Advertisement

ಮಾತೃ ವಂದನಾ ಯೋಜನೆಯಡಿ 6.68 ಕೋ.ರೂ. ವಿತರಣೆ

11:01 PM Oct 18, 2019 | Sriram |

ವಿಶೇಷ ವರದಿಉಡುಪಿ: ಮಹಿಳೆಯರ ಮೊದಲ ಪ್ರಸವ ಮತ್ತು ಅನಂತರದ ವಿಶ್ರಾಂತಿಗಾಗಿ ಅಂಶಿಕ ಪರಿಹಾರದ ಪ್ರೋತ್ಸಾಹದ ರೂಪದಲ್ಲಿ ಆರ್ಥಿಕ ಸೌಲಭ್ಯ ನೀಡುವ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಉಡುಪಿ ಜಿಲ್ಲೆಯ ಗರ್ಭಿಣಿಯರಿಗೆ 6.68 ಕೋ.ರೂ. ಎರಡು ವರ್ಷಗಳಲ್ಲಿ ವಿತರಣೆಯಾಗಿದೆ.

Advertisement

ಜಿಲ್ಲೆಯಲ್ಲಿ 2017ರ ಜನವರಿಯಿಂದ 2019 ಅ. 16ರ ವರೆಗೆ ಸುಮಾರು ಉಡುಪಿ ತಾಲೂಕಿನಲ್ಲಿ 6,900, ಕುಂದಾಪುರದಲ್ಲಿ 5,946, ಕಾರ್ಕಳದಲ್ಲಿ 1,835 ಗರ್ಭಿಣಿ ಯರು ಸೇರಿದಂತೆ ಒಟ್ಟು 14,681 ಗರ್ಭಿಣಿಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.

42,000 ಅರ್ಜಿ ಸಲ್ಲಿಕೆ
ಯೋಜನೆ ಆರಂಭವಾಗಿ ಎರಡು ವರ್ಷ ಗಳು ಕಳೆದಿವೆ. ಅರ್ಜಿಗಳು ನಿರಂತರವಾಗಿ ಸಲ್ಲಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಮೂರು ಹಂತದಲ್ಲಿ 42,489 ಅರ್ಜಿಗಳು ಸಲ್ಲಿಕೆಯಾಗಿದೆ. ಅದರಲ್ಲಿ 40,253 ಅರ್ಜಿಗಳಿಗೆ ಹಣ ಪಾವತಿಯಾಗಿದೆ. ಸುಮಾರು 2,000 ಅರ್ಜಿಗಳು ವಿಲೇವಾರಿ ವಿವಿಧ ಹಂತದಲ್ಲಿ ಬಾಕಿಯಿವೆ. ಸುಮಾರು 236 ಅರ್ಜಿಗಳು ಆಧಾರ್‌ ಕಾರ್ಡ್‌ ಹಾಗೂ ದಾಖಲೆ ಕೊರತೆಯಿಂದಾಗಿ ತಿರಸ್ಕೃತಗೊಂಡಿದೆ.

ಏನಿದು ಯೋಜನೆ?
ಯೋಜನೆ ಅನ್ವಯ ಒಟ್ಟು 3 ಕಂತುಗಳಲ್ಲಿ ಗರ್ಭಿಣಿಯರಿಗೆ ಒಟ್ಟು 5,000 ರೂ. ನೀಡಲಾಗುತ್ತದೆ. ಗರ್ಭಿಣಿಯಾದ 150 ದಿನಗಳ ಬಳಿಕ ಯೋಜನೆಯಡಿ 1,000 ರೂ ಮತ್ತು 2ನೇ ಹಂತದಲ್ಲಿ ನಿರಂತರ ತಪಾಸಣೆ ಮತ್ತು ಅಗತ್ಯ ಚುಚ್ಚುಮದ್ದುಗಳನ್ನು ಪಡೆಯಲು 2,000 ರೂ., ಮಗುವಿನ ಜನನದ ಬಳಿಕ ಮಗುವಿಗೆ ಮೊದಲ ಚುಚ್ಚುಮದ್ದು ಹಾಕಿದ ದಾಖಲೆ ಒದಗಿಸಿದರೆ 2,000 ರೂ.ಗಳನ್ನು ಮಗು ಮತ್ತು ತಾಯಿಯ ನಿರ್ವಹಣೆಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಸರಕಾರಿ ನೌಕರರನ್ನು ಹೊರತುಪಡಿಸಿ ಮೊದಲನೆ ಬಾರಿ ಗರ್ಭಿಣಿಯಾದವರು ಮಾತೃ ವಂದನ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಎಪಿಎಲ್‌ ಕಾರ್ಡುದಾರರೂ ಅರ್ಜಿ ಸಲ್ಲಿಸಬಹುದು. ಮೂರೂ ಹಂತಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಗರ್ಭ ಧರಿಸಿದ ಮೂರು ತಿಂಗಳೊಳಗೆ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ನೀಡಬೇಕು. ಅರ್ಜಿಯನ್ನು ನವೀಕರಿಸಿದ ಆಧಾರ್‌ ಕಾರ್ಡ್‌, ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ತಾಯಿ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ (ಆಧಾರ್‌ ಜೋಡಿಸಿದ ಖಾತೆ) ಸಂಖ್ಯೆಯ ಪ್ರತಿ ಕೊಡಬೇಕು.

Advertisement

ನವೀಕೃತ
ಆಧಾರ್‌ ಕಾರ್ಡ್‌
ಜಿಲ್ಲೆಯಲ್ಲಿ ಮಾತೃ ವಂದನಾ ಯೋಜನೆಯಲ್ಲಿ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ಅರ್ಜಿ ಸಲ್ಲಿಸುವಾಗ ಫ‌ಲಾನುಭವಿಗಳು ನವೀಕೃತ ಆಧಾರ್‌ ಕಾರ್ಡ್‌ ಹಾಗೂ ದಾಖಲೆಯೊಂದಿಗೆ ಸಲ್ಲಿಸಬೇಕು.
-ಗ್ರೇಸಿ ಗೊನ್ಸಾಲ್ವಿಸ್‌, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next