Advertisement

ರಾಜ್ಯದ ಅನುದಾನಿತ ಶಾಲೆಗಳಲ್ಲಿ 6 ಸಾವಿರ ಶಿಕ್ಷಕರ ಕೊರತೆ

10:33 AM Dec 11, 2019 | mahesh |

ಮಂಗಳೂರು: ರಾಜ್ಯದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ 20 ವರ್ಷಗಳಿಂದ ನೇಮಕಾತಿ ನಡೆಯದೆ ರಾಜ್ಯಾದ್ಯಂತ 6 ಸಾವಿರ ಶಿಕ್ಷಕರ ಕೊರತೆ ಎದುರಾಗಿದ್ದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 27 ಶಾಲೆಗಳಲ್ಲಿ ಸ್ಥಳೀಯವಾಗಿ ನೇಮಕ ಮಾಡಿಕೊಂಡ ಗೌರವ ಶಿಕ್ಷಕರಿಂದಲೇ ಬೋಧನೆ ನಡೆಯುತ್ತಿದೆ.

Advertisement

ರಾಜ್ಯದಲ್ಲಿ 2,326 ಅನುದಾನಿತ ಪ್ರಾಥಮಿಕ ಶಾಲೆಗಳಿವೆ. ಈ ಪೈಕಿ ಬೆರಳೆಣಿಕೆಯವು ಇತ್ತೀಚೆಗೆ ಅನುದಾನ ಪಡೆದವು, ಬಹುತೇಕ ಹಳೆ ಶಾಲೆಗಳು. ಒಟ್ಟು 24 ಸಾವಿರ ಶಿಕ್ಷಕರ ಹುದ್ದೆಗಳಿವೆ. ಪ್ರಸ್ತುತ 18 ಸಾವಿರ ಮಂದಿ ಕರ್ತವ್ಯದಲ್ಲಿದ್ದು, 6 ಸಾವಿರ ಹುದ್ದೆಗಳು ಖಾಲಿಯಿವೆ. 1998ರಿಂದೀಚೆಗೆ ನೇಮಕಾತಿ ನಡೆದಿಲ್ಲ. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಬಗ್ಗೆ ಮನವಿ ಮಾಡುತ್ತಲೇ ಬಂದಿದ್ದರೂ ಸರಕಾರ ಕ್ರಮ ಶೂನ್ಯ.

ನಿವೃತ್ತಿ ಹೆಚ್ಚುತ್ತಿದೆ
ಪ್ರತಿ ವರ್ಷ ಹಲವು ಶಿಕ್ಷಕರು ನಿವೃತ್ತರಾಗುತ್ತಾರೆ. ಹೊಸ ನೇಮಕ ನಡೆಯದೆ ಹುದ್ದೆ ಗಳು ಖಾಲಿ ಉಳಿಯುತ್ತಿವೆ. ಹೆಚ್ಚುವರಿ ಶಿಕ್ಷಕರನ್ನು ಕಡಿಮೆ ಶಿಕ್ಷಕರಿರುವ ಶಾಲೆ ಗಳಿಗೆ ಕಳುಹಿಸುವ “ಹೊಂದಾಣಿಕೆ’ ನೀತಿ ಅನುಸರಿಸಲಾಗುತ್ತಿದೆ ವಿನಾ ಹೊಸ ನೇಮಕಾತಿಗೆ ಸರಕಾರ ಮನಸ್ಸು ಮಾಡು ತ್ತಿಲ್ಲ ಎಂಬುದು ಶಿಕ್ಷಕರ ಆರೋಪ.

ಸ್ವಾತಂತ್ರ್ಯ ಪೂರ್ವದ ಶಾಲೆಗಳು
ಸ್ವಾತಂತ್ರ್ಯ ಪೂರ್ವದಲ್ಲಿ ಸರಕಾರಿ ಶಾಲೆಗಳಿರದ ಅಥವಾ ದೂರ ಇದ್ದ ಸಂದರ್ಭದಲ್ಲಿ ಸ್ಥಳೀಯರೇ ಸೇರಿ ಸ್ಥಾಪಿಸಿರುವ ಈ ಶಾಲೆಗಳು ಬಳಿಕ ಸರಕಾರದ ಅನುದಾನದಿಂದ ನಡೆ ಯುತ್ತಿವೆ. ಸರಕಾರಿ ಶಾಲೆಗಳಂತೆ ಇಲ್ಲಿಯೂ ಶಿಕ್ಷಣ ಸಂಪೂರ್ಣ ಉಚಿತ. ಆದರೆ ಸರಕಾರಿ ಶಾಲೆಗಳಿಗಿರುವ ಸವಲತ್ತು ಮಾತ್ರ ನೀಡಲಾಗುತ್ತಿಲ್ಲ. ಸರಕಾರಿ ನಿಯಮದ ಪ್ರಕಾರ ಸರಕಾರಿ ಶಾಲೆಗಳಲ್ಲಿ 60 ಮಕ್ಕಳಿಗೆ ಐವರು ಶಿಕ್ಷಕರನ್ನು, ಅನುದಾನಿತ ಶಾಲೆಗಳಲ್ಲಿ 40 ಮಕ್ಕಳಿಗೆ ಓರ್ವ ಶಿಕ್ಷಕರನ್ನು ನೀಡಲಾಗು ತ್ತಿದೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಲು ಈ ನೀತಿಯೇ ಕಾರಣ ಎನ್ನುತ್ತಾರೆ ಶಿಕ್ಷಕರು.

ದ.ಕ. 8, ಉಡುಪಿ 19 ಶಾಲೆಗಳಲ್ಲಿ ಶಿಕ್ಷಕರಿಲ್ಲ
ರಾಜ್ಯದ ಒಟ್ಟು ಅನುದಾನಿತ ಶಾಲೆಗಳ ಪೈಕಿ ಶೇ. 50ರಷ್ಟು ಶಾಲೆಗಳು ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನಲ್ಲಿವೆ. ದ.ಕ.ದಲ್ಲಿ ಒಟ್ಟು 224 ಶಾಲೆಗಳಿದ್ದು, 2,500 ಹುದ್ದೆಗಳಿವೆ. ಆದರೆ ಪ್ರಸ್ತುತ ಇರುವುದು 1,250 ಶಿಕ್ಷಕರು ಮಾತ್ರ. ಜಿಲ್ಲೆಯ ಮೂಡುಬಿದಿರೆ ಮತ್ತು ಮಂಗಳೂರು ಉತ್ತರ ವಲಯದ 8 ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಸ್ಥಳೀಯ ಅರ್ಹರನ್ನು ಗೌರವಧನದ ಆಧಾರದ ಮೇಲೆ ನೇಮಿಸಲಾಗಿದೆ ಎಂದು ಅನುದಾನಿತ ಪ್ರಾ.ಶಾ.ಶಿ. ಸಂಘದ ದ.ಕ. ಜಿಲ್ಲಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ತಿಳಿಸಿದ್ದಾರೆ.

Advertisement

ಉಡುಪಿಯಲ್ಲಿ ಒಟ್ಟು 167 ಶಾಲೆಗಳಿದ್ದು, ಸರಕಾರದಿಂದ ನೇಮಕಗೊಂಡ 348 ಶಿಕ್ಷಕರಿದ್ದಾರೆ. 19 ಶಾಲೆಗಳಲ್ಲಿ ಇದೇ ಸ್ಥಿತಿಯಿದ್ದು, ಗೌರವ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಸಂಘದ ಉಡುಪಿ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ಬೆಂಗಳೂರು, ಉಡುಪಿ, ದ.ಕ.ಗಳಲ್ಲಿ ಅನುದಾನಿತ ಶಾಲೆಗಳು ಹೆಚ್ಚಿದ್ದು, ಶಿಕ್ಷಕರ ಕೊರತೆ ಜಾಸ್ತಿ ಇದೆ. 20 ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಹೆಚ್ಚುವರಿ ಶಿಕ್ಷಕರನ್ನು ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಸರಕಾರ ಹೇಳುತ್ತಿದೆ. ಹಲವಾರು ಬಾರಿ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದ್ದರೂ, ಪ್ರಯೋಜನವಾಗಿಲ್ಲ.
-ರವಿಕುಮಾರ್‌, ರಾಜ್ಯ ಕಾರ್ಯದರ್ಶಿ, ಕ.ರಾ. ಅ. ಪ್ರಾ. ಶಾಲಾ ಶಿಕ್ಷಕರ ಸಂಘ

ಅನುದಾನಿತ ಶಾಲೆಗಳಿಗೆ ಶಿಕ್ಷಕರ ಬೇಡಿಕೆ ಪ್ರಸ್ತಾವನೆಯು ಆಯಾ ಶಾಲೆಗಳ ಆಡಳಿತ ಮಂಡಳಿ ಕಡೆಯಿಂದ ಬಂದಾಗ ಇಲಾಖೆ ಸೂಕ್ತ ಕ್ರಮ ಕೈಗೊಂಡು ನೇಮಕಾತಿ ನಡೆಸುತ್ತಿದೆ. 20 ವರ್ಷಗಳಿಂದ ನೇಮಕಾತಿ ಆಗಿಲ್ಲ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ.
-ಡಾ| ಜಗದೀಶ್‌, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next