ಸೊಲ್ಲಾಪುರ: ಜಿಲ್ಲೆಯಲ್ಲಿ ಸುಮಾರು 60 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು, ಇದರಿಂದ ರಸ್ತೆ ಸಂಚಾರ ಸುಗಮವಾಗಲಿದೆ ಎಂದು ಕೇಂದ್ರದ ರಸ್ತೆ-ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಸೊಲ್ಲಾಪುರ-ವಿಜಯಪುರ, ಸೊಲ್ಲಾಪುರ-ಸಾಂಗಲಿ, ಸೊಲ್ಲಾಪುರ-ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆಯನ್ನು ಗಡ್ಕರಿ ಅವರು ರಿಮೋಟ್ ಕಂಟ್ರೋಲ್ ಬಟನ್ ಒತ್ತುವ ಮೂಲಕ ಕೈಗೊಂಡು ಮಾತನಾಡಿದರು.
ರಸ್ತೆಗಳ ಅಭಿವೃದ್ಧಿಯೊಂದಿಗೆ ಭವಿಷ್ಯದಲ್ಲಿ ನೀರಿನ ಮೂಲ ಸ್ಥಳಗಳನ್ನು ಗುರುತಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈವರೆಗೆ ಮಹಾರಾಷ್ಟ್ರದಲ್ಲಿ 8017 ಕೋಟಿ ರೂ. ವೆಚ್ಚದಲ್ಲಿ 250 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸೋಮವಾರ 164 ಕೋಟಿ ರೂ.ಗಳ 42 ಕಿ.ಮೀ ಉದ್ದದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಇಥೆನಾಲ್ ತಯಾರಿಕೆಗೆ ಒತ್ತು ಕೊಡಬೇಕು. ಇಲ್ಲವಾದರೆ ಸಕ್ಕರೆ ಕಾರ್ಖಾನೆಗಳ ಭವಿಷ್ಯ ಚಿಂತಾಜನಕವಾಗುತ್ತದೆ. ಬಯೋ ಇಥೆನಾಲ್ ಮೇಲೆ ಬಯೋ ಇಂಜಿನ್ ನಡೆಯುತ್ತದೆ. ಹೀಗಾಗಿ ಈ ಇಂಜಿನ್ ವಾಹನಗಳು ಭಾರತದಲ್ಲಿ ಬರಲಿವೆ. ಇದರಿಂದ ಪೆಟ್ರೋಲ್ ಅವಶ್ಯಕತೆ ಬೀಳುವದಿಲ್ಲ. ಬರುವ ಕಾಲ ಗ್ರೀನ್ ಹೈಡ್ರೋಜನ್ ಕಾಲವಾಗಿದ್ದರಿಂದ ಕೊ-ಜನರೇಶನ್‌ನಲ್ಲಿ ನಿರ್ಮಾಣವಾಗಲಿದೆ. ದೂಷಿತ ನೀರಿನಿಂದ ಕೋ-ಹೈಡ್ರೋಜನ್ ನಿರ್ಮಾಣವಾಗುವುದರಿಂದ ಕಾರ್ಖಾನೆಗಳ ಅಸ್ಥಿತ್ವ ಉಳಿಯುತ್ತವೆ. ಎಲೆಕ್ಟ್ರಿಕ್ ಬಸ್ ಮತ್ತು ಕಾರುಗಳು ಹೈವೇ ಮೇಲೆ ಕೆಬಲ್ ಮೂಲಕ ಸಂಚರಿಸಲಿವೆ. ಇಲ್ಲಿಯ ಬೋರಾಮಣಿ ವಿಮಾನ ನಿಲ್ದಾಣಕ್ಕೆ ತಾಂತ್ರಿಕ ಸಮಸ್ಯೆ ಈಗಾಗಲೇ ದೂರವಾಗಿದ್ದು, ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ದತ್ತಾತ್ರೇಯ ಭರಣೆ, ಸಂಸದ ಡಾ| ಜಯಸಿದ್ಧೇಶ್ವರ ಮಹಾ ಸ್ವಾಮೀಜಿ, ಮಾಢಾ ಸಂಸದ ರಣಜೀತ್‌ಸಿಂಗ್ ನಾಯಿಕ-ನಿಂಬಾಳಕರ, ವಿಜಯಪುರ ಸಂಸದ ರಮೇಶ ಜಿಗಜಣಗಿ, ಶಾಸಕ ಶ್ರೀರಂಜಿತ್‌ಸಿಂಗ್ ಮೊಹಿತೆ-ಪಾಟೀಲ, ಮಾಢಾ ಶಾಸಕ ಬಬನರಾವ್ ಶಿಂಧೆ, ದಕ್ಷಿಣ ಸೊಲ್ಲಾಪುರ ಶಾಸಕ ಸುಭಾಷ ದೇಶಮುಖ, ಉತ್ತರ ಸೊಲ್ಲಾಪುರ ಶಾಸಕ ವಿಜಯಕುಮಾರ ದೇಶಮುಖ, ಪಂಢರಪುರ ಶಾಸಕ ಸಮಾಧಾನ ಅವತಾಡೆ, ಅಕ್ಕಲಕೋಟ ಶಾಸಕ ಸಚಿನ್ ಕಲ್ಯಾಣಶೆಟ್ಟಿ, ರಾಮ ಸಾತಪುತೆ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನರಲ್ ಮ್ಯಾನೇಜರ್ ಅಂಶುಮಣಿ ಶ್ರೀವಾಸ್ತವ, ಜಿಲ್ಲಾಧಿಕಾರಿ ಮಿಲಿಂದ ಶಂಭರಕರ, ಪೊಲೀಸ್ ಅಧಿಧೀಕ್ಷಕಿ ತೇಜಸ್ವಿನಿ ಸಾತಪುತೆ, ಜಿಪಂ ಸಿಇಒ ದಿಲೀಪ ಸ್ವಾಮಿ, ಪೊಲೀಸ್ ಆಯುಕ್ತ ಹರೀಶ ವೈಜಾಲ್, ಪಾಲಿಕೆ ಆಯುಕ್ತ ಪಿ.ಶಿವಶಂಕರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿರ್ದೇಶಕ ಸುಹಾಸ ಚಿಟನೀಸ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಸಂತೋಷ ಶೇಲಾರ ಈ ಸಂದರ್ಭದಲ್ಲಿದ್ದರು.