Advertisement

ಶೇ.60ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸದೆ ಬಡ್ತಿಗೆ ಒತ್ತಾಯ

07:15 PM Feb 25, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೇವಾ ನಿರತ ಶೇ.60ರಷ್ಟು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾ ಜ್ಯೇಷ್ಠತೆಯೊಂದಿಗೆ ಪರೀಕ್ಷೆ ಇಲ್ಲದೇ 6ರಿಂದ 8ನೇ ತರಗತಿಗೆ ಬಡ್ತಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

Advertisement

ಈ ಸಂಬಂಧ ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರನ್ನು ನಿಯೋಗ ಭೇಟಿ ಮಾಡಿ ಮನವಿ ಮಾಡಿದ್ದು, ಮಾರ್ಚ್‌ನಲ್ಲಿ ಜರುಗಲಿರುವ ಅಧಿವೇಶನದಲ್ಲಿ ಶಿಕ್ಷಕರ ವರ್ಗಾವಣೆ ಕಾಯ್ದೆ-2020ಕ್ಕೆ ಸೂಕ್ತ ತಿದ್ದುಪಡಿ ತರಬೇಕು. 6ನೇ ವೇತನ ಆಯೋಗದ ಶಿಫಾರಸಿನಂತೆ ಪದೋನ್ನತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಕಾಲಮಿತಿ ಬಡ್ತಿ, ಸ್ವಯಂ ಚಾಲಿತ ಬಡ್ತಿ, 202, 25, 30 ವರ್ಷಗಳ ಆರ್ಥಿಕ ಸೌಲಭ್ಯ ನೀಡುವ ಕರಿತು ಚರ್ಚಿಸುವಂತೆ ಒತ್ತಾಯಿಸಿದರು.

ಸುಪ್ರೀಂಕೋರ್ಟ್‌ನಲ್ಲಿರುವ ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಬೇಕು. 150ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಪದವೀಧರೇತರ ಮುಖ್ಯ ಶಿಕ್ಷಕರ ಹುದ್ದೆಗಳನ್ನು ನೀಡಬೇಕು. ಮಕ್ಕಳ ಶಿಕ್ಷಕರ ಅನುಪಾತವನ್ನು ಪುನರ್‌ ನಿಗದಿಗೊಳಿಸಬೇಕು. ರಾಜ್ಯದಲ್ಲಿರುವ 52 ನೂತನ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಪ್ರಾರಂಭಿಸಿ ಅಗತ್ಯ ಸಿಬ್ಬಂದಿ ಮಂಜೂರಾತಿ ನೀಡಲು ಬಜೆಟ್‌ ಅಧಿವೇಶನದಲ್ಲಿ ಅಗತ್ಯ ಅನುದಾನ ಒದಗಿಸಬೇಕು ಎಂದು ಹೇಳಿದರು.

ವರ್ಗಾವಣೆ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ ಎಲ್ಲಾ ರೀತಿಯ ಬಡ್ತಿ ಪ್ರಕ್ರಿಯೆಗಳನ್ನು ಆರಂಭಿಸಿ ತಕ್ಷಣ ಏಕಕಾಲದಲ್ಲಿ ಪೂರ್ಣಗೊಳಿಸುವಂತೆ ವಿಭಾಗದ ಎಲ್ಲಾ ಉಪ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಬೇಕು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಶುಲ್ಕ ಹಾಗೂ ವಿದ್ಯುತ್ಛಕ್ತಿ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಆಗ್ರಹಿಸಿದರು.

ಬೇಡಿಕೆಗಳನ್ನು ಆಲಿಸಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರದ ಹಂತದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌, ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್‌, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next