Advertisement

5 ವರ್ಷದಲ್ಲಿ 6,160 ಪೋಕ್ಸೋ ಕೇಸು ದಾಖಲು; ಗೃಹ ಸಚಿವ ಅರಗ ಜ್ಞಾನೇಂದ್ರ

06:26 PM Feb 21, 2023 | Team Udayavani |

ಕೋಲಾರ: ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಅಪಹರಣ, ದೌರ್ಜನ್ಯ ಪ್ರಕರಣಗಳ ಮಾಹಿತಿ ಹಾಗೂ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಪ್ರಶ್ನಿಸಿದ ವಿಧಾನಪರಿಷತ್‌ನಲ್ಲಿ ಸದಸ್ಯ ಇಂಚರ ಗೋವಿಂದರಾಜು ಅವರಿಗೆ ಉತ್ತರಿಸಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಕಳೆದ ಐದು ವರ್ಷಗಳಲ್ಲಿ 6,160 ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಸದನಕ್ಕೆ ಉತ್ತರ ನೀಡಿದರು.

Advertisement

ಎಂಎಲ್‌ಸಿ ಗೋವಿಂದರಾಜು ವಿಧಾನಪರಿಷತ್‌ ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ಮಕ್ಕಳ ಅಪಹರಣ ಮತ್ತು ಅಪರಾಧಗಳ ಪ್ರಕರಣಗಳು, ಹಾಗೂ ಕಳೆದ 8 ವರ್ಷಗಳಲ್ಲಿ ಸುಮಾರು ಐದು ಪಟ್ಟು ಹೆಚ್ಚು ಮಕ್ಕಳ ಮೇಲೆ ಅಪರಾಧಗಳು ನಡೆದಿದೆ. ಇದುವರೆಗೂ ಸರ್ಕಾರ ತೆಗೆದುಕೊಂಡ ಕ್ರಮ, ಎಷ್ಟು ಪ್ರಕರಣಗಳನ್ನು ಇತ್ಯಾರ್ಥಪಡಿಸಲಾಗಿದೆ ಎಂದು ಪ್ರಶ್ನೆಯೆತ್ತಿದರು.

ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳ ಪ್ರಕಾರ 2013 ರಲ್ಲಿ ರಾಜ್ಯದಲ್ಲಿ 1353 ಪ್ರಕರಣಗಳಿದ್ದರೆ, 2021 ರಲ್ಲಿ 7261 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 2020 ರಿಂದ ಸುಮಾರು 2563 ಪ್ರಕರಣಗಳನ್ನು ಪೊಲೀಸರು ಇನ್ನೂ ತನಿಖೆ ಮಾಡಬೇಕಿದೆ ಹಾಗೂ 2022 ರಲ್ಲಿ ತನಿಖೆ ಮಾಡಬೇಕಾದ ಒಟ್ಟು ಪ್ರಕರಣ ಸಂಖ್ಯೆಯು ಇದೀಗ 9824ಕ್ಕೆ ಏರಿಕೆಯಾಗಿದೆ ಎಂದರು.

ಇದಲ್ಲದೇ ಮಕ್ಕಳ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 13,903 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿ ಉಳಿದಿದ್ದು, 4,673 ಪ್ರಕರಣಗಳನ್ನು 2021 ರಲ್ಲಿ ವಿಚಾರಣೆಗೆ ಕಳುಹಿಸಲಾಗಿದೆ. ಇನ್ನು ಸೈಬರ್‌ ಅಪರಾಧ ಪ್ರಕರಣಗಳಲ್ಲಿ ರಾಜ್ಯ2ನೇಸ್ಥಾನದಲ್ಲಿದ್ದು, 2019ಕ್ಕೆ ಹೋಲಿಸಿದರೆ 2020ರಲ್ಲಿ ಮಕ್ಕಳ ಮೇಲಿನ ಸೈಬರ್‌ ಅಪರಾಧ ಪ್ರಕರಣಗಳಲ್ಲಿ 400 ಪ್ರತಿಶತದಷ್ಟು ಹೆಚ್ಚಾಗಿರುವ ಬಗ್ಗೆ ರಾಷ್ಟ್ರೀಯ ಅಪರಾಧ ಬ್ಯೂರೋ ವರದಿಯಲ್ಲಿದೆ ಎಂದು ಸರ್ಕಾರದ ಗಮನಕ್ಕೆ ತಂದರು.

ಆನ್‌ಲೈನ್‌ ಅಪರಾಧಗಳ 842 ಪ್ರಕರಣಗಳಲ್ಲಿ 738 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ ಆಶ್ಲೀಲವಾಗಿ ಚಿತ್ರಿಸುವ, ಪ್ರಕಟಿಸುವ ಅಥವಾ ರವಾನಿಸುವ ಪ್ರಕರಣವಾಗಿದೆ ಎಂದು ಗೃಹ ಸಚಿವರಿಗೆ ತಿಳಿಸಿದರು.

Advertisement

ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿ, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ಸರಾಸರಿ 10- 20 ಶೇ. ಹೆಚ್ಚಾಗಿದೆ. ಜೆ.ಜೆ. ಕಾಯ್ದೆ ಪ್ರಕರಣಗಳ ಸಂಖ್ಯೆ: 292, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ಸರಾಸರಿ 10 ರಿಂದ 20 ಶೇ. ಹೆಚ್ಚಾಗಿರುವುದು ಕಂಡುಬಂದಿರುತ್ತದೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿಲ್ಲ ಎಂದರು.

ಸಚಿವರ ಉತ್ತರಕ್ಕೆ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದಾಗ ಮಾತನಾಡಿದ ಸಚಿವರು, ಸದಸ್ಯರು ಸಂಕ್ಷಿಪ್ತವಾಗಿ ವಿವರಗಳನ್ನು ನೀಡಿರುತ್ತಾರೆ. ಇದನ್ನು ನಾನು ಒಪ್ಪುತ್ತೇನೆ. ಈ ಸಂಬಂಧವಾಗಿ ಅತ್ಯಾಚಾರ, ಪೋಕ್ಸೋ ಪ್ರಕರಣಗಳ ತನಿಖೆಯನ್ನು ಅಪರಾಧ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ, 2018 ರಲ್ಲಿನ ತಿದ್ದುಪಡಿಯಂತೆ ನಿಗದಿಪಡಿಸಿರುವ 60 ದಿನಗಳ ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆಯ ಮೂಲಕ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.

ಅಪರಾಧ ಪ್ರಕರಣ ಗಣನೀಯ ಹೆಚ್ಚಳ ಇಲ್ಲ
ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಕಳೆದ 5 ವರ್ಷದಲ್ಲಿ, ಗಂಡು ಮಕ್ಕಳ ಸಂಖ್ಯೆ: 2858, ಹೆಣ್ಣು ಮಕ್ಕಳ ಸಂಖ್ಯೆ: 12532, ಪೋಕ್ಸೋ ಪ್ರಕರಣಗಳ ಸಂಖ್ಯೆ: 6160 , ಬಾಲ್ಯ ವಿವಾಹ ತಡೆ ಕಾಯ್ದೆ ಪ್ರಕರಣಗಳ ಸಂಖ್ಯೆ: 853, ಬಾಲ ಕಾರ್ಮಿಕ ತಡೆ ಕಾಯ್ದೆ ಪ್ರಕರಣಗಳು:319, ಜೆ.ಜೆ. ಕಾಯ್ದೆ ಪ್ರಕರಣಗಳ ಸಂಖ್ಯೆ:292, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next