ಮಸ್ಕಿ: “ಕಾರ್ಮಿಕರ ಪಾಲಿನ ಮಿತ್ರ’ ಎಂದೇ ಬಿಂಬಿತವಾದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಬೊಕ್ಕಸವನ್ನೂ ಈ ಬಾರಿ ಆರ್ಥಿಕ ಬರ ಕಾಡಿದ್ದು, ಬರೋಬ್ಬರಿ 600 ಕೋಟಿ ರೂ. ಕೂಲಿ ಮೊತ್ತ ಪಾವತಿಯಾಗಲು ಬಾಕಿಯಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಳೆ ತಪ್ಪಿಸಲು, ವೈಯಕ್ತಿಕ ಕಾಮಗಾರಿಗಳ ಮೂಲಕ ಮನೆ- ಜಮೀನು, ಜನ-ಜಾನುವಾರುಗಳ ರಕ್ಷಣೆಗೂ ಈ ಯೋಜನೆ ನೆರವಾಗಿದೆ. ಆದರೆ ಕಳೆದ 6 ತಿಂಗಳಿಂದ ಈ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಯ ಕೂಲಿ ಸರಿಯಾಗಿ ಪಾವತಿ ಆಗುತ್ತಿಲ್ಲ.
2022-23ನೇ ಸಾಲಿನಲ್ಲಿ ಕೆಲಸ ನಿರ್ವಹಿಸಿದ ಕೂಲಿ ಮೊತ್ತ 142.72 ಕೋ. ರೂ. ಬಾಕಿ ಇದ್ದರೆ, ಪ್ರಸಕ್ತ ವರ್ಷದ 2023-24ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ಕೂಲಿ ಮೊತ್ತ 457.28 ಕೋ. ರೂ.ಗಳಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.
12 ಕೋಟಿ ಮಾನವ ದಿನ
ರಾಜ್ಯದ 31 ಜಿಲ್ಲೆಗಳಲ್ಲಿ 79 ಲಕ್ಷ ನರೇಗಾ ಉದ್ಯೋಗಕಾರ್ಡ್‌ಗಳಿದ್ದು, 1.80 ಕೋಟಿ ಕಾರ್ಮಿಕರಿದ್ದಾರೆ. ಇದರಲ್ಲಿ ಪ್ರಸಕ್ತ ವರ್ಷ 45.54 ಲಕ್ಷ ಉದ್ಯೋಗ ಕಾರ್ಡ್‌ಗಳು ಚಾಲ್ತಿ ಯಲ್ಲಿದ್ದು, 84.94 ಲಕ್ಷ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಪ್ರಸಕ್ತ 2023-24ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು 12 ಕೋಟಿ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿದ್ದು, ಬಹುತೇಕ ಜಿಲ್ಲೆಗಳಿಗೆ ನೀಡಿದ್ದ ಗುರಿ ಪೂರ್ಣಗೊಂಡಿದೆ. ಇದಕ್ಕಾಗಿ 100 ದಿನಗಳಿಗೆ ನಿಗದಿಯಾಗಿದ್ದ ಮಾನವ ದಿನಗಳ ಸೃಜನೆಯನ್ನು 150 ದಿನಗಳಿಗೆ ಹೆಚ್ಚಿಸುವಂತೆ ಇತ್ತೀಚೆಗೆ ಪ್ರಧಾನಿಯನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಆದರೆ ಇದರ ಬೆನ್ನಲ್ಲೇ ಈಗ ಇಲ್ಲಿಯವರೆಗೂ ಸೃಜನೆಯಾದ ಮಾನವ ದಿನಗಳಿಗೆ ಕೂಲಿ ಹಣವೇ ಪಾವತಿಯಾಗಿಲ್ಲ ಎನ್ನುವ ಸಂಗತಿಯೇ ಈಗ ಜಿಲ್ಲಾವಾರು ಕಾರ್ಮಿಕ ವಲಯದಲ್ಲಿ ಆತಂಕ ಹೆಚ್ಚಿಸಿದೆ. ಕೇವಲ ಕಾರ್ಮಿಕರು ಮಾತ್ರವಲ್ಲ; ಜಿಲ್ಲಾ ಪಂಚಾಯತ್ ಸಿಇಒಗಳು ಕೂಡ ಈಗ ದಿಗಿಲು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ವರ್ಷ ನಿಗದಿತ ಗುರಿಗಿಂತಲೂ ಅಧಿಕ ಮಾನವ ದಿನಗಳ ಸೃಜನೆ ಮೂಲಕ ಕೂಲಿ ಹಣ ಪಾವತಿಯಲ್ಲಿ ಮುಂದೆ ಇರುತ್ತಿದ್ದ ಹಲವು ಜಿಲ್ಲೆಗಳು ಈ ಬಾರಿಯ ಅನುದಾನ ಬಿಡುಗಡೆ ಅಂಕಿ-ಸಂಖ್ಯೆಯನ್ನು ಗಮನಿಸಿ ಕಾರ್ಮಿಕರ ಕೈಗೆ ಕೂಲಿ ಕೆಲಸ ನೀಡುವುದಕ್ಕೆ ಹಿಂಜರಿಯುತ್ತಿವೆ. ಬರ ನಿರ್ವಹಣೆಗೂ ಇದರಿಂದ ತೊಂದರೆಯಾಗಿದೆ ಎನ್ನುವ ಜಿ.ಪಂ. ಸಿಇಒಗಳ ಹೇಳಿಕೆ ಬೆನ್ನಲ್ಲೇ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಪಂಚಾಯತ್ ರಾಜ್ ಇಲಾಖೆ ಎರಡು ಬಾರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಯಾಕಿಷ್ಟು ತಾತ್ಸಾರ?
ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹಣವೇ 600 ಕೋಟಿ ರೂ.ಗೂ ಹೆಚ್ಚು ಬಾಕಿ ಉಳಿದಿದೆ. ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗಿದೆ. ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ರಾಜ್ಯದ ಬಗ್ಗೆ ಕೇಂದ್ರಕ್ಕೆ ಯಾಕಿಷ್ಟು ತಾತ್ಸಾರ ತಿಳಿಯುತ್ತಿಲ್ಲ.
-ಪ್ರಿಯಾಂಕ್ ಖರ್ಗೆ, ಸಚಿವರು