Advertisement

6 ದಿನ ಕಾಡು ಸುಟ್ಟ ಕಾಡ್ಗಿಚ್ಚು ತಹಬದಿಗೆ

11:32 AM Feb 28, 2019 | |

ಗುಂಡ್ಲುಪೇಟೆ: ಕಳೆದ ಆರು ದಿನಗಳಿಂದ ಕಾಡ್ಗಿಚ್ಚಿ ನಿಂದ ಹಾನಿಗೊಳಗಾದ ಬಂಡೀಪುರ ಹುಲಿ ರಕ್ಷಿತಾ ರಣ್ಯದ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಬರೋಬ್ಬರಿ 10 ಸಾವಿರ ಎಕರೆ ಅರಣ್ಯವನ್ನು ಬಲಿ ಪಡೆದು ಬೆಂಕಿ ಕಡೆಗೂ ತಹಬದಿಗೆ ಬಂದಿದೆ.

Advertisement

ಮಧ್ಯಾಹ್ನ 12.30ರ ವೇಳೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಮುಖ್ಯಮಂತ್ರಿ ಯವರು ಹುಲಿ ಯೋಜನೆಯ ವ್ಯಾಪ್ತಿಯಲ್ಲಿನ ಕಾಡ್ಗಿಚ್ಚಿನಿಂದ ಹೆಚ್ಚು ಹಾನಿಗೊಳಗಾಗಿರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ವಲಯದ ಕರಡಿಕಲ್ಲು ಬೆಟ್ಟ, ಗುಮ್ಮನಗುಡ್ಡ ಮತ್ತು ಬೋಳ
ಗುಡ್ಡ ಪ್ರದೇಶಗಳಲ್ಲಿ ಅಲ್ಲದೇ ಚಮ್ಮನಹಳ್ಳ, ತಿಪ್ಪನಹಳ್ಳ, ಮದ್ದೂರು ಅರಣ್ಯ ವಲಯ, ಮೂಲೆಹೊಳೆ ಅರಣ್ಯ ಹಾಗೂ ಕರಡಿಬೆಟ್ಟ ಅರಣ್ಯ ವಲಯ, ಕುಂದಕೆರೆ ಅರಣ್ಯ ವಲಯದಲ್ಲಿನ ಪ್ರದೇಶಗಳಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಸಂಚರಿಸಿ ವೈಮಾನಿಕ ಸಮೀಕ್ಷೆ ನಡೆಸಿ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡರು. ಹೆಲಿಕಾಪ್ಟರ್‌ ಸಮೀಕ್ಷೆಯನ್ನು ಮುಗಿಸಿ ಹಾಗೆಯೇ ಮಂಡ್ಯಕ್ಕೆ ಪ್ರಯಾಣ ಬೆಳೆಸಿದರು.

ಕಳೆದ 24ರಂದು ಅರಣ್ಯ ಸಚಿವ ಸತೀಶ್‌ ಜಾರಕಿ ಹೋಳಿ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಯು ಸೇನೆಯ ಎರಡು ಹೆಲಿಕಾಪ್ಟರ್‌ ಮೂಲಕ ಬೆಂಕಿ ನಂದಿಸಲು ಆದೇಶಿಸಿದ್ದರು. ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಬೆಂಕಿಯು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಆದರೆ, ಅಪರೂಪದ ಜೀವ ವೈವಿಧ್ಯಗಳು ಮತ್ತು ಅಪಾರ ಪ್ರಮಾಣದ ವನ್ಯ ಸಂಪತ್ತು ಬೆಂಕಿಯಲ್ಲಿ ಭಸ್ಮವಾಗಿದೆ.

10 ಸಾವಿರ ಎಕರೆ ಭಸ್ಮ: ಫೆ 21ರ ಸಂಜೆ ಹುಲಿ ಯೋಜನೆಯ ಕುಂದಕೆರೆ ವಲಯದ ಲೊಕ್ಕೆರೆ ಪ್ರದೇಶಕ್ಕೆ ಬಿದ್ದ ಬೆಂಕಿಯು ಸತತ 6 ದಿನಗಳ ಕಾಲ ನಿಯಂತ್ರಣಕ್ಕೆ ಬಾರದೇ ಸಮೀಪದ ಹಿಮವದ್‌ ಗೋಪಾಲಸ್ವಾಮಿಬೆಟ್ಟ, ಬಂಡೀಪುರ, ಮದ್ದೂರು ಹಾಗೂ ಮೂಲೆಹೊಳೆ ವಲಯಗಳಿಗೂ ಹರಡಿತ್ತು. ಸತತ ಆರು ದಿನಗಳ ಕಾಲ ಬೆಂಕಿನಂದಿಸಲು ನಡೆದ ಪ್ರಯತ್ನಗಳು ಸಫ‌ಲವಾಗದೆ 10 ಸಾವಿರ ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.

 ಗೋಪಾಲಸ್ವಾಮಿ ಬೆಟ್ಟ ಮೇಲಿರುವ ಗುಡ್ಡಗಳಿಗೆ ಮಾನವರು ಹೋಗಿ ಬೆಂಕಿ ನಂದಿಸಲು ಅಸಾಧ್ಯವೆಂದು ಅರಿತ ವಾಯುಸೇನೆಯ ಹೆಲಿಕಾಪ್ಟರ್‌ ಅವಿರತವಾಗಿ 24, 25 ಹಾಗೂ 26ರಂದು ನೀರು ಸಿಂಪಡಿಸುವ ಮೂಲಕ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಬೆಂಕಿ ನಂದಿಸಿದವು.

Advertisement

ಶಾಂತವಾದ ಬಂಡೀಪುರ: ಕಳೆದ ಆರು ದಿನ ಗಳಿಂದ ತನ್ನ ರುದ್ರನರ್ತನವನ್ನು ತೋರಿಸಿದ ಬೆಂಕಿಯು ಈಗ ಸಂಪೂರ್ಣವಾಗಿ ಶಾಂತವಾಗಿದೆ. ಸಫಾರಿ ವಲಯ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ವಲಯ, ಕುಂದಕೆರೆ ಸೇರಿದಂತೆ ಬಂಡೀಪುರ ಅರಣ್ಯ ವಲಯದಲ್ಲಿ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಎರಡು ಹೆಲಿಕಾಪ್ಟರ್‌ ಗಳು ವಾಪಸ್‌ ಹೋಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಅಗ್ನಿಶಾಮಕದಳದ ವಾಹನಗಳು ಮತ್ತು ಸಿಬ್ಬಂದಿ, ಸ್ವಯಂ ಸೇವಕರು ಬಂಡೀಪುರದಲ್ಲಿನ ಆಯಕಟ್ಟಿನ ಸ್ಥಳದಲ್ಲಿ ಇದ್ದು ಬೆಂಕಿಯಿಂದ ರಕ್ಷಿಸಲು ಸಿದ್ಧರಾಗಿದ್ದಾರೆ

ಬಂಡೀಪುರ ಸಿಎಫ್ ಆಗಿ ಬಾಲಚಂದ್ರ ನೇಮಕ
ಚಾಮರಾಜನಗರ: ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಹಾಗೂ ಹುಲಿ ಯೋಜನೆ ನಿರ್ದೇಶಕರಾಗಿ ಟಿ. ಬಾಲಚಂದ್ರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಟಿ. ಬಾಲಚಂದ್ರ ಅವರು ನಾಗರಹೊಳೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಇದುವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಅಂಬಾಡಿ ಮಾಧವ್‌ ಅವರು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಗೊಂಡು ಎರಡು ತಿಂಗಳಾದರೂ ಈ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಿರಲಿಲ್ಲ. ಅಂಬಾಡಿ ಮಾಧವ್‌ ಅವರೇ ಪ್ರಭಾರ ವಹಿಸಿಕೊಂಡಿದ್ದರು.

ದೇಶದ ಪ್ರಮುಖ ಹುಲಿ ಸಂರಕ್ಷಿತ ಅರಣ್ಯವಾದ ಬಂಡೀಪುರದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಎರಡು ತಿಂಗಳ ಕಾಲ ತೆರವಾಗಿದ್ದು ಟೀಕೆಗೆ ಕಾರಣವಾಗಿತ್ತು. ಕಾಡ್ಗಿಚ್ಚಿನಂಥ ತುರ್ತು ಸ್ಥಿತಿಯನ್ನು ನಿರ್ವಹಿಸಲು ಇದು ತೊಡಕಾಗಿ ಪರಿಣಮಿಸಿತು ಎಂದು ಪರಿಸರ ಹೋರಾಟ
ಗಾರರು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next