Advertisement

6 ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ತನಿಖಾಸ್ತ್ರ ; 3 ತಿಂಗಳಲ್ಲಿ ವರದಿಗೆ ಸೂಚನೆ

09:23 PM Jan 02, 2025 | Team Udayavani |

ಬೆಂಗಳೂರು: ಸ್ಮಾರ್ಟ್‌ ಸಿಟಿ ಅಭಿಯಾನದಡಿ ನಡೆದಿರುವ ಕಾಮಗಾರಿಗಳ ತನಿಖೆಗೆ ಸರಕಾರ ಮುಂದಾಗಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯದ 6 ನಗರಗಳ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು ಸಂಪೂರ್ಣ ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸೂಚಿಸಿದ್ದಾರೆ.

Advertisement

ಸ್ಮಾರ್ಟ್‌ ಶಾಲೆಗಳು, ಆಸ್ಪತ್ರೆಗಳಂಥ ಕಾಮಗಾರಿಗಳನ್ನು ನಡೆಸುವ ಬದಲು ಒಳಚರಂಡಿ, ಉದ್ಯಾನ ದುರಸ್ತಿ ಕಾರ್ಯಗಳಿಗೆ ಅನುದಾನ ಬಳಸಿದ್ದು ಸರಕಾರದ ಅಸಮಾಧಾನಕ್ಕೆ ಕಾರಣ. ವಿಧಾನಸೌಧದಲ್ಲಿ ಸ್ಮಾರ್ಟ್‌ ಸಿಟಿ ಅಭಿಯಾನದಡಿ ರಾಜ್ಯದ ಮಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಸ್ಮಾರ್ಟ್‌ ಸಿಟಿ ಅಭಿಯಾನ ಆರಂಭವಾದಾಗಿನಿಂದ ಇಲ್ಲಿಯವರೆಗೂ 7 ಸ್ಮಾರ್ಟ್‌ ಸಿಟಿಗಳಲ್ಲಿ 6,415.51 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆದಿವೆ. ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲದ ಕಾರಣ 6 ನಗರಗಳಲ್ಲಿ ನಡೆದ ಕಾಮಗಾರಿಗಳ ಸಂಪೂರ್ಣ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದರು.

ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಅಸಮಾಧಾನ
ಕೇಂದ್ರ ಮತ್ತು ರಾಜ್ಯ ಸರಕಾರದ 50:50 ಅನುಪಾತದ ಅನುದಾನದಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಪ್ರತೀ ಸ್ಮಾರ್ಟ್‌ ಸಿಟಿಗೂ ಅಂದಾಜು 990 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಆದರೆ ಸ್ಮಾರ್ಟ್‌ ಶಾಲೆಗಳು, ಆಸ್ಪತ್ರೆ, ಗ್ರಂಥಾಲಯ, ಬಸ್‌ ನಿಲ್ದಾಣ ಸೇರಿ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿತ್ತು ಎಂದು ಸಚಿವರು ತಿಳಿಸಿದರು.

ಮಾರ್ಚ್‌ಗೆ ಪೂರ್ಣ: ಸಚಿವ
2025ರ ಮಾರ್ಚ್‌ ಅಂತ್ಯಕ್ಕೆ ಸ್ಮಾರ್ಟ್‌ ಸಿಟಿ ಅಭಿಯಾನ ಮುಗಿಯಲಿದ್ದು, ಬರಬೇಕಾಗಿರುವ ಉಳಿಕೆ ಮೊತ್ತ ಹಾಗೂ ಹಾಲಿ ಉಳಿದಿರುವ ಮೊತ್ತದಲ್ಲಿ ಆಧುನಿಕ ತಂತ್ರಜ್ಞಾನದ ಅಂತಾರಾಷ್ಟ್ರೀಯ ಮಟ್ಟದ ಸ್ಮಾರ್ಟ್‌ ಶಾಲೆಗಳ ನಿರ್ಮಾಣಕ್ಕೆ ವಿನೀಯೋಗಿಸಬೇಕು. ಇದರಿಂದಾಗಿ ನಮ್ಮ ಬಡ ಮಕ್ಕಳು ಸಹ ಕಲಿಕೆಯಲ್ಲಿ ಮುಂದುವರಿಯಬೇಕು. ಇದಕ್ಕಾಗಿ ಅತ್ಯಾಧುನಿಕ ಕಲಿಕ ಸಾಮಗ್ರಿಗಳು ಸ್ಮಾರ್ಟ್‌ ಶಾಲೆಗಳಲ್ಲಿ ಒಳಗೊಳ್ಳಬೇಕು ಎಂದು ಸಚಿವ ಬೈರತಿ ಸುರೇಶ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next