Advertisement

ಸರ್ಕಾರದ 60 ಎಕರೆ ಖಾಸಗಿ ವಶದಲ್ಲಿ..!

12:40 PM Nov 12, 2021 | Team Udayavani |

ಮುಳಬಾಗಿಲು: ತಾಲೂಕಿನಲ್ಲಿ ಕಳೆದ 5 ವರ್ಷಗಳ ಹಿಂದೆ ಖಾಸಗಿ ಕಂಪನಿಯೊಂದು ಸೋಲಾರ್‌ ವಿದ್ಯುತ್‌ ಘಟಕ ನಿರ್ಮಾಣ ನೆಪದಲ್ಲಿ ಸುಮಾರು 75 ಎಕರೆ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡಿದ್ದರೂ ತಾಲೂಕು ಆಡಳಿತ ಇದುವರೆಗೂ ತೆರವುಗೊಳಿಸದೇ ಇರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Advertisement

ವಿದ್ಯುತ್‌ ಘಟಕ ನಿರ್ಮಾಣ: ಮುಂಬೈನ ಆದಿತ್ಯಾ ಬಿರ್ಲಾ ಗ್ರೂಪ್ಸ್‌ ಕಂಪನಿ ಮುಳಬಾಗಿಲು ತಾಲೂಕಿನಲ್ಲಿ 20 ಮೆ. ವ್ಯಾ ಸೋಲಾರ್‌ ವಿದ್ಯುತ್‌ ಉತ್ಪಾದಿಸಿ ಸರಬರಾಜು ಮಾಡಲು 2016ರಲ್ಲಿ ಕ್ರೆಡಲ್‌ನಿಂದ ಟೆಂಡರ್‌ ಪಡೆದಿತ್ತು. ಆದರೆ ಕಂಪನಿ ಯಾವುದೇ ನಿಖರವಾದ ಗ್ರಾಮ ಮತ್ತು ಸರ್ವೆ ನಂಬರ್‌ ಜಮೀನಿನಲ್ಲಿ ಸೋಲಾರ್‌ ಘಟಕ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡದೇ ಉತ್ಪಾದಿಸಿದ ಸೋಲಾರ್‌ ವಿದ್ಯುತ್‌ ಅನ್ನು ಬೈರಕೂರು ಸಬ್‌ಸ್ಟೇಷನ್‌ಗೆ ಸರಬರಾಜು ಮಾಡಲು 7 ಕಿ.ಮೀ ದೂರದ ತಂತಿ ಹಾಕಲು ಅನುಮತಿ ಪಡೆದಿದ್ದರು.

ಅದರಂತೆ ಸದರಿ ಕಂಪನಿ 2017ರಲ್ಲಿ ಬೈರಕೂರು ಹೋಬಳಿ ಪುಣ್ಯಹಳ್ಳಿ ಗ್ರಾಮದ ಪಕ್ಕದಲ್ಲಿ ಸೋಲಾರ್‌ ವಿದ್ಯುತ್‌ ಘಟಕ ನಿರ್ಮಾಣಕ್ಕೆ ಚಿಂತಿಸಿ ಘಟಕ ನಿರ್ಮಾಣದ ಗುತ್ತಿಗೆಯನ್ನು ಆಂಧ್ರದ ಕರ್ನೂಲು ಮೂಲದ ಸೋಲಾರ್‌ ಕಿಂಗ್‌ ಇಂಡಿಯಾ ಕಂಪನಿಗೆ ವಹಿಸಿದ್ದರು.

ಅದರಂತೆ ಸೋಲಾರ್‌ ಕಿಂಗ್‌ ಇಂಡಿಯಾ ಕಂಪನಿ ತಾಲೂಕಿನ ಪುಣ್ಯಹಳ್ಳಿ ಸ.ನಂ.116 ಮತ್ತು 117ರ ಎರಡೂ ಸರ್ವೇ ನಂಬರ್‌ಗಳಲ್ಲಿನ ಸುಮಾರು 60 ಎಕರೆ ಸರ್ಕಾರಿ ಜಮೀನು ಸೇರಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ರೈತರಿಗೆ ಮಂಜೂರಾಗಿದ್ದ ಖುಷ್ಕಿ ಜಮೀನನ್ನು ರೈತರಿಂದ ಜಿಪಿಎ ಮೂಲಕ ಪಡೆದಿದ್ದು ಮತ್ತು ದಲಿತ ರೈತರಿಂದ ಜಮೀನು ಕೊಂಡುಕೊಳ್ಳಲು ಸರ್ಕಾರದಿಂದ ಅನುಮತಿ ಪಡೆಯದೇ, ಪಡೆದುಕೊಂಡ ಜಮೀನನ್ನು ಭೂ ಪರಿವರ್ತನೆ ಮಾಡಿಸದೇ ಸರ್ಕಾರದ ನೀತಿ ನಿಯಮ ಗಾಳಿಗೆ ತೂರಿ ಬಹುತೇಕವಾಗಿ ಸೋಲಾರ್‌ ಘಟಕ ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ:- ಯಕ್ಷಗಾನ ಸಾಹಿತ್ಯ ಕೂಡ‌ ಕನ್ನಡದ ಸಾಹಿತ್ಯ: ಸಾಹಿತಿ ಶೇಖರ ಗೌಡ

Advertisement

ಆದರೆ ಅಂದಿನ ಇಂಧನ ಇಲಾಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್‌ ಅವರ ಆದೇಶ ಸಂಖ್ಯೆ: ಇ.ಎನ್‌.70ವಿಎಸ್‌ಸಿ2015, ದಿ.22/7/2016 ಆದೇಶದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ಸೋಲಾರ್‌ ಘಟಕ ನಿರ್ಮಾಣಕ್ಕೆ ತಡೆಯೊಡ್ಡಿ ಸದರಿ ಸ್ಥಳದಿಂದ ಸಂಪೂರ್ಣವಾಗಿ ತೆರವುಗೊಳಿಸಲು ಆದೇಶಿಸಿದ್ದರು.

ತೆರವು:ಅದರಂತೆ ಅಂದಿನ ತಹಶೀಲ್ದಾರ್‌ ಬಿ.ಎನ್‌ .ಪ್ರವೀಣ್‌ ನಂಗಲಿ ಪೊಲೀಸರ ಸಹಕಾರದೊಂದಿಗೆ ನಿರ್ಮಾಣ ಗೊಂಡಿದ್ದ ಸೋಲಾರ್‌ ಘಟಕವನ್ನು ಜೆಸಿಬಿಗಳಿಂದ ತೆರವುಗೊಳಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಸದರಿ ಕಿಂಗ್‌ ಸೋಲಾರ್‌ ಇಂಡಿಯಾ ಕಂಪನಿ ಒತ್ತುವರಿ ಮಾಡಿಕೊಂಡಿರುವ ಸುಮಾರು 65 ಎಕರೆ ಸರ್ಕಾರಿ ಜಮೀನು ಇಂದಿಗೂ ಆದಿತ್ಯ ಬಿರ್ಲಾ ಗ್ರೂಪ್‌ ಹೆಸರಿಗೆ ಸೇರಿಕೊಂಡಿದ್ದು ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಇದುವರೆಗೂ ತಾಲೂಕು ಆಡಳಿತ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳದೇ ಇರುವುದು ವ್ಯಾಪಕ ಚೆರ್ಚೆಗೆ ಗ್ರಾಸವಾಗಿದೆ.

“ಮುಂಬೈನ ಕಂಪನಿ ಮತ್ತು ಆಂಧ್ರದ ಕರ್ನೂಲು ಮೂಲದ ಸೋಲಾರ್‌ ಕಿಂಗ್‌ ಇಂಡಿಯಾ ಕಂಪನಿಗಳ ಕಪಟತನದಿಂದ ಕೋಟ್ಯಂತರ ರೂ. ಬೆಲೆ ಬಾಳುವ ಸುಮಾರು 75 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸಿಲ್ಲ. ಕೂಡಲೇ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು.”  ಕೀಲುಹೊಳಲಿ ಸತೀಶ್‌, ಪರಶುರಾಮಸೇನೆ ಸಂಸ್ಥಾಪಕ ಅಧ್ಯಕ್ಷರು.

ಚರ್ಚಿಸಿ ನಿರ್ಧಾರ: ಡೀಸಿ – ಸುಮಾರು 65 ಎಕರೆ ಸರ್ಕಾರಿ ಜಮೀನು ಇಂದಿಗೂ ಆದಿತ್ಯ ಬಿರ್ಲಾ ಗ್ರೂಪ್‌ ಹೆಸರಿಗೆ ಸೇರಿಕೊಂಡಿದೆ. ಈ ಕುರಿತು ತಮಗೆ ಮಾಹಿತಿ ಇಲ್ಲ. ತಹಶೀಲ್ದಾರೂಂದಿಗೆ ಚರ್ಚಿಸಿ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಸೆಲ್ವಮಣಿ ಭರವಸೆ ನೀಡಿದರು.

– ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next