ಯೋಜನೆಯಡಿ ಇಲಾಖೆ ವತಿಯಿಂದ ನಡೆಯಲಿದೆ.

26 ಜಾತಿ ಮರಗಳು
ಸಾರ್ವಜನಿಕರಿಗೆ ವಿತರಣೆ ಮಾಡುವ ಸಲುವಾಗಿ ಇಲಾಖೆ ನಡ ನರ್ಸರಿಯಲ್ಲೂ ಮಹಾಗನಿ, ಸಾಗುವಾನಿ, ಹಲಸು, ಹೆಬ್ಬಲಸು, ಮಾವು, ನೇರಳೆ, ಅಂಟವಾಳ, ಪುನರ್‌ಪುಳಿ, ಸೀತಾಫಲ, ಶಮಿ, ಕಹಿಬೇವು, ಪಾಲಾಕ್ಷ, ರೆಂಜ, ದೂಪ ಇತ್ಯಾದಿ ಒಟ್ಟು 26 ಜಾತಿಯ 63,180 ಸಸಿಗಳನ್ನು ಬೆಳೆಸಲಾಗಿದೆ. ಇವುಗಳ ಪೈಕಿ 6×9 ಗಾತ್ರದ ಚೀಲದ ಗಿಡವೊಂದಕ್ಕೆ 1 ರೂ., 8×12 ಗಾತ್ರದ ಚೀಲದ ಗಿಡವೊಂದಕ್ಕೆ 3ರೂ. ನಿಗದಿ ಪಡಿಸಲಾಗಿದೆ. ಸಸಿ ನೆಡಲು ಉದ್ದೇಶಿಸಿದಲ್ಲಿ ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದ ವಲಯಾರಣ್ಯಾಧಿಕಾರಿಯವರ ಕಚೇರಿಗೆ ಸಂಪರ್ಕಿಸಬಹುದು.

ಹಸುರು ಕರ್ನಾಟಕ ಯೋಜನೆ
ರಾಜ್ಯದ ಹಸುರು ಕರ್ನಾಟಕ ಯೋಜನೆಯಡಿ 16,000 ಉತ್ತಮ ಜಾತಿಯ ಗಿಡಗಳನ್ನು ಸಿದ್ಧಗೊಳಿಸಿದ್ದು, ಸಂಘ – ಸಂಸ್ಥೆಗಳು, ಶಾಲೆ, ಗ್ರಾಮ ಪಂಚಾಯತ್‌ ಗಳಿಗೆ ವಿತರಿಸಲು ಉಚಿತವಾಗಿ ನೀಡಲಾಗುತ್ತದೆ. ಪ್ರತಿ ವರ್ಷದಂತೆ ಬೀಜದುಂಡೆ ತಯಾರಿಗೂ ಸಿದ್ಧತೆ ನಡೆಸಲಾಗುತ್ತಿದೆ.

ಪ್ರೋತ್ಸಾಹ ಯೋಜನೆ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಗಿಡ ನೀಡುವುದರ ಜತೆಗೆ ಮೂರು ವರ್ಷಗಳಿಗೆ 100 ರೂ. ಗಳಂತೆ ಪ್ರೋತ್ಸಾಹಧನ ಒದಗಿಸಲಾಗುತ್ತಿದೆ. ಭಾವಚಿತ್ರ, ಬ್ಯಾಂಕ್‌ ಪಾಸ್‌ಪುಸ್ತಕ ವಿವರ, ಆರ್‌ಟಿಸಿ ಪ್ರತಿ ನೀಡಿದಲ್ಲಿ ಸಸಿ ವಿತರಿಸಲಾಗುತ್ತದೆ.

Advertisement

ಎಸ್‌.ಎಂ.ಎ.ಎಫ್‌.ನಲ್ಲೂ ಅವಕಾಶ
ಸಬ್‌ಮಿಷನ್‌ ಆನ್‌ ಆ್ಯಗ್ರೋಫಾರೆಸ್ಟ್ರೀ(ಎಸ್‌ಎಂಎಎಫ್‌) ಯೋಜನೆಯ ಮೂಲಕವೂ ಗಿಡಗಳ ನಾಟಿಗೆ ಅವಕಾಶವಿದೆ. 6×9 ಅಳತೆಗೆ 1 ರೂ., 8×12 ಅಳತೆಗೆ 3 ರೂ. ಪಾವತಿಸಿ ಫಲಾನುಭವಿಗಳು ಗಿಡ ಪಡೆಯಬಹುದು. ಬೌಂಡರಿ ಪ್ಲಾಂಟಿಗ್‌ಗೆ ಪ್ರತಿ ಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 100ರಿಂದ 500ರಂತೆ ಪ್ರತಿಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 500ರಿಂದ 1,000ದಂತೆ ಪ್ರತಿ ಗಿಡಕ್ಕೆ 10 ರೂ. ಒಂದು ಹೆಕ್ಟೇರ್‌ನಲ್ಲಿ 1,000ದಿಂದ 1,200ರಂತೆ ಪ್ರತಿ ಗಿಡಕ್ಕೆ 7 ರೂ. ಪ್ರೋತ್ಸಾಹಧನ ಲಭ್ಯವಾಗಲಿದೆ.

 ಸದುಪಯೋಗಿಸಿ
ಪರಿಸರ ಸಂರಕ್ಷಣೆಯಡಿ ಪ್ರತಿ ವರ್ಷ ಸಾಮಾಜಿಕ ಅರಣ್ಯ ವಲಯದಿಂದ ನೆಡುತೋಪು ಬೆಳೆಸಲು ಉದ್ದೇಶಿಸಲಾಗುತ್ತದೆ. ಬೆಳ್ತಂಗಡಿ ವ್ಯಾಪ್ತಿಯಲ್ಲಿ ಉತ್ತಮ ಜಾತಿಯ ಗಿಡ ವಿತರಣೆಗೆ ಸಿದ್ಧವಾಗಿದೆ. ಸಂಘ – ಸಂಸ್ಥೆಗಳು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು.
 - ಸುಬ್ರಹ್ಮಣ್ಯ ಆಚಾರ್‌, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಲಯ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next