Advertisement

ಮೀನುಗಾರರ 60 ಕೋ.ರೂ. ಸಾಲ ಮನ್ನಾ

01:01 AM Jul 30, 2019 | Sriram |

ಉಡುಪಿ: ಮೀನುಗಾರರ ಬಹುದಿನದ ನಿರೀಕ್ಷೆಯಾಗಿದ್ದ ಸಾಲ ಮನ್ನಾ ಬೇಡಿಕೆಯನ್ನು ಪುರಸ್ಕರಿಸಿ ರಾಜ್ಯ ಸರಕಾರ ಮೀನುಗಾರರ ಹಾಗೂ ಮಹಿಳಾ ಮೀನುಗಾರರ ಸುಮಾರು 60.584 ಕೋ.ರೂ. ಮನ್ನಾ ಮಾಡಿದೆ.

Advertisement

ಶಾಸಕ ಕೆ. ರಘುಪತಿ ಭಟ್‌, ಕರಾವಳಿಯ ಮೂರು ಜಿಲ್ಲೆಗಳ ಶಾಸಕರು ಸೇರಿ ನೇಕಾರರಿಗೆ ಸಾಲ ಮನ್ನಾ ಮಾಡಿದಂತೆ ಮೀನುಗಾರರ ಸಾಲವನ್ನೂ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶಾಸಕಾಂಗ ಸಭೆಯಲ್ಲಿ ಮನವಿ ಮಾಡಿದ್ದರು. ಬೇಡಿಕೆಗೆ ಮನ್ನಣೆ ನೀಡಿದ ಯಡಿಯೂರಪ್ಪ ಮೀನುಗಾರರ ಸಾಲ ಮನ್ನಾ ಮಾಡಲು ಆದೇಶ ನೀಡಿದರು.

ಮೀನುಗಾರರು ಹಾಗೂ ವಿಶೇಷವಾಗಿ ಮಹಿಳಾ ಮೀನುಗಾರರು, ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಹಾಗೂ ಮೀನಿನ ಸಾಗಾಣಿಕೆ ಇತರ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಶೇ. 2ರಷ್ಟು ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್‌ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಸಾಲ ಪಡೆಯುವ ಯೋಜನೆಯನ್ನು ಮೀನುಗಾರಿಕೆ ಇಲಾಖೆಯು ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯಲ್ಲಿ 50 ಸಾವಿರ ರೂ.ಗಳವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ. ಪಡೆದುಕೊಂಡ ಸಾಲವನ್ನು 2 ವರ್ಷದೊಳಗೆ ಬ್ಯಾಂಕ್‌ಗಳಿಗೆ ಮರುಪಾವತಿಸಿದ ಮೀನುಗಾರರು ವ್ಯತ್ಯಾಸದ ಬಡ್ಡಿ ಮೊತ್ತಕ್ಕೆ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ. 2018ರಿಂದ ಸಾಲ ವಸೂಲಾತಿ ಬಾಕಿ ತಮಗೆ ಅನುಕೂಲವಾಗುವ ಮೀನುಗಾರಿಕೆ ಚಟುವಟಿಕೆಯ ಉದ್ದೇಶಗಳನ್ನು ಅಂತಿಮ ಗೊಳಿಸಿಕೊಂಡು ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ ಅನಂತರ ಸೂಕ್ತ ಶಿಫಾರಸಿನೊಂದಿಗೆ ಅರ್ಜಿದಾರರ ವ್ಯಾಪ್ತಿಯ ಬ್ಯಾಂಕ್‌ಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವುದು. ಪ್ರಸ್ತಾವನೆ ಪರಿಶೀಲನೆಯ ಅನಂತರ ಬ್ಯಾಂಕ್‌ಗಳು ಸಾಲವನ್ನು ಮಂಜೂರು ಮಾಡುತ್ತವೆ. ಈ ರೀತಿ ಸಾಲ ಪಡೆದುಕೊಂಡ ಮೀನುಗಾರರು 2 ವರ್ಷದೊಳಗೆ ಸಾಲವನ್ನು ಮರು ಪಾವತಿಸಿದಲ್ಲಿ ವ್ಯತ್ಯಾಸದ ಬಡ್ಡಿ ಮೊತ್ತದ ಪ್ರಯೋಜನ ಪಡೆಯುವರು.

2017-18 ಮತ್ತು 19ನೇ ಸಾಲಿನಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟು 23,507 ಮೀನುಗಾರರ 60.584 ಕೋ.ರೂ. ಸಾಲ ವಸೂಲಾತಿಗೆ ಬಾಕಿಯಿತ್ತು.

Advertisement

ಮೀನುಗಾರರ ಫೆಡರೇಶನ್‌ ಹರ್ಷ
ಮಲ್ಪೆ: ಮೀನುಗಾರರ ಬಹುದಿನದ ನಿರೀಕ್ಷೆಯಾಗಿದ್ದ ಸಾಲಮನ್ನ ಬೇಡಿಕೆಯನ್ನು ಪುರಸ್ಕರಿಸಿ, ಮೀನುಗಾರರ ಮತ್ತು ಮಹಿಳಾ ಮೀನುಗಾರರ ಸುಮಾರು 60 ಕೋ.ರೂ. ಸಾಲಮನ್ನ ಯೋಜನೆಗೆ ಅಂಕಿತ ಹಾಕಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮೀನುಗಾರರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಮೀನುಗಾರರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಸಾಲಮನ್ನ ಯೋಜನೆಗೆ ಸಹಕರಿಸಿದ ಕರಾವಳಿಯ ಎಲ್ಲ ಶಾಸಕರಿಗೆ, ಸಂಸದರಿಗೆ ಮೀನುಗಾರರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಾಸಕರಿಂದ ಸ್ವಾಗತ
ಮಂಗಳೂರು/ಕುಂದಾಪುರ/ಕಾಪು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ 23,507 ಮೀನುಗಾರ ಕುಟುಂಬಗಳಿಗೆ ಪ್ರಯೋಜನವಾಗುವಂತೆ ಸಾಲಮನ್ನಾ ಮಾಡಿರುವ ಮುಖ್ಯಮಂತ್ರಿಗಳ ಕ್ರಮ ಸ್ವಾಗತಾರ್ಹ ಎಂದು ಶಾಸಕರಾದ ಮಂಗಳೂರಿನ ವೇದವ್ಯಾಸ ಕಾಮತ್‌, ಕಾಪುವಿನ ಲಾಲಾಜಿ ಆರ್‌. ಮೆಂಡನ್‌ ಮತ್ತು ಬೈಂದೂರಿನ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದವರಿಗೂ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಈ ಸರಕಾರದಿಂದ ನಿರೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next