ಚಿಂಚೋಳಿ: ರಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆರು ಲಕ್ಷ ಸಂಘಗಳನ್ನು ರಚಿಸಲಾಗಿದ್ದು, 60ಸಾವಿರ ಸದಸ್ಯರು ಇದರಲ್ಲಿದ್ದು, ಮೂರು ಕೋಟಿ ಜನರಿಗೆ ಸಹಕಾರ ತಲುಪಿದೆ ಎಂದು ನಿರ್ದೇಶಕ ಸತೀಶ ಸುವರ್ಣ ಹೇಳಿದರು.
ತಾಲೂಕಿನ ಕೊಳ್ಳುರ ಗ್ರಾಮದಲ್ಲಿ 278ನೇ ಕೆರೆ ಹಸ್ತಾಂತರ, ಕೆರೆಯಂಗಳದಲ್ಲಿ ಗಿಡ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 25 ಸಣ್ಣ ನೀರಾವರಿ ಕೆರೆಗಳ ಹೂಳೆತ್ತುವ ಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ ನಾಲ್ಕು ಕೆರೆಗಳನ್ನು ಹೂಳೆತ್ತಲಾಗಿದೆ. ರಾಜ್ಯದಲ್ಲಿ ಒಟ್ಟು 278 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ತಾಲೂಕಿನಲ್ಲಿ 10 ಸಾವಿರ ಗಿಡ ನೆಡುವ ಗುರಿ ಇದೆ. ಕೆರೆ ಅಭಿವೃದ್ಧಿಪಡಿಸಿ ನೀರು ಸಂಗ್ರಹಣೆ ಮಾಡಿದರೆ ಮೀನುಗಾರಿಕೆ, ಬೋಟಿಂಗ್, ಉದ್ಯಾವನ ಮಾಡಬಹುದಾಗಿದೆ ಎಂದರು.
ಕಲಬುರಗಿ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ಗತಿಕರಿಗೆ ಮಾಸಾಶನ ಎರಡು ಸಾವಿರ ರೂ., ಸುಜ್ಞಾನಿ ಶಿಷ್ಯವೇತನ ಯೋಜನೆ ಅಡಿಯಲ್ಲಿ 32 ಸಾವಿರ ರೂ., ವಿದ್ಯಾರ್ಥಿಗಳಿಗೆ 10ಕೋಟಿ ರೂ. ಅನುದಾನ ನೀಡಲಾಗಿದೆ. ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ 70 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ 40ಕೋಟಿ ರೂ. ವಿನಿಯೋಗಿಸಲಾಗಿದೆ. ರಾಜ್ಯದಲ್ಲಿ 10ಲಕ್ಷ ಸಸಿಗಳನ್ನು ನೆಡುವ ಗುರಿ ಇದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಂದರ್ಭದಲ್ಲಿ 15 ಕೋಟಿ ರೂ. ಅನುದಾನದಲ್ಲಿ ಆಸ್ಪತ್ರೆಗೆ 5 ಟನ್ ಆಕ್ಸಿಜನ್, ಬಡವರಿಗೆ ಆಹಾರ ಧಾನ್ಯದ ಕಿಟ್ ನೀಡಲಾಗಿದೆ. ಊರಿಗೊಂದು ಕೆರೆ, ಶಾಲೆ, ದೇವಸ್ಥಾನ ಇದ್ದರೆ ಶುದ್ಧಗಾಳಿ ಮತ್ತು ಪ್ರಾಣಿ, ಪಕ್ಷಿಗಳಿಗೆ ನೀರು ಸಿಗಲಿದೆ ಎಂದರು.
ಚಿಂಚೋಳಿ ಕ್ಷೇತ್ರದ ಯೋಜನಾಧಿಕಾರಿ ನಾಮದೇವ ದೇಶಪಾಂಡೆ ಮಾತನಾಡಿ, ಕೊಳ್ಳುರ ಕೆರೆ ಅಭಿವೃದ್ಧಿಯಿಂದ 200 ಹೆಕ್ಟೇರ್ ಜಮೀನಿಗೆ ನೀರಿನ ಉಪಯೋಗವಾಗಲಿದೆ. ಕೊಳ್ಳುರ ಕೆರೆ ಅಭಿವೃದ್ಧಿಗಾಗಿ 26ಲಕ್ಷ ರೂ. ಖರ್ಚು ಮಾಡಲಾಗಿದೆ. ಚಿಕ್ಕನಿಂಗದಳ್ಳಿ, ದೋಟಿಕೊಳ, ಚಂದನಕೇರಾ, ತುಮಕುಂಟಾ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿ ಮಾಡಲಾಗುವುದು. ಕೆರೆ ಅಭಿವೃದ್ಧಿಯಾದರೆ ಕಬ್ಬು ಬೆಳೆಗಾರರಿಗೆ ತರಕಾರಿ ಬೆಳೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ನಿಡಗುಂದಾ ಕಂಚಾಳ ಕುಂಠಿಯ ಪೂಜ್ಯ ಕರುಣೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ಅರಣ್ಯ ಇಲಾಖೆ ನಟರಾಜ ಜಾಧವ ಮಾತನಾಡಿದರು. ಸ್ತ್ರೀಶಕ್ತಿ ಸಂಘದ ತಾಲೂಕು ಒಕ್ಕೂಟದ ಅಧ್ಯಕ್ಷೆ ನರಸಮ್ಮ ಆವಂಟಿ, ಭೀಮರೆಡ್ಡಿ ಪಾಟೀಲ, ಬಕ್ಕಪ್ಪ ಬೆಳಮಗಿ, ಪತ್ರಕರ್ತ ಶಾಮರಾವ ಚಿಂಚೋಳಿ ಮತ್ತಿತರರು ಇದ್ದರು.
ಮಹಾದೇವಿ ಸ್ವಾಗತಿಸಿದರು, ವೀರೇಂದ್ರ ಅಗ್ಗಿಮಠ ನಿರೂಪಿಸಿದರು, ನಾಮದೇವ ದೇಶಪಾಂಡೆ ವಂದಿಸಿದರು. ವಿವಿಧ ಸಂಘಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.