Advertisement

5ನೇ ಸೆಮಿಸ್ಟರ್‌ ಪರೀಕ್ಷೆಬರೆದರೂ ಫಲಿತಾಂಶದಲ್ಲಿ ಗೈರು!

08:55 AM Feb 12, 2019 | |

ಕೊಪ್ಪಳ: ಬಳ್ಳಾರಿ ವಿಶ್ವವಿದ್ಯಾಲಯವು ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ವಿದ್ಯಾರ್ಥಿಗಳು ಬಿ.ಎ. 5ನೇ ಸೆಮಿಸ್ಟರ್‌ ಪರೀಕ್ಷೆ ಬರೆದರೂ ಸಹಿತ ಫಲಿತಾಂಶದಲ್ಲಿ ಗೈರೆಂದು ನಮೂದಿಸಿ ಮತ್ತೂಂದು ಎಡವಟ್ಟು ಮಾಡಿಕೊಂಡಿದೆ. ಹೀಗಾಗಿ ವಿವಿಯ ಎಡವಟ್ಟುಗಳ ಬಗ್ಗೆ ಶಿಕ್ಷಣ ತಜ್ಞರು, ಹಲವು ಸಂಘಟನೆಗಳು ಸಿಡಿಮಿಡಿಗೊಳ್ಳುತ್ತಿದೆ.

Advertisement

ಹೌದು. ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್‌ ಸರ್ಕಾರಿ ಮಹಾವಿದ್ಯಾಲಯದಲ್ಲಿ 2018ರಲ್ಲಿ ಹೊನ್ನೂರಪ್ಪ, ವಿರೇಶ ಎಂಬ ವಿದ್ಯಾರ್ಥಿಗಳ ಬಿ.ಎ. 5ನೇ ಸೆಮಿಸ್ಟರ್‌ನ ಆರೂ ಪರೀಕ್ಷೆ ಬರೆದರೂ ಒಂದು ವಿಷಯದಲ್ಲಿ ವಿದ್ಯಾರ್ಥಿ ಗೈರು ಹಾಜರಾಗಿದ್ದಾನೆ ಎಂದು ಫಲಿತಾಂಶದಲ್ಲಿ ತೋರಿಸಲಾಗಿದೆ. ಇದನ್ನು ನೋಡಿರುವ ವಿದ್ಯಾರ್ಥಿಗಳು ದಿಗ್ಭ್ರಾಂತರಾಗಿದ್ದು, ದಿಕ್ಕು ಕಾಣದೇ ಅವರಿವರ ಬಳಿ ಪರದಾಡುವಂತ ಸ್ಥಿತಿ ಬಂದಿದೆ.

ವಿವಿ ನಡೆಸಿದ ಪರೀಕ್ಷೆಗೆ ಹಾಜರಾಗಿರುವ ಈ ಇಬ್ಬರು ವಿದ್ಯಾರ್ಥಿಗಳು ಉತ್ತಮವಾಗಿಯೇ ಪರೀಕ್ಷೆ ಬರೆದಿದ್ದು, ರಾಜ್ಯಶಾಸ್ತ್ರ ವಿಷಯದಲ್ಲಿ ಗೈರು ಹಾಜರಾಗಿದ್ದಾರೆಂದು ವಿವಿ ವೆಬ್‌ಸೈಟ್‌ನಲ್ಲಿ ತೋರಿಸಲಾಗುತ್ತಿದೆ. ಫಲಿತಾಂಶದಲ್ಲಿನ ಗೊಂದಲ ಬಗೆಹರಿಸಿಕೊಳ್ಳಲು ವಿದ್ಯಾರ್ಥಿಗಳು ಸಂಬಂಧಿಸಿದ ಕಾಲೇಜು ಉಪನ್ಯಾಸಕರು ಸೇರಿದಂತೆ ಪ್ರಾಚಾರ್ಯರನ್ನು ಸಂಪರ್ಕಿಸಿದ್ದಾರೆ. ಆದರೆ ಅವರು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ನೀವೂ ವಿಶ್ವವಿದ್ಯಾಲಯಕ್ಕೆ ಬರಬೇಕು. ಅಲ್ಲಿಯೇ ಈ ತೊಂದರೆ ಬಗೆಹರಿಯಲಿದೆ. ನಮ್ಮಿಂದ ಏನೂ ತಪ್ಪಾಗಿಲ್ಲ ಎನ್ನುವ ಮಾತನ್ನಾಡಿ ವಿದ್ಯಾರ್ಥಿಗಳನ್ನು ಸುಮ್ಮನಿರಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲಿ ವಿಷಯವಾರು ನೀಡುವ ಆಂತರಿಕ ಅಂಕಗಳಲ್ಲಿ ಈ ಎಡವಟ್ಟು ನಡೆದಿದೆ ಎನ್ನುವ ಮಾತು ಕೇಳಿದರೂ ಸಹಿತ ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಭವಿಷ್ಯ ಹಾಳಾಗುತ್ತಿದೆ ಎಂದು ಸಂಘಟನೆಗಳು ವಿವಿ ಕಾರ್ಯ ವೈಖರಿಗೆ ಆಕ್ರೊಶ ವ್ಯಕ್ತಪಡಿಸಿವೆ.

25ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮಸ್ಯೆ:
ಕೇವಲ ಕೊಲ್ಲಿ ನಾಗೇಶ್ವರರಾವ್‌ ಮಹಾವಿದ್ಯಾಲಯದ ವಿದ್ಯಾರ್ಥಿಗಳದ್ದಷ್ಟೇ ಅಲ್ಲ. ವಿವಿ ವ್ಯಾಪ್ತಿಯಲ್ಲಿನ ಹಲವು ಪದವಿ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದಲ್ಲಿ ಗೈರು ಎಂದು ನಮೂದು ಮಾಡಿ ಪ್ರಕಟಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿವೆ. ಸದ್ಯಕ್ಕೆ ಕೆಲವೇ ವಿದ್ಯಾರ್ಥಿಗಳ ತೊಂದರೆ ಮಾಧ್ಯಮದ ಮುಂದೆ ಬೆಳಕಿಗೆ ಬಂದಿದೆ. ಇದರ ಜೊತೆಗೆ ಬಿ.ಎಸ್‌ಸಿ ವಿಭಾಗದಲ್ಲಿ ಪರೀಕ್ಷಾ ಮೌಲ್ಯಮಾಪನ ಸರಿಯಾಗಿಲ್ಲ ಎನ್ನುವ ಆಪಾದನೆ ಕೇಳಿ ಬಂದಿದೆ.

ಒಟ್ಟಿನಲ್ಲಿ ಬಳ್ಳಾರಿ ವಿಶ್ವವಿದ್ಯಾಲಯವು ಈ ಬಾರಿ ಪರೀಕ್ಷಾ ಫಲಿತಾಂಶದಲ್ಲಿ ಗೈರು ಎಂದು ನಮೂದಿಸಿ ಫಲಿತಾಂಶ ಪ್ರಕಟಿಸಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ.

Advertisement

ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದಲ್ಲಿ ಗೈರು ಎಂದು ನಮೂದಾಗಿರುವ ಕುರಿತು ನನ್ನ ಗಮನಕ್ಕೆ ಬಂದಿದೆ. ನಾವು ವಿವಿ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಕೇವಲ ನಮ್ಮ ಕಾಲೇಜಿನಲ್ಲಷ್ಟೇ ಈ ಸಮಸ್ಯೆಯಾಗಿಲ್ಲ. ಬೇರೆ ಕಾಲೇಜಿನಲ್ಲೂ ಇದೇ ರೀತಿ ಸಮಸ್ಯೆಯಾಗಿದೆ. ನಾವು ಶೀಘ್ರ ವಿಶ್ವವಿದ್ಯಾಲಯಕ್ಕೆ ತೆರಳಿ ಈ ತೊಂದರೆ ನಿವಾರಿಸಲಿದ್ದೇವೆ.
•ನಾರಾಯಣಗೌಡ ಹೆಸರೂರು, ಕೊಲ್ಲಿ ನಾಗೇಶ್ವರರಾವ್‌ ಕಾಲೇಜು ಪ್ರಾಚಾರ್ಯ

ಬಳ್ಳಾರಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಪ್ರತಿ ವರ್ಷವೂ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ವಿದ್ಯಾರ್ಥಿಗಳಿಂದ ಅನಗತ್ಯವಾಗಿ ಹಣ ಖರ್ಚು ಮಾಡಿಸುತ್ತಿದೆ. ಕೂಡಲೇ ವಿದ್ಯಾರ್ಥಿಗಳ ಫಲಿತಾಂಶದಲ್ಲಿನ ತೊಂದರೆ ಸರಿಪಡಿಸಬೇಕು. ಇಲ್ಲಿದ್ದರೆ ವಿವಿ ವಿರುದ್ಧ ಹೋರಾಟ ಮಾಡಲಾಗುವುದು.
•ಅಮರೇಶ ಕಡಗದ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ

ನಾನು ಪದವಿ 5ನೇ ಸೆಮಿಸ್ಟರ್‌ನಲ್ಲಿ ಆರು ವಿಷಯಕ್ಕೆ ಪರೀಕ್ಷೆ ಬರೆದಿದ್ದೇನೆ. ಆದರೂ ನನ್ನ ಫಲಿತಾಂಶ ಪಟ್ಟಿಯಲ್ಲಿ ರಾಜ್ಯಶಾಸ್ತ್ರ ವಿಷಯಕ್ಕೆ ಗೈರು ಎಂದು ತೋರಿಸಲಾಗಿದೆ. ನನ್ನ ಸ್ನೇಹಿತ ಪರೀಕ್ಷಾ ಫಲಿತಾಂಶದಲ್ಲೂ ಇದೇ ರೀತಿ ಬಂದಿದೆ. ನಾವು ಕಾಲೇಜು ಪ್ರಾಚಾರ್ಯರ ಗಮನಕ್ಕೆ ತಂದಿದ್ದೇವೆ. ಇದು ಸರಿಯಾಗದಿದ್ದರೆ ಹೋರಾಟ ಮಾಡಲಿದ್ದೇವೆ.
•ಹೊನ್ನೂರಪ್ಪ, ವಿದ್ಯಾರ್ಥಿ

ನಾನು ಬೆಂಗಳೂರಿನಲ್ಲಿದ್ದೇನೆ. ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ.ಸಮಸ್ಯೆ ಇರುವುದನ್ನು ನನ್ನ ಗಮನಕ್ಕೆ ತಂದಿದ್ದೀರಾ.. ನಾನು ವಿವಿ ಮೌಲ್ಯಮಾಪನ ವಿಭಾಗದ ಅಧಿಕಾರಿಗಳ ಜೊತೆ ಮಾತನಾಡುವೆ.
•ಸುಭಾಸ್‌, ಬಳ್ಳಾರಿ ವಿವಿ ಕುಲಪತಿ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next