Advertisement

ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ

09:06 PM Apr 17, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಿಗೆ ಬುಧವಾರ 60 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೆ ಎರಡನೇ ಹಂತಕ್ಕೆ 168 ಮಂದಿ ಅಭ್ಯರ್ಥಿಗಳು ಒಟ್ಟು 247 ಸೆಟ್‌ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಬುಧವಾರ ರಾಯಚೂರಿನಲ್ಲಿ ಒಬ್ಬರು, ಚಿಕ್ಕೋಡಿಯಲ್ಲಿ ಇಬ್ಬರು, ಬಾಗಲಕೋಟೆ, ಕಲಬುರಗಿಯಲ್ಲಿ ತಲಾ ಮೂವರು. ಬಿಜಾಪುರ, ಕೊಪ್ಪಳ, ಶಿವಮೊಗ್ಗ, ಬಳ್ಳಾರಿಯಲ್ಲಿ ತಲಾ ನಾಲ್ವರು. ಹಾವೇರಿ, ಧಾರವಾಡದಲ್ಲಿ ತಲಾ ಐವರು, ದಾವಣಗೆರೆ, ಬೆಳಗಾವಿ, ಬೀದರ್‌ನಲ್ಲಿ ತಲಾ ಆರು ಮಂದಿ ಮತ್ತು ಉತ್ತರ ಕನ್ನಡದಲ್ಲಿ ಏಳು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜಾಪುರ, ಬೀದರ್‌, ಕೊಪ್ಪಳ, ಹಾವೇರಿ ಮತ್ತು ಉತ್ತರ ಕನ್ನಡಲ್ಲಿ ತಲಾ ಒಬ್ಬರು ಮಹಿಳಾ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.ಇನ್ನು ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸ್ಪರ್ಧಿಸಲು ಬುಧವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ಶೇ. 91 ಮನೆ ಮತದಾನ:
ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದ 85 ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಏ. 13 ರಿಂದ ಮನೆ ಮತದಾನ ಚಾಲ್ತಿಯಲ್ಲಿದ್ದು ಶೇ. 91.31 ಮತದಾನವಾಗಿದೆ. ಗುರುವಾರ ಮನೆ ಮತದಾನಕ್ಕೆ ಕಡೆಯ ದಿನವಾಗಿದೆ. ಹಿರಿಯ ನಾಗರಿಕರಲ್ಲಿ 36,689 ಮಂದಿ ನೋಂದಾಯಿತ ಮತದಾರರಲ್ಲಿ 33,323 ಮಂದಿ (ಶೇ. 90.83) ಮಂದಿ ಮತ ಚಲಾಯಿಸಿದ್ದಾರೆ. ಇನ್ನು 11,920 ವಿಶೇಷ ಚೇತನ ಮತದಾರರಲ್ಲಿ 11,061 ಮಂದಿ (ಶೇ. 92.79) ಮತಚಲಾಯಿಸಿದ್ದಾರೆ. 48,609 ನೋಂದಾಯಿತ ಮತದಾರರಲ್ಲಿ 44,384 ಮಂದಿ ಮತ ಚಲಾಯಿಸಿದ್ದಾರೆ.

ಗೈರು ಮತದಾರರಿಗೆ ಮತ್ತೊಂದು ಅವಕಾಶ
ಏಪ್ರಿಲ್‌ 26 ರಂದು ಮತದಾನ ನಡೆಯುವ ರಾಜ್ಯದ ಲೋಕಸಭಾ ಕ್ಷೇತ್ರಗಳ ಅಗತ್ಯ ಸೇವೆಗಳ ಇಲಾಖೆಗೆ ಸಂಬಂಧಿಸಿದ ಗೈರು ವರ್ಗದ ಮತದಾರರಿಗೆ ಅಂಚೆ ಮತದಾನವನ್ನು ಚಲಾಯಿಸಲು ಏ. 19 ರಿಂದ ಏ. 21ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಚೆ ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next