Advertisement

ನಾಮಫ‌ಲಕದಲ್ಲಿ ಶೇ.60 ಕನ್ನಡ ಕಡ್ಡಾಯ

12:44 AM Oct 20, 2019 | Lakshmi GovindaRaju |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಅಂಗಡಿ, ಹೋಟೆಲ್‌ ಹಾಗೂ ವಾಣಿಜ್ಯ ಕಟ್ಟಡ ಸೇರಿದಂತೆ ವಿವಿಧ ಉದ್ದಿಮೆಗಳ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಕಾಣುವಂತೆ ನವೆಂಬರ್‌ 1ರ ಒಳಗಾಗಿ ನಾಮಫ‌ಲಕಗಳನ್ನು ಬದಲಾಯಿಸಬೇಕು ಎಂದು ಬಿಬಿಎಂಪಿ ಆಯುಕ್ತರಾದ ಬಿ.ಎಚ್‌. ಅನಿಲ್‌ಕುಮಾರ್‌ ಆದೇಶ ಮಾಡಿದ್ದಾರೆ.

Advertisement

ಎಲ್ಲ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸಬೇಕು. ಒಂದೊಮ್ಮೆ ಕನ್ನಡ ಅಳವಡಿಕೆಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ, ಅವರಿಗೆ ನೀಡಿರುವ ಪರವಾನಗಿ ರದ್ದುಪಡಿಸಲಾಗುವುದು. ಈ ಹಿಂದೆಯೇ ಪರವಾನಗಿ ಪಡೆದವರು ಸಹ ನ. 1ರೊಳಗೆ ನಾಮಫ‌ಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡೀಕರಣಕ್ಕೆ ಒತ್ತು ನೀಡಿವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಗೆ ಕಡ್ಡಾಯ ಕನ್ನಡ ಬಳಕೆಗೆ ಸೂಚಿನೆ ನೀಡಿದೆ. ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಉದ್ದಿಮೆಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲೇ ಉದ್ದಿಮೆದಾರರಿಗೆ ನಾಮಫ‌ಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಸೂಚಿಸುವಂತೆಯೂ ನಿರ್ದೇಶನ ನೀಡಲಾಗಿದೆ.

2017ರಲ್ಲೇ ಸುತ್ತೋಲೆ ಹೊರಡಿಸಿದ್ದ ಪಾಲಿಕೆ: ನಾಮಫ‌ಲಕದಲ್ಲಿ ಶೇ.60ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಡಬೇಕೆಂದು 2017ರಲ್ಲೇ ಬಿಬಿಎಂಪಿ ಸುತ್ತೋಲೆ ಹೊರಡಿಸಿತ್ತು. ಕನ್ನಡಕ್ಕೆ ಆದ್ಯತೆ ನೀಡದ ಅಂಗಡಿ, ಉದ್ದಿಮೆಗಳಿಗೆ ಪರವಾನಗಿಯನ್ನು ರದ್ದುಪಡಿಸುವುದಾಗಿಯೂ ಆದೇಶಿಸಿತ್ತು. ಆದರೆ, ಈ ಸುತ್ತೋಲೆಯನ್ನು ಕೆಲವು ಅಂಗಡಿ ಮಾಲೀಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ ಬಿಬಿಎಂಪಿ ಆದೇಶಕ್ಕೆ ತಡೆ ನೀಡಿತ್ತು.

ಅಲ್ಲದೆ, ಈ ರೀತಿಯ ಆದೇಶ ಮಾಡಲು ಕಾನೂನಲ್ಲಿ ಅವಕಾಶವಿಲ್ಲ, ಹೀಗಾಗಿ, ಈ ಆದೇಶ ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿತ್ತು. ಈ ವೇಳೆ ಬಿಬಿಎಂಪಿ ತನ್ನ ಸುತ್ತೋಲೆಯನ್ನು ವಾಪಸ್‌ ಪಡೆದುಕೊಂಡಿತ್ತು. ನಂತರ ನಾಮಫ‌ಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕವಾಗಿ ಅವಕಾಶ ತರಲು 2018ರಲ್ಲಿ ನೂತನ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ ಸಿದ್ಧಪಡಿಸಿದೆ.

Advertisement

ನಿಯಮದಿಂದ ವಿನಾಯಿತಿ ನೀಡಲ್ಲ: “ನಗರದಲ್ಲಿನ ಅಂಗಡಿ, ಹೋಟೆಲ್‌ ಹಾಗೂ ವಾಣಿಜ್ಯ ಕಟ್ಟಡಗಳು ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ಶೇ.60ರಷ್ಟು ಕಡ್ಡಾಯ ಕನ್ನಡ ಬಳಕೆ ನ.1ರಿಂದ ಜಾರಿ ಬರುವಂತೆ ಆದೇಶ ಮಾಡಲಾಗಿದೆ. ಕನ್ನಡಕ್ಕೆ ಆದ್ಯತೆ ನೀಡುವುದಕ್ಕೆ ಕಾಲಾವಕಾಶ ನೀಡಲಾಗುವುದು. ಆದರೆ, ಈ ನಿಯಮದಿಂದ ವಿನಾಯಿತಿ ನೀಡುವುದಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಪಾಲಿಕೆ ಬೈಲಾ ಮೂಲಕ ಅವಕಾಶ: ಬಿಬಿಎಂಪಿಯ ಹೊಸ “ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ-2018’ರಲ್ಲಿ ನಾಮಫ‌ಲಕದಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಪ್ರಥಮ ಆದ್ಯತೆಯಲ್ಲಿ ದಪ್ಪ ಅಕ್ಷರಗಳಲ್ಲಿ ಕನ್ನಡದಲ್ಲಿ ನಾಮಫ‌ಲಕ ಅಳವಡಿಸಬೇಕು.

ಉಳಿದ ಶೇ.40ರಷ್ಟು ಜಾಗದಲ್ಲಿ ಅಂಗಡಿ, ಮಳಿಗೆ, ಮಾಲ್‌ ಯಾವುದೇ ವಾಣಿಜ್ಯ ಕೇಂದ್ರಗಳ ಮಾಲೀಕರು ಇತರೆ ಭಾಷೆಯಲ್ಲಿ ತಮ್ಮ ನಾಮಫ‌ಲಕ ಪ್ರದರ್ಶಿಸಿಕೊಳ್ಳಬಹುದು. ಆದರೆ, ಎಲ್ಲ ಭಾಷೆಗಳಿಗಿಂತ ಕನ್ನಡದಲ್ಲಿ ದೊಡ್ಡ ಅಕ್ಷರಗಳಲ್ಲಿ ನಾಮಫ‌ಲಕ ಇರುವಂತೆ ನೋಡಿಕೊಳ್ಳಬೇಕು. ಕನ್ನಡ ನಾಮಫ‌ಲಕವಿಲ್ಲದಿದ್ದರೆ ಮಳಿಗೆಗಳಿಗೆ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಬೈಲಾದಲ್ಲಿ ಉಲ್ಲೇಖವಿದೆ.

ನಗರದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಉದ್ದೇಶದಿಂದ ನಾಮಫ‌ಲಕದಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಕಡ್ಡಯ ನಿಯಮ ರೂಪಿಸಲಾಗಿದೆ.
-ಎಂ.ಗೌತಮ್‌ ಕುಮಾರ್‌, ಮೇಯರ್‌

ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ನೇ ಸಾಲಿನಲ್ಲಿ ಅ.19ರವರೆಗೆ ಎಂಟು ವಲಯದಲ್ಲಿ ಒಟ್ಟು 51, 482 ಉದ್ದಿಮೆ ಪರವಾನಗಿ ನೀಡಲಾಗಿದೆ.
-ಡಾ.ವಿಜಯೇಂದ್ರ, ಪಾಲಿಕೆ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next