ನವದೆಹಲಿ:ಬ್ರಿಟನ್ ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಸೋಮವಾರ(ಡಿಸೆಂಬರ್ 21, 2020) ಬೆಳಗ್ಗೆ ಆಗಮಿಸಿದ್ದ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ ಆರು ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟನ್ ನಲ್ಲಿ ರೂಪಾಂತರ ಹೊಂದಿದ ನೂತನ ವೈರಸ್ ಕ್ಷಿಪ್ರವಾಗಿ ಹರಡುತ್ತಿರುವುದು ಪತ್ತೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬ್ರಿಟನ್ ನಲ್ಲಿ ಹೊಸ ಸೋಂಕು ಶೀಘ್ರವಾಗಿ ಹರಡುತ್ತಿದ್ದ ಪರಿಣಾಮ ಈಗಾಗಲೇ ಹಲವು ದೇಶಗಳು ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದವು.
ಸೋಮವಾರ ಬೆಳಗ್ಗೆ 10.30ಕ್ಕೆ ಬ್ರಿಟನ್ ನಿಂದ ದೆಹಲಿಗೆ ಬಂದಿಳಿದಿದ್ದ ಏರ್ ಇಂಡಿಯಾ ವಿಮಾನದಲ್ಲಿ 266 ಮಂದಿ ಪ್ರಯಾಣಿಕರಿದ್ದರು. ಇವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಆರು ಮಂದಿಗೆ ಸೋಂಕು ಇದ್ದಿರುವುದು ಪತ್ತೆಯಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಲಂಡನ್ ನಿಂದ ಬಂದ ಮಹಿಳೆಗೆ ಕೋವಿಡ್ ಭೀತಿ: ಬೆಳಗಾವಿ ಜನರಲ್ಲಿ ಹೆಚ್ಚಿದ ಆತಂಕ
ಭಾರತಕ್ಕೆ ಬಂದಿಳಿದ ಪ್ರಯಾಣಿಕರಲ್ಲಿ ಪತ್ತೆಯಾದ ಕೋವಿಡ್ ರೂಪಾಂತರ ಹೊಸ ಮಾದರಿಯದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸರ್ಕಾರಿ ಅಧಿಕಾರಿ ಅವನೀಶ್ ಕುಮಾರ್ ತಿಳಿಸಿದ್ದು, ಇದನ್ನು ಎನ್ ಸಿಡಿಸಿ ಖಚಿತಪಡಿಸಬೇಕು ಎಂದು ತಿಳಿಸಿದ್ದಾರೆ.