Advertisement

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

02:17 AM Jan 09, 2025 | Team Udayavani |

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿಯೇ ಮೊದಲು ಎಂಬಂತೆ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ಮಂದಿ ನಕ್ಸಲರು ಬುಧವಾರ ಶರಣಾಗತ ರಾಗಿದ್ದಾರೆ. ಈ ಮೂಲಕ ಶಸ್ತ್ರಾಸ್ತ್ರ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ. 2018ರಲ್ಲಿ ನೂರ್‌ ಶ್ರೀಧರ್‌, ಸಿರಿಮನೆ ನಾಗರಾಜ್‌ ಸೇರಿ 14 ಜನ ಶರಣಾಗಿದ್ದರು. ಅದಾಗಿ 6 ವರ್ಷಗಳ ಬಳಿಕ ಈ ಬಾರಿ ಶರಣಾದಂತಾಗಿದೆ.

Advertisement

ಕಳೆದ ಹಲವಾರು ವರ್ಷಗಳಿಂದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾರ್ಯಾಚರಿಸಿ ರಕ್ತ ಚರಿತ್ರೆ ಬರೆಯುತ್ತಿದ್ದ 6 ಮಂದಿ ನಕ್ಸಲರಾದ ಚಿಕ್ಕಮಗಳೂರು ಜಿಲ್ಲೆಯ ಲತಾ ಮುಂಡಗಾರು, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ಚಿಕ್ಕಮಗಳೂರಿನ ವನಜಾಕ್ಷಿ ಬಾಳೆಹೊಳೆ, ರಾಯಚೂರಿನ ಮಾರೆಪ್ಪ ಅರೋಲಿ, ಕೇರಳ ವಯನಾಡಿನ ಜಿಶಾ, ತಮಿಳುನಾಡು ವೆಲ್ಲೂರಿನ ಕೆ. ವಸಂತ್‌ ಬುಧವಾರ ಬೆಳಗ್ಗೆ ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಶರಣಾಗುವುದಾಗಿ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದರು.

ಕರ್ನಾಟಕ ರಾಜ್ಯ ನಕ್ಸಲ್‌ ಮುಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಬಂದು ಶರಣಾದರೆ ಇಡೀ ದೇಶಕ್ಕೆ ಮಾದರಿಯಾಗಲಿದೆ. ಇತರ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿರುವವರೂ ಮುಖ್ಯವಾಹಿನಿಗೆ ಬರಬಹುದು ಎಂಬ ಸದುದ್ದೇಶದಿಂದ ಕಡೇ ಕ್ಷಣದಲ್ಲಿ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಬಂದು ಶರಣಾಗಲು ಜಿಲ್ಲಾಧಿಕಾರಿ ಹಾಗೂ ಪೊಲೀಸರು ನಕ್ಸಲರ ಜತೆಗೆ ಚರ್ಚೆ ನಡೆಸಿ ಬಳಿಕ ಅವರನ್ನು ಚಿಕ್ಕಮಗಳೂರಿನಿಂದ ಹಾಸನ ಮಾರ್ಗವಾಗಿ ಸಂಜೆ 6 ಗಂಟೆಗೆ ಸಿಎಂ ಗೃಹ ಕಚೇರಿಗೆ ಕರೆತಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹಸಚಿವ ಡಾಣ ಜಿ. ಪರಮೇಶ್ವರ್‌ ಸೇರಿದಂತೆ ಕೆಲವು ಸಚಿವರ ಸಮ್ಮುಖದಲ್ಲಿ 6 ನಕ್ಸಲರು ಶರಣಾದರು. ಈ ಶರಣಾಗತಿಯಿಂದ 4 ದಶಕಗಳ ಬಳಿಕ ಕರ್ನಾಟಕ ನಕ್ಸಲ್‌ ಮುಕ್ತ ಆಗುವ ಮುನ್ನುಡಿ ಬರೆದಿದೆ ಎಂದೇ ವಿಶ್ಲೇಷಣೆಗಳಾಗುತ್ತಿವೆ.

ಸಂವಿಧಾನ ಕೊಟ್ಟ ಸಿಎಂ
ಮುಖ್ಯವಾಹಿನಿಗೆ ಬಂದಿರುವ ನಕ್ಸಲರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಸಮಸ್ಯೆ, ಬೇಡಿಕೆಗಳನ್ನು ಆಲಿಸಿದರು. ಶರಣಾದ ನಕ್ಸಲರಿಗೆ ಸಿದ್ದರಾಮಯ್ಯ ಸಂವಿಧಾನದ ಪುಸ್ತಕ ಹಾಗೂ ಕೆಂಪು ಗುಲಾಬಿ ನೀಡಿದರು. ಹಸ್ತಲಾಘವ ಮಾಡಿ ಮಾತನಾಡಿಸಿದರು. ಉತ್ತಮ ನಾಗರಿಕರಾಗಿ ಬದುಕುವಂತೆ ಸಲಹೆ ನೀಡಿದರು. ಶರಣಾಗತರ ಪರವಾಗಿ ಮುಖ್ಯಮಂತ್ರಿಗೆ ಲತಾ ಮುಂಡಗಾರು ಮನವಿ ಸಲ್ಲಿಸಿದರು.

Advertisement

ಶರಣಾದವರು ಯಾರು?
1. ಲತಾ ಮುಂಡಗಾರು, ಚಿಕ್ಕಮಗಳೂರು ಜಿಲ್ಲೆ
2. ಸುಂದರಿ ಕುತ್ಲೂರು, ದಕ್ಷಿಣ ಕನ್ನಡ ಜಿಲ್ಲೆ
3. ವನಜಾಕ್ಷಿ ಬಾಳೆಹೊಳೆ, ಚಿಕ್ಕಮಗಳೂರು
4. ಮಾರೆಪ್ಪ ಅರೋಲಿ, ರಾಯಚೂರು
5. ಜಿಶಾ, ಕೇರಳದ ವಯನಾಡು
6. ಕೆ. ವಸಂತ್‌, ತಮಿಳುನಾಡಿನ ವೆಲ್ಲೂರು

ಮತ್ತೆ ಡಿಸಿ ಮುಂದೆ ಹಾಜರು ?
ಬೆಂಗಳೂರಿನಿಂದ ನಕ್ಸಲರನ್ನು ಮತ್ತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಗುರುವಾರ ಅಲ್ಲಿ ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

ಮುಖ್ಯವಾಹಿನಿಗೆ ಬಂದಿರುವುದಕ್ಕೆ ಕರ್ನಾಟಕ ಮುಖ್ಯಮಂತ್ರಿಗಳು ಬಹಳ ಗೌರವಯುತವಾಗಿ ನಡೆದುಕೊಂಡಿದ್ದಾರೆ. ನಾವೂ ಸಹ ಮುಖ್ಯಮಂತ್ರಿಗಳ ನಡೆಗೆ ಧನ್ಯವಾದ ಹೇಳುತ್ತೇವೆ. ನಾವು ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದೇವೆ. ನಕ್ಸಲಿಸಮ್‌ನಿಂದ ಪರಿವರ್ತನೆ ಆಗಿ ಬಂದಿದ್ದೇವೆ ಎಂದು ಹೇಳಲು ಇಷ್ಟ ಪಡುತ್ತೇವೆ. ನಾವು ಕಾನೂನುಬದ್ಧವಾಗಿ ಹಾಗೂ ಸಂವಿಧಾನಾತ್ಮಕವಾಗಿ ಇಲ್ಲಿ ಜನರ ಪರವಾಗಿ ನಡೆಯುತ್ತಿದ್ದ ಹೋರಾಟಗಳಂತೆ ನಡೆದುಕೊಳ್ಳುತ್ತೇವೆ.
– ಲತಾ ಮುಂಡಗಾರು, ಶರಣಾದ ನಕ್ಸಲ್‌

Advertisement

Udayavani is now on Telegram. Click here to join our channel and stay updated with the latest news.

Next