ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಸರಕಾರ “ಅನಗತ್ಯ ವೆಚ್ಚ’ ಕಡಿತಕ್ಕೆ ತೀರ್ಮಾನಿಸಿದ್ದು, ಈ ಐದು ಯೋಜನೆಗಳ ಅನುಷ್ಠಾನಕ್ಕೆ ಒಟ್ಟು 60 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಸಂಪುಟ ಸಭೆಯಲ್ಲಿ ಅಂದಾ ಜಿಸಲಾಗಿದೆ.
ಅನಗತ್ಯ ವೆಚ್ಚ, ಸಂಪನ್ಮೂಲ ಕ್ರೋಡೀಕರಣ, ಯೋಜನೆಗಳ ಕಾಸ್ಟ್ ಎಸ್ಕಲೇಷನ್ ಹೆಸರಿನಲ್ಲಿ ನಡೆಯುವ ಅಂದಾದುಂದಿ ಸೇರಿ ಬೊಕ್ಕಸಕ್ಕೆ ಹೊರೆ ಯಾಗುವ ಎಲ್ಲ ಮಾರ್ಗಗಳನ್ನು ಮುಚ್ಚುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಒಂದು ಆರ್ಥಿಕ ವರ್ಷಕ್ಕೆ ಈ ಐದು ಯೋಜನೆಗಳ ಜಾರಿಗಾಗಿ ಸುಮಾರು 60 ಸಾವಿರ ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಶಕ್ತಿ ಯೋಜನೆ ಹೊರತುಪಡಿಸಿ ಉಳಿದೆಲ್ಲವುಗಳ ಜಾರಿಗೆ ಸರಕಾರ ಬುದ್ಧಿವಂತಿಕೆಯಿಂದ ಅವಕಾಶ ಕಲ್ಪಿಸಿಕೊಂಡಿದೆ. ಜತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 4 ತಿಂಗಳು ಈಗಾಗಲೇ ಕಳೆದು ಹೋಗಿರು ವುದರಿಂದ ಸುಮಾರು 20 ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಅಂದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 40 ಸಾವಿರ ಕೋಟಿ ರೂ. ಮಾತ್ರ ಇವುಗಳಿಗಾಗಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ವೆಚ್ಚ ಹೆಚ್ಚಳಕ್ಕೆ ಕತ್ತರಿ
ಈ ಯೋಜನೆಗಳ ಜಾರಿ ಹಿನ್ನೆಲೆ ಯಲ್ಲಿ ಆರ್ಥಿಕವಾಗಿ ಕೆಲವು ಬಿಗಿ ನಿಲುವುಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಆಗಬಹುದೆಂದು ಸಂಪುಟ ಸಭೆಯಲ್ಲಿ ಚರ್ಚೆ ನಡೆಸ ಲಾಗಿದೆ. ನೂರಾರು ಕೋ. ರೂ. ಮೌಲ್ಯದ ಯೋಜನೆಗಳ ಜಾರಿ ಸಂದರ್ಭದಲ್ಲಿ ವಾರ್ಷಿಕವಾಗಿ ಅಥವಾ ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟು ಯೋಜನಾ ವೆಚ್ಚ ಹೆಚ್ಚಳ ಮಾಡುವುದರಿಂದಲೇ ಹಣಕಾಸು ವ್ಯವಸ್ಥೆ ಪೋಲಾಗುತ್ತಿದೆ. ಇಂಥವು ಗಳಿಗೆ ಕಡಿವಾಣ ಹಾಕುವ ಮೂಲಕ ಆರ್ಥಿಕ ಹೊಂದಾಣಿಕೆ ಸಾಧಿಸುವ ಬಗ್ಗೆ ಚರ್ಚೆಯಾಗಿದೆ.
ಸರಕಾರದ ವಿವಿಧ ಇಲಾಖೆಗಳಲ್ಲಿ ಅನುಪಯುಕ್ತ ಯೋಜನೆಗಳು ಇನ್ನೂ ಚಾಲ್ತಿಯಲ್ಲಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯ ವರೆಗೂ ಅದು ಜಾರಿಯಲ್ಲಿದೆ. ವಾಸ್ತವ ದಲ್ಲಿ ಅಂಥವುಗಳಿಂದ ಯಾರಿಗೂ ಪ್ರಯೋಜನವಿಲ್ಲ. ಆದರೆ ಇಲಾಖಾವಾರು ಅನುದಾನ ವನ್ನು ನೀಡಲಾಗಿರುತ್ತದೆ. ಇಂಥ ಪ್ರಯೋ ಜನಕ್ಕೆ ಬಾರದ ಯೋಜನೆಗಳಿಗೆ ಹಂಚಿಕೆ ಮಾಡುವ ಹಣವನ್ನು ಸ್ಥಗಿತಗೊಳಿಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವವಾ ಗಿದೆ. ಇದರಿಂದ 10,000 ಕೋ. ರೂ. ಉಳಿತಾಯ ನಿರೀಕ್ಷಿಸಲಾಗಿದೆ.
ತೆರಿಗೆ ಹೆಚ್ಚಳ ಅನಿವಾರ್ಯ
ಆದರೆ ಈ ಎಲ್ಲ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬ ಪ್ರಶ್ನೆಗೆ ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿಲ್ಲ. ಬಜೆಟ್‌ನಲ್ಲಿ ಈ ಬಗ್ಗೆ ವಿವರ ನೀಡುತ್ತೇವೆ ಎಂದು ಶಿವಕುಮಾರ್ ಅನೌಪಚಾರಿಕವಾಗಿ ಉತ್ತರಿಸಿದ್ದಾರೆ. ಆದರೆ ಸರಕಾರದ ಮೂಲಗಳ ಪ್ರಕಾರ ತೆರಿಗೆಗಳ ಹೆಚ್ಚಳ ಅನಿವಾರ್ಯವಾಗಲಿದೆ.
Related Articles
ಪ್ರತಿ ಕುಟುಂಬಕ್ಕೆ ಲಕ್ಷ ರೂ.
ಹಿರಿಯ ಸಚಿವರೊಬ್ಬರ ಪ್ರಕಾರ, ಸರಕಾರ ನೀಡುವ ಈ ಐದು ಯೋಜನೆಗಳ ಜತೆಗೆ ಇನ್ನೂ ಕೆಲವು ಸರಕಾರಿ ಸೌಲಭ್ಯಗಳನ್ನು ಲೆಕ್ಕ ಹಾಕಿದರೆ ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ ಸರಕಾರದಿಂದ 1 ಲಕ್ಷ ರೂ. ಸಂದಾಯವಾಗುತ್ತದೆ. ಸರಕಾರ ಜಾರಿಗೆ ತಂದ ಈ ಕಲ್ಯಾಣ ಯೋಜನೆ ಗಳಿಂದ ಅಂತಿಮವಾಗಿ ಜನತೆಗೆ ಅನುಕೂಲವಾಗುತ್ತದೆ. ಈಗಿನ ಬೆಲೆ ಏರಿಕೆ ಯುಗದಲ್ಲಿ ಸರಕಾರದ ಈ ನಿಲುವು ಹೆಚ್ಚು ಜನಪರವಾಗಿದೆ ಎಂದಿದ್ದಾರೆ.
ಗ್ಯಾರಂಟಿ: ಬಿಜೆಪಿಯ ಕಾಲೆಳೆದ ಕಾಂಗ್ರೆಸ್
ನಳಿನ್‌ಕುಮಾರ್ ಕಟೀಲು ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ, ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಫ್ರೀ, ಶೋಭಾ ಕರಂದ್ಲಾಜೆ ಅವರೇ ನಿಮಗೂ ಪ್ರಯಾಣ ಫ್ರೀ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‌ನ 5 ಗ್ಯಾರಂಟಿ ಜಾರಿ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಛೇಡಿಸಿದೆ. ಸಿ.ಟಿ.ರವಿ ಅವರೇ ನಿಮ್ಮ ಮನೆಯವರಿಗೂ 2,000 ರೂ. ಫ್ರೀ ಹಾಗೂ ಬಜರಂಗ ದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ (ಪದವಿ ಪಡೆದಿದ್ದವರಿದ್ರೆ ಮಾತ್ರ), ಇದು ನಮ್ಮ ಗ್ಯಾರಂಟಿ ಎಂದು ಹೇಳಿದೆ.