Advertisement

ನೇರಳೆ ಮಾರ್ಗದಲ್ಲಿ ಮತ್ತೆ 6 ಬೋಗಿ ರೈಲು

12:38 PM Oct 05, 2018 | |

ಬೆಂಗಳೂರು: ನಮ್ಮ ಮೆಟ್ರೊನ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ನೇರಳೆ ಮಾರ್ಗದಲ್ಲಿ ಗುರುವಾರ ಎರಡನೇ 6 ಬೋಗಿ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಮತ್ತೂಂದು 6 ಬೋಗಿ ರೈಲು ಸಂಚರಿಸಲಿದೆ. ಮೆಜೆಸ್ಟಿಕ್‌ ನಿಲ್ದಾಣದ ನೇರಳೆ ಮಾರ್ಗದ ಫ್ಲಾಟ್‌ಫಾರಂನಲ್ಲಿ 6 ಬೋಗಿ ರೈಲಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿದರು.

Advertisement

ನೇರಳೆ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಜನದಟ್ಟಣೆ ಹೆಚ್ಚಾಗಿರುವುದರಿಂದ 6 ಬೋಗಿ ರೈಲು ಸೇವೆ ಜೂನ್‌ ತಿಂಗಳಲ್ಲಿಯೇ ಆರಂಭಿಸಿದ್ದು, ಇದೀಗ ಎರಡನೇ 6 ಬೋಗಿ ರೈಲು ಸೇರ್ಪಡೆಗೊಳಿಸಲಾಗಿದೆ. ನವೆಂಬರ್‌ನಿಂದ ಪ್ರತಿ ತಿಂಗಳು ಎರಡು ಅಥವಾ ಮೂರು 6 ಬೋಗಿ ರೈಲುಗಳು ಇದೇ ಮಾರ್ಗದಲ್ಲಿ ಕಾರ್ಯಾಚರಣೆಗಿಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

ಈ ಮೊದಲು 6 ಬೋಗಿ ರೈಲು ಸಂಚಾರ ಆರಂಭಿಸಲು ಹಲವು ಅನುಮತಿಗಳು ಪಡೆಯಬೇಕಿದ್ದರಿಂದ ಸಂಚಾರ ತಡವಾಗಿತ್ತು. ಎರಡನೇ ರೈಲಿಗೆ ಯಾವುದೇ ಅನುಮತಿ ಅಗತ್ಯವಿಲ್ಲದ ಹಿನ್ನೆಲೆಯಲ್ಲಿ ಕೆಲವೊಂದು ಪರೀಕ್ಷೆಗಳನ್ನು ನಡೆಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದೀಗ ಮತ್ತೆ 3 ಬೋಗಿಗಳ ಸೆಟ್‌ ಬಿಇಎಂಎಲ್‌ನಿಂದ ಮೆಟ್ರೊಗೆ ಲಭ್ಯವಾಗಿದ್ದು, ಬೈಯಪ್ಪನಹಳ್ಳಿ ಡಿಪೋದಲ್ಲಿ ಪರೀಕ್ಷೆ ನಡೆಸಲಾಗಿತ್ತಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಕಾರ್ಯಾಚರಣೆಗೆ ನಡೆಸುವ ಸಾಧ್ಯೆಯಿದೆ ಎನ್ನಲಾಗಿದೆ.

ಜನವರಿ ವೇಳೆಗೆ ಹಸಿರು ಮಾರ್ಗಕ್ಕೂ 6 ಬೋಗಿ: ನೇರಳೆ ಮಾರ್ಗದಲ್ಲಿ 6 ಬೋಗಿಯ ಐದಾರು ರೈಲುಗಳು ಸಂಚಾರ ಆರಂಭಿಸಿದ ನಂತರ ಯಲಚೇನಹಳ್ಳಿ-ನಾಗಸಂದ್ರ ಹಸಿರು ಮಾರ್ಗದಲ್ಲಿ 6 ಬೋಗಿ ರೈಲು ಸೇವೆ ಆರಂಭಿಸಲು ಉದ್ದೇಶಿಸಿದ್ದು, ಡಿಸೆಂಬರ್‌ ಅಥವಾ ಜನವರಿ ವೇಳೆಗೆ ಆರು ಬೋಗಿ ರೈಲು ಸಂಚಾರ ಆರಂಭಿಸುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಬಿಎಂಆರ್‌ಸಿಎಲ್‌ ವತಿಯಿಂದ ಎರಡೂ ಮಾರ್ಗಗಳಲ್ಲಿ ಒಟ್ಟು 50 ರೈಲುಗಳು ಸಂಚಾರ ನಡೆಸುತ್ತಿದ್ದು, ನೇರಳೆ ಮಾರ್ಗಕ್ಕೆ 21 ಹಾಗೂ ಹಸಿರು ಮಾರ್ಗಕ್ಕೆ 29 ರೈಲುಗಳನ್ನು ನಿಗದಿಪಡಿಸಲಾಗಿದೆ. ಆದರೆ, ನೇರಳ ಮಾರ್ಗದಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಹಸಿರು ಮಾರ್ಗದ ಹಲವು ರೈಲುಗಳನ್ನು ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

Advertisement

ನೇರಳೆ ಮಾರ್ಗದಲ್ಲಿ 6 ಬೋಗಿ ರೈಲುಗಳ ಸಂಚಾರ ಹೆಚ್ಚಾದ ಬಳಿಕ ನಿಗದಿಯಂತೆ ರೈಲುಗಳು ಸಂಚಾರ ಮಾಡಲಿವೆ ಎಂದು ಬಿಎಂಆರ್‌ಸಿಎಲ್‌ ಮೇಲ್ವಿಚಾರಣೆ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಎ.ಎಸ್‌.ಶಂಕರ್‌ ಹೇಳಿದರು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂಸದ ಪಿ.ಸಿ.ಮೋಹನ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮೇಯರ್‌ ಗಂಗಾಂಬಿಕೆ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಹೆಚ್ಚುವತಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಸಂಜೆಯಿಂದ ಕಾರ್ಯಾಚರಣೆ: ಗುರುವಾರ ಸಂಜೆಯಿಂದಲೇ ಆರು ಬೋಗಿ ರೈಲು ಸೇವೆ ಆರಂಭಿಸಿ ನಾಲ್ಕು ಟ್ರಿಪ್‌ ಸೇವೆ ನೀಡಿದೆ. ಅದರಂತೆ ಶುಕ್ರವಾರ ಬೆಳಗ್ಗೆ 7.47ಕ್ಕೆ ಬೈಯಪ್ಪನಹಳ್ಳಿಯಿಂದ ಹೊರಡಲಿರುವ ರೈಲು 4 ಟ್ರಿಪ್‌ ಸಂಚಾರ ಮಾಡಿ 10.48ಕ್ಕೆ ಬೈಯಪ್ಪನಹಳ್ಳಿ ಡಿಪೋಗೆ ಹಿಂತಿರುಗಲಿದೆ. ಸಂಜೆ 5.05ಕ್ಕೆ ಮತ್ತೆ ಕಾರ್ಯಾಚರಣೆ ಆರಂಭಿಸುವ ರೈಲು 4 ಟ್ರಿಪ್‌ ಸಂಚಾರ ನಡೆಸಿ ರಾತ್ರಿ 8.11ಕ್ಕೆ ಹಿಂತಿರುಗಲಿದೆ. ಬೆಳಗ್ಗೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ನೇರ ಸಂಚಾರ ನಡೆಯಲಿದೆ. ಸಂಜೆ ನಿಗದಿತ ಸಮಯದಲ್ಲಿ ಬೈಯಪ್ಪನಹಳ್ಳಿ-ವಿಜಯನಗರ ನಡುವೆ ಲೂಪ್‌ ರೈಲಿನಂತೆ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ಪರದಾಟ: ಆರು ಬೋಗಿ ರೈಲಿಗೆ ಮುಖ್ಯಮಂತ್ರಿಗಳು ಚಾಲನೆ ನೀಡುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಪ್ರಯಾಣಿಕ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇನ್ನು ಬೇರೆ ಕಡೆಯಿಂದ ಪ್ರಯಾಣಿಕರು ಬಂದು ಕೆಲವು ನಿಮಿಷಗಳ ಕಾಲ ಅವರನ್ನು ಹೊರಗೆ ಹೋಗದಂತೆ ತಡೆಯಲಾಗಿತ್ತು. ಹೀಗಾಗಿ ಕೆಲ ಹೊತ್ತು ಪ್ರಯಾಣಿಕರು ಪರದಾಡಿದರು.

141ಬೋಗಿ ದೊರೆಯಬೇಕಿದೆ: ನೇರಳೆ ಮಾರ್ಗದಲ್ಲಿ ಬೆಳಗ್ಗೆ 9.30 ರಿಂದ 10.30ರವರೆಗೆ ಸರಾಸರಿ 19,400 ಮಂದಿ ಹಾಗೂ ಹಸಿರು ಮಾರ್ಗದಲ್ಲಿ 9,700 ಮಂದಿ ಪ್ರಯಾಣಿಸುತ್ತಾರೆ. ನೇರಳೆ ಮಾರ್ಗದಲ್ಲಿ ದಟ್ಟಣೆ ಹೆಚ್ಚಾಗಿರುವುದರಿಂದ ಆರು ಬೋಗಿ ರೈಲುಗಳನ್ನು ಆದ್ಯತೆ ಮೇರೆಗೆ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 1,421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ಬಿಇಎಂಎಲ್‌ನಿಂದ ಪಡೆಯಲಾಗುತ್ತಿದೆ. ಈಗಾಗಲೇ 9 ಬೋಗಿಗಳು ಲಭ್ಯವಾಗಿದ್ದು, ಇನ್ನು 141 ಬೋಗಿಗಳು ದೊರೆಯಬೇಕಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇs… ಹೇಳಿದರು.

ಪಾದಚಾರಿ ಮೇಲ್ಸೇತುವೆಗೆ ಚಾಲನೆ: ನಮ್ಮ ಮೆಟ್ರೊ ಪ್ರಯಾಣಿಕರಿಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಿಗೆ ಹೋಗಲು ಅನುಕೂಲವಾಗುವಂತೆ ಈಗಾಗಲೇ ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದಲ್ಲಿ 4 ಪ್ರವೇಶ ದ್ವಾರಗಳಿವೆ. ಇದೀಗ 5ನೇ ಪ್ರವೇಶದ್ವಾರ ಹಾಗೂ ಅದಕ್ಕೆ ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಗೆ ಗುರುವಾರ ಚಾಲನೆ ದೊರೆಯಿತು. ಪಾದಚಾರಿ ಮೇಲ್ಸೇತುವೆಯು ಒಟ್ಟು 100 ಮೀಟರ್‌ ಉದ್ದವಿದ್ದು, 70 ಮೀಟರ್‌ ಕಾಂಕ್ರಿಟ್‌ ಹಾಗೂ 30 ಮೀಟರ್‌ ಕಬ್ಬಿಣದಿಂದ ನಿರ್ಮಿಸಲಾಗಿದೆ. 6 ಮೀಟರ್‌ ಆಗಲಿರುವ ಸೇತುವೆಯನ್ನು ಬಿಬಿಎಂಪಿ ವತಿಯಿಂದ 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next