ಹರಿಯಾಣ : ಎರಡು ಪ್ರತ್ಯೇಕ ಘಟನೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿದ ಘಟನೆ ಹರಿಯಾಣದ ಮಹೇಂದರ್‌ಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಹೇಂದರ್‌ಗಢದಲ್ಲಿ ಸುಮಾರು 7 ಅಡಿಯ ಗಣೇಶ ಮೂರ್ತಿ ವಿಸರ್ಜನೆ ಮಾಡುವ ವೇಳೆ 9 ಮಂದಿ ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಈ ವೇಳೆ ನೆರವಿಗೆ ಬಂದ ರಾಷ್ಟ್ರೀಯ ವಿಪತ್ತು ತಂಡ ಹಾಗೂ ಸ್ಥಳೀಯರ ನೆರವಿನೊಂದಿಗೆ ಐದು ಮಂದಿಯನ್ನು ರಕ್ಷಣೆ ಮಾಡಿದ್ದು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನೊಂದು ಘಟನೆಯಲ್ಲಿ ಸೋನಿಪತ್ ಜಿಲ್ಲೆಯ ಯಮುನಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ನೀರಿನಲ್ಲಿ ಮುಳುಗಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಮೃತರ ಕುಟುಂಬಗಳೊಂದಿಗೆ ನಿಂತಿದ್ದೇವೆ. ಎನ್‌ಡಿಆರ್‌ಎಫ್ ತಂಡ ಅನೇಕ ಜನರನ್ನು ರಕ್ಷಿಸಿದೆ. ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಖಟ್ಟರ್ ಟ್ವೀಟ್ ಮಾಡಿದ್ದಾರೆ.