Advertisement

8 ದಿನದಲ್ಲಿ 6.76 ಲಕ್ಷ ರೂ. ದಂಡ ವಸೂಲಿ

01:21 PM Sep 14, 2019 | Team Udayavani |

ಮಂಡ್ಯ: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ದಂಡ ಪ್ರಯೋಗ ಇದೀಗ ಜಿಲ್ಲೆಯಲ್ಲಿ ಸದ್ದಿಲ್ಲದೆ ಜಾರಿಯಾಗಿದೆ. ಸೆ.1ರಿಂದ ವಿಧಿಸಲಾಗುತ್ತಿರುವ ದಂಡ ಮೊತ್ತದ ಬಿಸಿಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಕೇವಲ ಎಂಟು ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ 1752 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು 6.76 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಕಳೆದ ಎಂಟು ತಿಂಗಳಲ್ಲಿ 58,699 ಪ್ರಕರಣಗಳು ದಾಖಲಾಗಿ 82.64 ಲಕ್ಷ ರೂ. ದಂಡ ವಸೂಲಿ ಮಾಡಿದೆ.

Advertisement

ಈವರೆಗೆ ಸಂಚಾರ ನಿಯಮಗಳ ಬಗ್ಗೆ ಜಿಲ್ಲೆಯ ಬಹುತೇಕ ಜನರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾವಾಗ ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಪೊಲೀಸರು ಅಡ್ಡಗಟ್ಟಿ ವಾಹನಗಳ ತಪಾಸಣೆ ನಡೆಸಿ ದಂಡ ವಸೂಲಿಗೆ ಮುಂದಾದರೋ ಜನರು ಬೆಚ್ಚಿಬಿದ್ದರು. ದುಬಾರಿ ದಂಡ ಭರಿಸಲಾಗದೆ ಹೌಹಾರಿದರು. ಜೇಬಲ್ಲಿದ್ದ ಹಣವೆಲ್ಲವೂ ದಂಡ ಕಟ್ಟುವುದಕ್ಕೆ ಖಾಲಿಯಾಗುತ್ತಿತ್ತು. ಖಾಲಿ ಜೇಬಿನಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದೀಗ ಕೇಂದ್ರ ಸರ್ಕಾರ ಹೊಸ ಮೋಟಾರು ವಾಹನ ಕಾಯಿದೆಯ ನಿಯಮಗಳು ಮತ್ತು ಭಾರಿ ಮೊತ್ತದ ದಂಡ ಪ್ರಯೋಗ ಜಾರಿಯಾದ ನಂತರದಲ್ಲಿ ಜನರಿಗೆ ತಲೆ ಬಿಸಿ ಉಂಟುಮಾಡಿದೆ. ಈಗ ವಾಹನಗಳ ದಾಖಲೆಗಳಿಲ್ಲದೆ ಸಂಚಾರಕ್ಕಿಳಿಯುವುದಕ್ಕೂ ಜನರು ಭಯಪಡುತ್ತಿದ್ದಾರೆ.

ಏನೇನು ಪ್ರಕರಣಗಳು?: ವಾಹನಗಳ ವಿಮೆ, ಆರ್‌ಸಿ, ಎಫ್‌ಸಿ, ಎಮಿಷನ್‌ ಟೆಸ್ಟ್‌ ಪ್ರಮಾಣ ಪತ್ರ, ಡಿಎಲ್ನ್ನು ವಾಹನಗಳ ಚಾಲನೆ ವೇಳೆ ಚಾಲಕರು ತಮ್ಮೊಂದಿಗೆ ಇಟ್ಟುಕೊಳ್ಳುವುದು ಕಡ್ಡಾಯ. ನಿಗದಿತ ವೇಗದಲ್ಲಿ ಮಾತ್ರ ವಾಹನ ಚಾಲನೆ ಮಾಡುವುದು. ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ದ್ವಿಚಕ್ರ ವಾಹನಗಳ ಹ್ಯಾಂಡಲ್, ಬಂಪರ್‌ಗಳ ವಿನ್ಯಾಸವನ್ನು ಬದಲಿಸುವಂತಿಲ್ಲ. ಕರ್ಕಶ ಧ್ವನಿಯ ಹಾರ್ನ್ಗಳನ್ನು ಉಪಯೋಗಿಸುವಂತಿಲ್ಲ. ರಸ್ತೆಯಲ್ಲಿ ವಾಹನ ಚಾಲನೆ ವೇಳೆ ವ್ಹೀಲಿಂಗ್‌ ಮಾಡುವಂತಿಲ್ಲ, ತ್ರಿಬ್ಬಲ್ ರೈಡಿಂಗ್‌ಗೂ ನಿಷೇಧವಿದೆ. ಅದೇ ರೀತಿ ನಾಲ್ಕು ಚಕ್ರದ ವಾಹನಗಳ ಬಂಪರ್‌ಗಳ ವಿನ್ಯಾಸವೂ ಮೂಲ ರೂಪದಲ್ಲೇ ಇರಬೇಕು. ವಾಹನಗಳಿಗೆ ಅಧಿಕ ಭಾರ ಹಾಕುವಂತಿಲ್ಲ ಎಂಬುದು ಸೇರಿದಂತೆ ಸಾಕಷ್ಟು ನಿಯಮಗಳನ್ನು ಚಾಲಕರು ವಾಹನ ಚಾಲನೆ ವೇಳೆ ಪಾಲಿಸುವುದು ಅನಿವಾರ್ಯವಾಗಿದೆ.

ಕುಡಿದು ವಾಹನ ಚಾಲನೆ ಪ್ರಕರಣ 20: ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ 7 ದಿನಗಳಲ್ಲಿ 20 ಪ್ರಕರಣಗಳು ವರದಿಯಾಗಿವೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರನ್ನು ತಪಾಸಣೆ ನಡೆಸಿ ದಂಡ ಮೊತ್ತ ಪಾವತಿಸಲು ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಆದರೆ, ಸಂಚಾರ ನಿಯಮಗಳನ್ನು ಉಲ್ಲಂಘನೆ, ಚಾಲನಾ ಪರವಾನಗಿ, ವಾಹನಗಳ ದಾಖಲೆಗಳನ್ನು ಹೊಂದಿಲ್ಲದವರ ವಿರುದ್ಧವೂ ಹೊಸ ಮೋಟಾರು ವಾಹನ ಕಾಯಿದೆಯ ಪ್ರಕಾರ ಸ್ಥಳದಲ್ಲೇ ಪ್ರಕರಣ ದಾಖಲಿಸಿ ದುಬಾರಿ ದಂಡವನ್ನು ಅಲ್ಲೇ ವಸೂಲಿ ಮಾಡಲಾಗುತ್ತಿದೆ.

ಜಿಲ್ಲೆಯ ಜನರಲ್ಲಿ ತಲ್ಲಣ ಸೃಷ್ಟಿಸಿರುವ ಹೊಸ ಮೋಟಾರು ವಾಹನ ಕಾಯಿದೆ ಜಾರಿ ಹಾಗೂ ದುಬಾರಿ ಮೊತ್ತದ ದಂಡ ಪ್ರಯೋಗ ಎಲ್ಲರಲ್ಲೂ ಭಯ ಹುಟ್ಟಿಸಿದೆ. ಹೀಗಾಗಿ ವಾಹನ ಚಾಲನಾ ಪರವಾನಗಿ ಮತ್ತು ವಾಹನಗಳ ವಿಮೆ ಮಾಡಿಸಿಕೊಳ್ಳಲು ಜನರು ಮುಗಿ ಬಿದ್ದಿದ್ದಾರೆ. ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನವೀಕರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಹೊಸದಾಗಿ ವಾಹನ ಚಾಲನಾ ಪರವಾನಗಿ ಪಡೆಯುವವರು, ನವೀಕರಣ ಮಾಡಿಸುವವರು ಹಾಗೂ ದ್ವಿಚಕ್ರ ವಾಹನ ಚಾಲನಾ ಪರವಾನಗಿ ಹೊಂದಿದ್ದವರು ನಾಲ್ಕು ಚಕ್ರದ ವಾಹನದ ಚಾಲನಾ ಪರವಾನಗಿ ಪತ್ರ ಪಡೆಯಲು ಸಲ್ಲಿಸುತ್ತಿರುವ ಅರ್ಜಿಗಳ ಸಂಖ್ಯೆ ಕಳೆದೊಂದು ವಾರದಿಂದ ಹೆಚ್ಚಾಗುತ್ತಿದೆ. ಬಹುತೇಕರು ಸೈಬರ್‌ ಸೆಂಟರ್‌ಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕುತ್ತಿರುವುದರಿಂದ ಆರ್‌ಟಿಒ ಕಚೇರಿಗೆ ಬರುವವರ ಸಂಖ್ಯೆ ಸಹಜವಾಗಿ ಕಡಿಮೆ ಇದೆ. ಕಚೇರಿಗೆ ಅಲೆಯಲು ಬಯಸದ ಬಹಳಷ್ಟು ಜನರು ಮಧ್ಯವರ್ತಿಗಳ ಮೂಲಕ ವಾಹನಗಳ ದಾಖಲೆ ಸಂಗ್ರಹಕ್ಕೆ ಅರ್ಜಿ ಹಾಕುತ್ತಿದ್ದಾರೆ. ಆದರೆ, ಆರ್‌ಟಿಒ ಕಚೇರಿಯಲ್ಲಿ ಚಾಲನಾ ಪರವಾನಗಿ ನವೀಕರಣ ಹಾಗೂ ಕಾರು ಬೈಕು ಒಟ್ಟುಗೂಡಿಸಿ ಒಂದೇ ಚಾಲನ ಪರವಾನಗಿ ನೀಡುವ ಸಾಫ್ಟ್ವೇರ್‌ ಬದಲಾಯಿಸಲಾಗಿದೆ. ಅದಿನ್ನೂ ಪೂರ್ಣಪ್ರಮಾಣದಲ್ಲಿ ಅಪ್‌ಡೇಟ್ ಆಗದಿರುವ ಹಿನ್ನೆಲೆಯಲ್ಲಿ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಇದರ ಜೊತೆಗೆ ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿಯೂ ಕಚೇರಿ ಕೆಲಸಗಳೆಲ್ಲವೂ ಮಂದಗತಿಯಲ್ಲಿ ಸಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next