ತಾಳಿಕೋಟೆ: ತಹಶೀಲ್ದಾರ್ ಅನಿಲಕುಮಾರ ಢವಳಗಿ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಶನಿವಾರ ಗಡಿಸೋಮನಾಳ ಗ್ರಾಮ ವಾಸ್ತವ್ಯ ಕೈಗೊಂಡಿದ್ದರು. ಈ ವೇಳೆ ಸಾರ್ವಜನಿಕರಿಂದ ಬಂದ ಅರ್ಜಿಗಳಲ್ಲಿ ಶೇ. 60 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿ ಉಳಿದ ಅರ್ಜಿಗಳನ್ನು ಬೇರೆ ಬೇರೆ ಇಲಾಖೆಗೆ ವರ್ಗಾಯಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಯಿತು.
ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ, ಆಧಾರ್ ಕಾರ್ಡ್ ತಿದ್ದುಪಡಿ, ಪೋಡಿ ಮುಕ್ತ ಗ್ರಾಮ ಒಳಗೊಂಡು ಇತರೆ ಯೋಜನೆಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರಲ್ಲದೇ ಸಮಸ್ಯೆಗಳ ಪರಿಹಾರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇದೇ ಸಮಯದಲ್ಲಿ ತಹಶೀಲ್ದಾರ್ ಅನಿಲಕುಮಾರ ಢವಳಗಿ ಅವರು ಸಲ್ಲಿಕೆಯಾಗಿದ್ದು ಒಟ್ಟು 60 ಅರ್ಜಿಗಳಲ್ಲಿ 37 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದರು.
ಇನ್ನುಳಿದ 23 ಅರ್ಜಿಗಳನ್ನು ಬೇರೆ ಬೇರೆ ಇಲಾಖೆಗೆ ಸಂಬಂಧಿಸಿದ್ದು ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಇತ್ಯರ್ಥದ ಭರವಸೆ ನೀಡಿದರು. ತಹಶೀಲ್ದಾರ್ ಅನಿಲಕುಮಾರ ಢವಳಗಿ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಈಗಾಗಲೇ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಪ್ರತಿ ಮನೆ ಮನೆಗಳಿಗೆ ಮುಟ್ಟಿಸುವಂತಹ ಕಾರ್ಯ ನಡೆದಿದೆ. ಒಮ್ಮೆ ಪಡೆದಿರುವ ದಾಖಲೆಗಳು 5 ವರ್ಷಗಳು ಉಪಯೋಗಿಸಬಹುದು. ಮತ್ತೆ 5 ವರ್ಷದ ನಂತರ ಮನೆ ಬಾಗಿಲಿಗೆ ದಾಖಲೆಗಳು ಬರಲಿವೆ ಎಂದರು.
ತಾಪಂ ಇಒ ಬಿ.ಎಸ್. ಬಿರಾದಾರ, ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಡಿ.ಬಿ. ಕಲುºರ್ಗಿ, ಎಪಿಎಂಸಿ ಕಾರ್ಯದರ್ಶಿ ಎಚ್. ಎಸ್. ಅವಟಿ, ಕೃಷಿ ಇಲಾಖೆಯ ಮಹೇಶ ಜೋಶಿ, ತೋಟಗಾರಿಕೆ ಇಲಾಖೆಯ ಕುಂಬಾರ, ಅಬಕಾರಿ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಅಗ್ನಿ ಶಾಮಕ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಒಳಗೊಂಡು ಒಟ್ಟು 19 ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.