ದಾವಣಗೆರೆ: ಈ ವರ್ಷದ ಆರು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಒಟ್ಟು 262 ಪ್ರಮುಖ ಪ್ರಕರಣಗಳ ಪೈಕಿ 80 ಪ್ರಕರಣ ಮಾತ್ರ ಬೇಧಿಸಲಾಗಿದೆ. ಅಂದರೆ ಶೇ.30.53ರಷ್ಟು ಪ್ರಕರಣ ಮಾತ್ರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದಂತಾಗಿದ್ದು, ಇದರಲ್ಲಿ ಕೊಲೆ, ದರೋಡೆ ಸೇರಿ 9 ರೀತಿಯ ಪ್ರಕರಣಗಳು ಸೇರಿವೆ.
ಈ ಪ್ರಕರಣಗಳಲ್ಲಿ 2,18,19,280 ರೂ. ಮೌಲ್ಯದ ನಗ, ನಾಣ್ಯ, ಇತರೆ ವಸ್ತುಗಳು ಕಳ್ಳತನವಾಗಿದ್ದು, ಈ ಪೈಕಿ 1,12,56,230 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಘಾತಕಾರಿ ಅಂದರೆ, 15 ಕೊಲೆ ಪ್ರಕರಣ ಈ ಆರು ತಿಂಗಳಲ್ಲಿ ದಾಖಲಾಗಿರುವುದು. 77 ಮನೆಗಳವು , 9 ಜಾನುವಾರು ಕಳವು, 138 ಸಾಮಾನ್ಯ ಕಳ್ಳತನ ಸೇರಿವೆ. 23 ದರೋಡೆ ಪ್ರಕರಣಗಳಲ್ಲಿ 19,23,398 ರೂ. ಮೌಲ್ಯದ ಕಳುವಾಗಿದ್ದು, ಈ ಪೈಕಿ 4 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. 11,33,700 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ 77 ಮನೆಗಳವು ಪ್ರಕರಣಗಳಲ್ಲಿ 48(ಶೇ.62)ಪತ್ತೆ ಮಾಡಿದ್ದು, 41,57,238 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 138 ಸಾಮಾನ್ಯ ಕಳವು ಪ್ರಕರಣಗಳ ಪೈಕಿ 20 ಪತ್ತೆ ಮಾಡಲಾಗಿದ್ದು, ಕಳವು ಆದ 77,93,422 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆನ್ನತ್ತಿದ್ದು ಒಂದು, ಪತ್ತೆಯಾಗಿದ್ದು 12!
ಕಳೆದ 6 ತಿಂಗಳಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಚನ್ನಗಿರಿ ಪೊಲೀಸ್ ಠಾಣಾ ಪೊಲೀಸರು ಪತ್ತೆ ಹಚ್ಚಿದ ಪ್ರಕರಣವೊಂದು ಗಮನಾರ್ಹ ಸಾಧನೆ ಆಗಿದೆ. ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯ ಮನೆಗಳು ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಈ ಸಂಬಂಧ ಮುನೀರ್ ಸಾಬ್, ಕುಮಾರ್ ಯಾನೆ ಫಿನಾಯಿಲ್ ಕುಮಾರ್, ನಾಗೇಂದ್ರಪ್ಪನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಜಿಲ್ಲೆ 12 ಕಡೆಗಳಲ್ಲಿ ಕಳವಾಗಿದ್ದ ಪ್ರಕರಣಗಳು ಪತ್ತೆಯಾದವು. ಈ ಆರೋಪಿಗಳಿಂದ ಒಟ್ಟು 525 ಗ್ರಾಂ ಬಂಗಾರ, 1300 ಗ್ರಾಂ ಚಿನ್ನದ ಆಭರಣ ಸೇರಿ 16,33,050 ರೂ. ಮೌಲ್ಯದ ವಸ್ತುಗಳನ್ನು
ವಶಪಡಿಸಿಕೊಳ್ಳಲಾಗಿದೆ.
ಸರಗಳ್ಳತನ 15: ವರ್ಷವಿಡೀ ಕನಿಷ್ಠ 2-3 ದಿನಕ್ಕೆ ಒಂದರಂತೆ ಆಗುತ್ತಿದ್ದ ಸರಗಳ್ಳತನ ಪ್ರಕರಣಗಳ ಪೈಕಿ ದಾಖಲಾಗಿದ್ದು ಬರೀ 15 ಮಾತ್ರ ಎಂಬುದು ಇನ್ನೊಂದು ಅಚ್ಚರಿಯಾಗಿದೆ. ಬಹುತೇಕ ನಗರದ ಹೊಸ ಭಾಗದ ಬಡಾವಣೆಗಳಾದ ಎಸ್‌ಎಸ್ ಬಡಾವಣೆ, ಎಸ್‌ವಿ ಬಡಾವಣೆ, ಆಂಜನೇಯ ಬಡಾವಣೆ, ಎಂಸಿ ಕಾಲೋನಿ, ವಿದ್ಯಾನಗರದಲ್ಲಿ ಅನೇಕ ಪ್ರಕರಣಗಳು ನಡೆದಿವೆ. ಆದರೆ, ದಾಖಲಾಗಿದ್ದು ಮಾತ್ರ 15.