ಬೆಂಗಳೂರು: ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಖುದ್ದು ಜಿಲ್ಲಾಧಿಕಾರಿಗಳು ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡಿ, ನಾಮಫಲಕ ಅಳವಡಿಕೆ ಪ್ರಗತಿ ಕುರಿತು ಮಾ.12ರಂದು ವರದಿ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಸೂಚನೆ ನೀಡಿದ್ದಾರೆ.
ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ 2024ಕ್ಕೆ ಅನುಷ್ಠಾನಕ್ಕೆ ಸಂಬಂಧಿಸಿ ಗುರುವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಸಭೆ ನಡೆಸಿ, ಮಸೂದೆಯಲ್ಲಿರುವ ಅಂಶಗಳ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆ ನಿರ್ದೇಶನ ನೀಡಿದರು.
ಈ ಮಸೂದೆಯ ಅನ್ವಯ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಲೇಬೇಕು. ಅದಕ್ಕೆ ಸಂಬಂಧಿಸಿ ಪ್ರತಿ ಜಿÇÉೆಗಳ ಪ್ರಗತಿ ಬಗ್ಗೆ ಜಿÇÉಾಧಿಕಾರಿಗಳೇ ಪರಿಶೀಲಿಸಬೇಕು. ನಿಮ್ಮ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಪ್ರಗತಿಯನ್ನು ಅವಲೋಕಿಸಬೇಕು. ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಅಳವಡಿಕೆಯ ಗಡುವು ಮಾ.15ರ ವರೆಗೆ ಮುಂದೂಡಲಾಗಿದ್ದರೂ, ಈವರೆಗಿನ ಪ್ರಗತಿಯ ವರದಿಯನ್ನು ಮಾ.12ರೊಳಗೆ ಪರಿಶೀಲಿಸಿ ನೀಡಬೇಕು ಎಂದು ಹೇಳಿದರು.
ಗಡಿಯಲ್ಲಿ ಅನ್ಯ ಭಾಷೆಗಳ ಫಲಕ ತೆರವು ಮಾಡಿಸಿ:
ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಬೆಳಗಾವಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು ಭಾಗಗಳ ಕನ್ನಡ ನಾಮಫಲಕ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಖಾನಾಪುರ, ನಿಪ್ಪಾಣಿ, ಚಿಕ್ಕೋಡಿಯಂತಹ ತಾಲೂಕುಗಳಲ್ಲಿ ಮರಾಠಿ ನಾಮಫಲಕ ಅಳವಡಿಕೆಯ ದೂರುಗಳಿದ್ದು, ಅವುಗಳನ್ನು ತೆರವುಗೊಳಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.