ವಿಜಯಪುರ: ಮಂಗಳವಾರ ರಾತ್ರಿ ಹೊನಗನಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬಂದಿದ್ದ 6 ಕಾರ್ಮಿಕರು ಮೃತಪಟ್ಟಿದ್ದು ಮೃತರೆಲ್ಲರೂ ಮಹಾರಾಷ್ಟ್ರದ ಮೂಲದವರು ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಮೃತ ಕಾರ್ಮಿಕರೆಲ್ಲರೂ ರಾಜ್ ಇನ್ಪ್ರಾಸ್ಟ್ರಕ್ಚರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ರಸ್ತೆ ನಿರ್ಮಾಣ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬೊಲೆರೋ ಪಿಕ್‌ಅಪ್ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಸಂಭವಿಸಿದ ದುರಂತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಮೃತರನ್ನು ಬೊಲೆರೋ ಚಾಲಕ ಮಹಾರಾಷ್ಟ್ರ ಮೂಲದ ಸಾತಾರ ಜಿಲ್ಲೆಯ ಚರೇಗಾಂವ್ ಗ್ರಾಮದ ವಿಕಾಸ ವಿಲಾಸ ಸೂರ್ಯವಂಶಿ (29), ನಾಂದೇಡ ಮೂಲದ ಮುಸ್ತಫಾ ಇಸಾಕ್ ಮಂಗರೂಳ (24), ಹಿಂಗೋಣಿ ಮೂಲದ ಗಜಾನನ ಫಿರಾಜಿ ಡೊನೆ (27), ಲಾತೂರಿನ ತೌಫಿಕ್ ಸೈಯದ್ (28), ಅಬ್ಟಾಸ್ ಅಬ್ದುಲ್ ಪಟೇಲ್ (52) ಹಾಗೂ ಮೆಹಬೂಬ್ ಸೈಯದ್ ನೂರಸಾಬ್ (24) ಎಂದು ಗುರುತಿಸಲಾಗಿದೆ.
ತೀವ್ರ ಗಾಯಗೊಂಡಿದ್ದ ಮೆಹಬೂಬ್ ನೂರಸಾಬ್ ಸೈಯದ್ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಕೊಲ್ಹಾರ ಗ್ರಾಮದ ಬಳಿಯ ಶೆಡ್ ನಲ್ಲಿ ಇವರು ನೆಲೆಸಿದ್ದರು. ಮಂಗಳವಾರ ಕಾಮಗಾರಿಗೆ ಸಂಬಂಧಿಸಿದ ಯಂತ್ರವೊಂದು ಕೆಟ್ಟ ಹಿನ್ನೆಲೆಯಲ್ಲಿ ಅದರ ದುರಸ್ತಿಗೆ ವಿಜಯಪುರಕ್ಕೆ ಆಗಮಿಸಿದ್ದರು. ಯಂತ್ರದ ದುರಸ್ತಿ ಬಳಿಕ ರಾತ್ರಿ ಊಟ ತೆಗೆದುಕೊಂಡು ಕೊಲ್ಹಾರ ಪಟ್ಟಣಕ್ಕೆ ತೆರಳುತ್ತಿದ್ದರು.
ಹೊನಗನಹಳ್ಳಿ ಬಳಿ ಎದುರಿಗೆ ಬಂದ ಕಾರ್ಮಿಕರಿದ್ದ ಬೊಲೆರೋಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ 5 ಜನ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ. ಪ್ರಕರಣದ ಗಾಯಾಳು ಲಾತೂರ ಜಿಲ್ಲೆಯ ಸೋನವಾರಳದ ಮುನೀರ್ ಅಬ್ಟಾಸ್ ಸೈಯದ್ ನೀಡಿದ ದೂರಿನನ್ವಯ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.