Advertisement

ಗೋವಾದಲ್ಲಿ ಶಾಸಕರು ಪಕ್ಷ ಬದಲಾಯಿಸಿದ್ದು ಭಾರತದಲ್ಲೇ ದಾಖಲೆ !

03:57 PM Jan 23, 2022 | Team Udayavani |

ಪಣಜಿ: ಕೇವಲ 40 ವಿಧಾನಸಭಾ ಸದಸ್ಯ ಬಲ, ೨ ಲೋಕಸಭಾ ಸದಸ್ಯರನ್ನು ಹೊಂದಿರುವ ಗೋವಾ ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ‘ಸಾಟಿಯಿಲ್ಲದ’ ದಾಖಲೆ ನಿರ್ಮಿಸಿದೆ ಎಂದು ಸಂಘಟನೆಯೊಂದು ವರದಿ ಮಾಡಿದೆ.

Advertisement

ರಾಜ್ಯ ವಿಧಾನಸಭೆಯ ಒಟ್ಟು ಬಲದ ಶೇಕಡಾ 60 ರಷ್ಟಿರುವ ಗೋವಾದ 24 ಶಾಸಕರು ಕಳೆದ ಐದು ವರ್ಷಗಳಲ್ಲಿ ಪಕ್ಷಗಳನ್ನು ಬದಲಾಯಿಸಿದ್ದಾರೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ತಿಳಿಸಿದೆ.

”ಗೋವಾದಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.ಪ್ರಸ್ತುತ ವಿಧಾನಸಭೆಯ ಐದು ವರ್ಷಗಳ ಅವಧಿಯಲ್ಲಿ (2017-2022), 24 ಶಾಸಕರು ತಮ್ಮ ಪಕ್ಷಗಳನ್ನು ಬದಲಾಯಿಸಿದ್ದಾರೆ, ಇದು ಸದನದ ಒಟ್ಟು ಬಲದ ಶೇಕಡಾ 60 ರಷ್ಟಿದೆ. ಇದು ಭಾರತದಲ್ಲಿ ಬೇರೆಲ್ಲಿಯೂ ಸಂಭವಿಸಿಲ್ಲ. ಮತದಾರರ  ಸ್ಪಷ್ಟ ಆದೇಶದ ಸಂಪೂರ್ಣ ಅಗೌರವದ ಪ್ರತಿಬಿಂಬ ಇದು” ಎಂದು ಎಡಿಆರ್ ಹೇಳಿದೆ.

24 ಶಾಸಕರ ಪಟ್ಟಿಯಲ್ಲಿ ವಿಶ್ವಜಿತ್ ರಾಣೆ, ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ್ ಸೋಪ್ಟೆ ಅವರು 2017 ರಲ್ಲಿ ಕಾಂಗ್ರೆಸ್ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.

2019 ರಲ್ಲಿ ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಜಿಗಿದಿದ್ದರು. ಅವರಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕಾವ್ಲೇಕರ್ (ಕ್ವಿಪೆಮ್ ಕ್ಷೇತ್ರ) ಸೇರಿದ್ದರು.ಬಿಜೆಪಿಗೆ ಸೇರಿದ ಇತರ ಕಾಂಗ್ರೆಸ್ ಶಾಸಕರೆಂದರೆ – ಜೆನ್ನಿಫರ್ ಮೊನ್ಸೆರೆಟ್ (ತಲೆಗಾವೊ), ಫ್ರಾನ್ಸಿಸ್ಕೊ ​​​​ಸಿಲ್ವೇರಿಯಾ (ಸೇಂಟ್ ಆಂಡ್ರೆ), ಫಿಲಿಪ್ ನೆರಿ ರೋಡ್ರಿಗಸ್ (ವೆಲಿಮ್), ವಿಲ್ಫ್ರೆಡ್ ನಜರೆತ್ ಮೆನಿನೊ ಡಿಸಾ (ನುವೆಮ್), ಕ್ಲಾಫಾಸಿಯೊ ಡಯಾಸ್ (ಕಂಕೋಲಿಮ್), ಆಂಟೋನಿಯೊ ಕ್ಯಾರೊನೊ ಫೆರ್ನಾಂಡಿಸ್ (ಸೇಂಟ್ ಕ್ರೂಜ್), ನೀಲಕಾಂತ್ ಹಲರ್ಕರ್ (ಟಿವಿಮ್), ಇಸಿಡೋರ್ ಫೆರ್ನಾಂಡಿಸ್ (ಕಾನ್ ಕೋನಾ), ಅಟಾನಾಸಿಯೊ ಮಾನ್ಸೆರೆಟ್ (ಮನೋಹರ್ ಪರಿಕ್ಕರ್ ಅವರ ನಿಧನದ ನಂತರ 2019 ರಲ್ಲಿ ಪಣಜಿ ಚುನಾವಣೆಯಲ್ಲಿ ಗೆದ್ದವರು).

Advertisement

ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಶಾಸಕರಾದ ದೀಪಕ್ ಪೌಸ್ಕರ್ (ಸಾನ್ವೋರ್ಡೆಮ್) ಮತ್ತು ಮನೋಹರ್ ಅಜ್ಗಾಂವ್ಕರ್ (ಪೆರ್ನೆಮ್) ಸಹ ಇದೇ ಅವಧಿಯಲ್ಲಿ ಬಿಜೆಪಿಗೆ ಸೇರಿದ್ದರು.

ಸಾಲಿಗಾವ್‌ನಿಂದ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ)ಯ ಜಯೇಶ್ ಸಲ್ಗೋಂಕರ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇತ್ತೀಚೆಗೆ, ಗೋವಾದ ಮಾಜಿ ಮುಖ್ಯಮಂತ್ರಿ,ಪೋಂಡಾದ ಕಾಂಗ್ರೆಸ್ ಶಾಸಕ ರವಿ ನಾಯ್ಕ್, ಆಡಳಿತಾರೂಢ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಚುನಾವಣಾ ಅದೃಷ್ಟವನ್ನು ಪರೀಕ್ಷಿಸುತ್ತಿರುವ ತೃಣಮೂಲ ಕಾಂಗ್ರೆಸ್ ಗೆ ಮತ್ತೊಬ್ಬ ಮಾಜಿ ಸಿಎಂ ಮತ್ತು ಕಾಂಗ್ರೆಸ್ ನಾಯಕ ಲೂಯಿಜಿನ್ಹೋ ಫಲೈರೊ (ನವೇಲಿಮ್) ಸೇರಿದ್ದರು.

2017ರಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಟಿಕೆಟ್‌ನಲ್ಲಿ ಗೆದ್ದಿದ್ದ ಮಾಜಿ ಸಿಎಂ ಚರ್ಚಿಲ್ ಅಲೆಮಾವೊ ಕೂಡ ಇತ್ತೀಚೆಗೆ ಟಿಎಂಸಿಗೆ ಸೇರಿದ್ದಾರೆ.

ಕರ್ಟೋರಿಮ್‌ನ ಕಾಂಗ್ರೆಸ್ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಕೂಡ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರ್ಪಡೆಗೊಂಡು ಬಳಿಕ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್‌ಗೆ ಮರಳಲು ಬಯಸಿದ್ದರಾದರೂ ಪಕ್ಷ ತೆಗೆದುಕೊಳ್ಳದ ಕಾರಣ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮತ್ತೋರ್ವ ಶಾಸಕ ವಿಲ್ಫ್ರೆಡ್ ಡಿಸಾ ಅವರು ಆಡಳಿತ ಪಕ್ಷಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ದೀಪಕ್ ಪೌಸ್ಕರ್ ಕೂಡ ಬಿಜೆಪಿ ತೊರೆದಿದ್ದಾರೆ.

ಸ್ವತಂತ್ರ ಶಾಸಕರಾದ ರೋಹನ್ ಖೌಂಟೆ (ಪೋರ್ವೊರಿಮ್) ಮತ್ತು ಗೋವಿಂದ್ ಗೌಡೆ (ಪ್ರಿಯೋಲ್) ಬಿಜೆಪಿಗೆ ಸೇರ್ಪಡೆಗೊಂಡರೆ, ಮತ್ತೊಬ್ಬ ಸ್ವತಂತ್ರ ಶಾಸಕ ಪ್ರಸಾದ್ ಗಾಂವ್ಕರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಪಕ್ಷ ತೊರೆದ ಬಿಜೆಪಿ ಶಾಸಕರೆಂದರೆ, ಈಗ ಎಂಜಿಪಿಗೆ ಸೇರ್ಪಡೆಗೊಂಡಿರುವ ಪ್ರವೀಣ್ ಜಾಂತ್ಯೆ (ಮೇಮ್), ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಮೈಕೆಲ್ ಲೋಬೋ (ಕಲಾಂಗುಟ್), ಜೋಸ್ ಲೂಯಿಸ್ ಕಾರ್ಲೋಸ್ ಅಲ್ಮೇಡಾ (ವಾಸ್ಕೋ ಡ ಗಾಮಾ) ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅಲೀನಾ ಸಲ್ಡಾನ್ಹಾ (ಕೋರ್ಟಲಿಮ್) ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಂಡಿದ್ದಾರೆ.

ಪಕ್ಷಾಂತರ ಮತ್ತು ಶಾಸಕರ ರಾಜೀನಾಮೆ ನಂತರ ಸದನದಲ್ಲಿ ಕಾಂಗ್ರೆಸ್‌ನ ಪ್ರಸ್ತುತ ಸಂಖ್ಯಾಬಲ ಎರಡಾಗಿದ್ದರೆ, ಬಿಜೆಪಿಯ ಬಲ 27 ಆಗಿದೆ.

ಟಿಎಂಸಿಯ ಪ್ರವೇಶ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯ ಆಕ್ರಮಣಕಾರಿ ಪ್ರಚಾರದೊಂದಿಗೆ ಗೋವಾದ ಚುನಾವಣಾ ಕದನವು ಬಹು-ಕೋನವಾಗಿದೆ. ಇಲ್ಲಿಯವರೆಗೆ, ಪ್ರಾದೇಶಿಕ ಎಂಜಿಪಿ ಮತ್ತು ಟಿಎಂಸಿ ನಡುವೆ ಮತ್ತು ಕಾಂಗ್ರೆಸ್ ಮತ್ತು ಜಿಎಫ್‌ಪಿ ನಡುವೆ ಚುನಾವಣಾ ಮೈತ್ರಿಗಳನ್ನು ರೂಪಿಸಲಾಗಿದೆ.

2017 ರ ಚುನಾವಣೆಯಲ್ಲಿ, 40 ಸದಸ್ಯ ಬಲದ ಸದನದಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗೋವಾದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಆದರೆ 13 ಸ್ಥಾನಗಳನ್ನು ಗಳಿಸಿದ ಬಿಜೆಪಿ ಕೆಲವು ಪಕ್ಷೇತರರು ಮತ್ತು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next