ಲಕ್ನೋ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ(ಏಪ್ರಿಲ್ 19) ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 63 ನಿರಾಶ್ರಿತ ಹಿಂದೂ ಕುಟುಂಬಗಳಿಗೆ ನಿವೇಶನ ಮತ್ತು ಕೃಷಿ ಭೂಮಿಯ ಹಕ್ಕುಪತ್ರವನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಪರ್ಸಂಟೇಜ್ ಪಿತಾಮಹ, ಅನೈತಿಕ ರಾಜಕಾರಣದ ಅಸಲಿ ಅಪ್ಪ: ಕುಮಾರಸ್ವಾಮಿ ಟೀಕೆ
ಎಎನ್ ಐ ನ್ಯೂಸ್ ಏಜೆನ್ಸಿ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 63 ನಿರಾಶ್ರಿತ ಹಿಂದೂ ಕುಟುಂಬಗಳಿಗೆ ಲಕ್ನೋದಲ್ಲಿ ವಾಸ್ತವ್ಯ ಹೂಡಲು ನಿವೇಶನ ಮತ್ತು ಕೃಷಿ ಭೂಮಿಯ ಹಕ್ಕುಪತ್ರವನ್ನು ವಿತರಿಸಿದ್ದಾರೆ. ಮುಖ್ಯಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಹಕ್ಕು ಪತ್ರ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಿರಾಶ್ರಿತರಿಗೆ ಉತ್ತರಪ್ರದೇಶದಲ್ಲಿ ನಿವೇಶನ ಮತ್ತು ಕೃಷಿ ಭೂಮಿ ನೀಡುವುದಾಗಿ ಭಾರತೀಯ ಜನತಾಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.
ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಂದ ತೆರವುಗೊಳಿಸಿ ಅದನ್ನು ನಿರಾಶ್ರಿತ ಕುಟುಂಬಗಳಿಗೆ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಆ ಸ್ಥಳವನ್ನು ಶಾಲೆ, ಕೈಗಾರಿಕೆ, ಉದ್ಯಮ ಹಾಗೂ ಹಿಂದೂ ನಿರಾಶ್ರಿತರಿಗೆ ಹಂಚಿಕೆ ಮಾಡಲಾಗುವುದು ಎಂದು ಸಿಎಂ ಯೋಗಿ ಹೇಳಿದ್ದಾರೆ.