Advertisement

ರನ್‌ ನೀಡದೆ 6 ವಿಕೆಟ್‌ ಕಿತ್ತ ನೇಪಾಲಿ ಬೌಲರ್‌!

09:59 AM Dec 03, 2019 | Sriram |

ಪೋಖರಾ (ನೇಪಾಲ): ವಿಶ್ವ ಮಟ್ಟದಲ್ಲಿ ನೇಪಾಲ ಇನ್ನೂ “ಕ್ರಿಕೆಟ್‌ ಶಿಶು’. ಆದರೆ ಇಲ್ಲಿನ ವನಿತಾ ತಂಡದ ಬೌಲರ್‌ ಒಬ್ಬರು ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ಸಾಧನೆಯ ಮೂಲಕ ಸುದ್ದಿಯಾಗಿದ್ದಾರೆ.

Advertisement

ಪೋಖರಾದಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದೂ ರನ್‌ ನೀಡದೆ 6 ವಿಕೆಟ್‌ ಹಾರಿಸಿದ್ದಾರೆ! ಈ ಬೌಲರ್‌ ಹೆಸರು ಅಂಜಲಿ ಚಂದ್‌.

ಸೋಮವಾರ ನಡೆದ “ಸೌತ್‌ ಏಶ್ಯನ್‌ ಗೇಮ್ಸ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌’ ಸರಣಿಯ ನೇಪಾಲ ವಿರುದ್ಧದ ಪಂದ್ಯದಲ್ಲಿ ಮಾಲ್ಡೀವ್ಸ್‌ 11 ಓವರ್‌ಗಳೊಳಗೆ 16 ರನ್ನಿಗೆ ಆಲೌಟ್‌ ಆಯಿತು. ಆತಿಥೇಯ ನೇಪಾಲ ಇದನ್ನು ಕೇವಲ 5 ಎಸೆತಗಳಲ್ಲಿ ಬೆನ್ನಟ್ಟಿ ವಿಜಯಿಯಾಯಿತು.

ಮಾಲ್ಡೀವ್ಸ್‌ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಜಲಿ ಚಂದ್‌ 7ನೇ ಓವರಿನಲ್ಲಿ 3 ವಿಕೆಟ್‌ ಹಾಗೂ 9ನೇ ಓವರಿನಲ್ಲಿ 2 ವಿಕೆಟ್‌ ಕಿತ್ತರು. ಒಟ್ಟು 2.1 ಓವರ್‌ ಎಸೆದ ಅಂಜಲಿ ಒಂದೂ ರನ್‌ ನೀಡದೆ 6 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಇದು ವನಿತಾ ಟಿ20 ಕ್ರಿಕೆಟ್‌ನ ನೂತನ ದಾಖಲೆಯಾಗಿದೆ. ಇದೇ ವರ್ಷ ಮಾಲ್ಡೀವ್ಸ್‌ನ ಮಾಸ್‌ ಎಲಿಸಾ ಚೀನ ವಿರುದ್ಧ 3 ರನ್ನಿಗೆ 6 ವಿಕೆಟ್‌ ಉರುಳಿಸಿದ ದಾಖಲೆ ಪತನಗೊಂಡಿತು.

ಚಹರ್‌ಗೂ ಮಿಗಿಲಾದ ಸಾಧನೆ
ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನೊಂದಿಗೆ ಸಮೀಕರಿಸಿದಾಗಲೂ ಅಂಜಲಿ ಸಾಧನೆ ವಿಶ್ವದಾಖಲೆ ಎನಿಸಿಕೊಳ್ಳುತ್ತದೆ. ನ. 10ರಂದು ನಾಗ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ದೀಪಕ್‌ ಚಹರ್‌ 3.2 ಓವರ್‌ಗಳಲ್ಲಿ 7 ರನ್ನಿತ್ತು 6 ವಿಕೆಟ್‌ ಹಾರಿಸಿದ್ದು, ಇದು ಪುರುಷರ ಟಿ20 ಪಂದ್ಯದ ದಾಖಲೆಯಾಗಿದೆ. ಇದಕ್ಕೂ ಮೊದಲು ಶ್ರೀಲಂಕಾದ ಅಜಂತ ಮೆಂಡಿಸ್‌ 8 ರನ್ನಿಗೆ 6 ವಿಕೆಟ್‌ ಉರುಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next