Advertisement

ಹೊಸ ಮನೆಗೆ 5 ಲಕ್ಷ ರೂ.: ಬೆಳ್ತಂಗಡಿ ನೆರೆ ಹಾನಿ ಪರಿಸ್ಥಿತಿ ಅವಲೋಕಿಸಿ CM ಘೋಷಣೆ

10:03 AM Aug 14, 2019 | mahesh |

ಬೆಳ್ತಂಗಡಿ: ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ಅನಗತ್ಯ ಕಾನೂನು ಸಬೂಬು ಹೇಳಿ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಆದೇಶಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಮರಳಿ ನಿರ್ಮಿಸಿಕೊಳ್ಳಲು ರಾಜ್ಯ ಸರಕಾರ 5 ಲಕ್ಷ ರೂ. ನೆರವು ಒದಗಿಸಲಿದೆ ಎಂದು ಪ್ರಕಟಿಸಿದ್ದಾರೆ.

Advertisement

ಭಾರೀ ಪ್ರವಾಹ, ಭೂಕುಸಿತಗಳಿಂದ ಅಪಾರ ಹಾನಿ ಅನುಭವಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಅವರು, ಧರ್ಮ ಸ್ಥಳದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆಗೆ ತುರ್ತು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯಾದ್ಯಂತ ಮಳೆಯಿಂದ ಸುಮಾರು 50 ಸಾವಿರ ಕುಟುಂಬ ಗಳು ಮನೆ ಕಳೆದುಕೊಂಡಿವೆ. ಇವರಿಗೆ ಅನು ಕೂಲವಾಗಲು ತಲಾ 5 ಲಕ್ಷ ರೂ. ಗಳಂತೆ 2 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರಕಾರ ನೀಡುವುದಾಗಿ ಪ್ರಕಟಿಸಿದರು. ಜಾಗ ಮತ್ತು ಖಾತೆ ಸಂಬಂಧ ದಾಖಲೆ ಪತ್ರ ಕೊರತೆ ಇದ್ದರೆ ಅಧಿಕಾರಿಗಳಾದ ನೀವು ಗಮನಿಸಿ ಸರಿಪಡಿಸಿಕೊಳ್ಳಿ. ಆ ನೆವನದಿಂದ ತೊಂದರೆ ಕೊಡಬೇಡಿ ಎಂದು ಖಡಕ್ಕಾಗಿ ಸೂಚಿಸಿದರು.

ರಾಜ್ಯದಲ್ಲಿ ಮಳೆ, ಪ್ರವಾಹ, ಭೂಕುಸಿತ ಗಳಿಂದ ಹಲವರು ಸಂಪೂರ್ಣವಾಗಿ ಮನೆ ಕಳೆದುಕೊಂಡಿದ್ದಾರೆ. ಇವರಿಗೆ ಮನೆ ಕಟ್ಟಿ ಕೊಳ್ಳಲು ಸರಕಾರವು ಐದು ಲಕ್ಷ ರೂ. ನೀಡಲಿದೆ. ಭಾಗಶಃ ಮನೆ ಹಾನಿಯಾದವರಿಗೆ ದುರಸ್ತಿಗೆ 1 ಲಕ್ಷ ರೂ. ಸಹಾಯ ನೀಡಲಾಗುವುದು. ಮನೆ ಕಳೆದುಕೊಂಡು ಬಾಡಿಗೆ ಮನೆಗಳಲ್ಲಿರುವವರಿಗೆ ಮನೆ ನಿರ್ಮಾಣವಾಗುವ ತನಕ ಮಾಸಿಕ ತಲಾ 5 ಸಾವಿರ ರೂ. ಸಹಾಯ ಒದಗಿಸ ಲಾಗುವುದು. ಪ್ರವಾಹ ಸಂಕಷ್ಟಕ್ಕೆ ತುತ್ತಾದ ಎಲ್ಲ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳನ್ನು ಇಂದೇ ತುರ್ತು ಸಹಾಯ ನಿಧಿ ನೀಡುವು ದಾಗಿ ತಿಳಿಸಿದರು.

ಬೆಳ್ತಂಗಡಿ ತಾ| ಹಾನಿ: ಸಮೀಕ್ಷೆಗೆ ಸೂಚನೆ
ಬೆಳ್ತಂಗಡಿ ತಾಲೂಕಿನಲ್ಲಿ ರಾಜ್ಯವೇ ಬೆಚ್ಚಿ ಬೀಳುವ ರೀತಿ ಸಂಭವಿಸಿರುವ ಹಾನಿಯನ್ನು ಗಮನಿಸಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಗಳ ಪರಿಹಾರ ನೀಡಲು ನಿರ್ಧರಿಸಿದ್ದೇನೆ ಎಂದರು.

Advertisement

ತಾಲೂಕಿನಲ್ಲಿ ಕೃಷಿ, ಸಾರ್ವಜನಿಕ ಸೊತ್ತು ಹಾನಿ ಸಂಬಂಧ ಕೂಡಲೇ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಆದೇಶಿಸಿದರು. ಪ್ರಕೃತಿ ವಿಕೋಪ ಪರಿಹಾರ ವಿತರಿಸುವಲ್ಲಿ ನಿರ್ದಿಷ್ಟ ಮಿತಿ ಇದ್ದರೂ ಈ ಬಾರಿಯ ಪರಿಸ್ಥಿತಿ ವಿಶೇಷವಾದುದು. ಹೀಗಾಗಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕುಕ್ಕಾವು ಪ್ರದೇಶಕ್ಕೆ ಸಿಎಂ ಭೇಟಿ
ಕಳೆದ ವಾರದಲ್ಲಿ ಘಟಿಸಿದ ಪ್ರವಾಹದಿಂದ ಭಾರೀ ಹಾನಿಗೆ ಒಳಗಾಗಿರುವ ಮಿತ್ತಬಾಗಿಲು ಕುಕ್ಕಾವು ಪ್ರದೇಶಕ್ಕೆ ಭೇಟಿ ನೀಡಿದಯಡಿಯೂರಪ್ಪ ಅಲ್ಲಿನ ಪರಿಸ್ಥಿತಿಯನ್ನು ಕಂಡು ಅವಾಕ್ಕಾದರು. ಪರಿಹಾರದ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಕುಕ್ಕಾವು ಶಾಲೆಯಲ್ಲಿರುವ ತಾತ್ಕಾಲಿಕ ಸಂತ್ರಸ್ತರ ಕೇಂದ್ರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಮಾದರಿಯಲ್ಲೇ ಇಲ್ಲೂ ಅವಘಡಗಳು ಸಂಭವಿಸಿವೆ ಎಂದು ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಕರಾವಳಿ ಜಿಲ್ಲೆಗಳ ಪೈಕಿ ಅತಿ ಹೆಚ್ಚಿನ ಹಾನಿ ಇಲ್ಲಾಗಿದೆ ಎಂಬುದೂ ಗೊತ್ತಾಗಿದೆ ಎಂದು ಹೇಳಿದರು.

“ಕಾನೂನು ಸಬೂಬು ಹೇಳದಿರಿ’
ಯಡಿಯೂರಪ್ಪ ಭೇಟಿ ವೇಳೆ ಬೆಳ್ತಂಗಡಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಕರಾವಳಿಯಲ್ಲಿ ನೆರೆ ಹಾನಿ ಮತ್ತಿತರ ಸಮಸ್ಯೆಗಳ ಗಂಭೀರತೆಯನ್ನು ತೆರೆದಿಟ್ಟರು. ಪ್ರತಿ ಕ್ರಿಯಿಸಿದ ಸಿಎಂ, ನೆರೆ ಸಂತ್ರಸ್ತರಿಗೆ ಹೊಸದಾಗಿ ಮನೆ ನಿರ್ಮಾಣಕ್ಕೆ ಅಧಿಕಾರಿಗಳು ಕಾನೂನಿನ ಸಬೂಬು ಹೇಳಬೇಡಿ. ಜಾಗ ಮತ್ತು ಖಾತೆ ಸಮಸ್ಯೆ ಸೇರಿದಂತೆ ಸೂಕ್ತ ದಾಖಲೆ ಪತ್ರಗಳ ಕೊರತೆ ಇದ್ದರೆ ಅದನ್ನು ಸರಿಪಡಿಸುವ ಹೊಣೆ ಅಧಿಕಾರಿ ಗಳದ್ದು. ನೆರೆ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಬಯಸಿದಾಗ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ನೀಡಬೇಕು ಎಂದು ಸೂಚಿಸಿದರು.

ಬೆಳ್ತಂಗಡಿಯದ್ದು ಘೋರ ದುರಂತ
ರಾಜ್ಯದಲ್ಲಿ ಮಳೆಗೆ ಸಾಕಷ್ಟು ಹಾನಿಯಾಗಿರುವ ವರದಿ ಯಾಗಿದ್ದರೂ ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿಸಿದ್ದು ಘೋರ ದುರಂತ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ ಸಿಎಂ, ಜನ ಬೀದಿಗೆ ಬಂದಿದ್ದಾರೆ. ಅವರ ನೋವು ಸರಕಾರಕ್ಕೆ ಅರ್ಥವಾಗಿದೆ. ಸಂತ್ರಸ್ತರ ನೋವು ಆಲಿಸಲೆಂದೇ ಪ್ರವಾಸ ಮಾಡುತ್ತಿದ್ದೇನೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲ ಸಂತ್ರಸ್ತರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸರಕಾರ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು.

ತಿಂಗಳ ಕಾಲ ರೈಲು ಬಂದ್‌?
ಮಂಗಳೂರು/ಬೆಂಗಳೂರು: ಬೆಂಗಳೂರು- ಮಂಗಳೂರು ನಡುವೆ ರೈಲು ಸಂಚಾರ ಪುನರಾರಂಭಕ್ಕೆ ಒಂದು ತಿಂಗಳು ಬೇಕಾಗುವ ಸಾಧ್ಯತೆ ಇದೆ. ಸಿರಿಬಾಗಿಲು ಸೇರಿದಂತೆ 15 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಹಲವೆಡೆ ಹಳಿಗಳ ಕೆಳಗೆ ಮಣ್ಣು ಕುಸಿದಿದೆ. ಇವನ್ನು ದುರಸ್ತಿಪಡಿಸಲು ಸಾಕಷ್ಟು ಕಾಲ ಬೇಕು.

314 ಮಂದಿ ಏರ್‌ಲಿಫ್ಟ್
ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಯಲ್ಲಿ ಸಿಲುಕಿದ್ದ 314 ಮಂದಿಯನ್ನು ರಕ್ಷಿಸ ಲಾಗಿದೆ. ಅವರಲ್ಲಿ 26 ಮಂದಿ ವಿದೇಶೀಯರೂ ಸೇರಿದ್ದಾರೆ. ರವಿವಾರ 64, ಸೋಮವಾರ 250 ಮಂದಿ ಪ್ರವಾಸಿಗರನ್ನು ಹೆಲಿಕಾಪ್ಟರ್‌ ಮೂಲಕ ಪಾರು ಮಾಡಲಾಗಿದೆ. ಇದೇ ವೇಳೆ, ಜನರ ರಕ್ಷಣೆಗೆ ತೆರಳಿದ್ದ ಎನ್‌ಡಿಆರ್‌ಎಫ್ಗೆ ಸೇರಿದ ದೋಣಿ ಮಗುಚಿ ಐವರು ಸಿಬಂದಿ ನೀರಿನಲ್ಲಿ ಮುಳುಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅವರು ಈಜಿ ದಡ ಸೇರಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪರಿಹಾರ ಸರಕಿಗೆ ಟೋಲ್‌ ಇಲ್ಲ
ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳ ಸರಬರಾಜಿಗೆ ಅನುಕೂಲ ಕಲ್ಪಿಸಲು ಕೆಲವು ರಾ. ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹಿಸದೆ ಇರಲು ಕೇಂದ್ರ ಸರಕಾರ ನಿರ್ಧರಿ ಸಿದೆ. ಈ ಕುರಿತು ಸೋಮವಾರ ಟ್ವೀಟ್‌ ಮಾಡಿ ರುವ ಸಚಿವ ನಿತಿನ್‌ ಗಡ್ಕರಿ, “ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳುವ ರಾ. ಹೆ. 04 (ಹೊಸ ರಾ.ಹೆ. 48) ರಲ್ಲಿ ಬೆಂಗಳೂರಿನಿಂದ ಪುಣೆವರೆಗೆ ಸುಮಾರು 860 ಕಿ.ಮೀ. ದೂರದವರೆಗೆ ನೆರವು ಸಾಮಗ್ರಿ ಸಾಗಾಟಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ವಾಗಿ ಟೋಲ್‌ ಮುಕ್ತವಾಗಿಸಲಾಗಿದೆ’ ಎಂದು ಬರೆದಿದ್ದಾರೆ.

ಮತ್ತೆ ಮಳೆ ನಿರೀಕ್ಷೆ
ಈ ಮಧ್ಯೆ ರಾಜ್ಯದಲ್ಲಿ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಮತ್ತು ವಾಯವ್ಯದಲ್ಲಿ ವಾಯುಭಾರ ಕುಸಿತ ಕಂಡುಬಂದಿದ್ದು, ಇದರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯಕ್ಕೇ ಪರಿಹಾರ ಅನ್ವಯ
ಘೋಷಿಸಿರುವ ಪರಿಹಾರ ಮೊತ್ತ ಕೇವಲ ಬೆಳ್ತಂಗಡಿ ತಾಲೂಕು ಅಥವಾ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಲ್ಲ. ಇದು ರಾಜ್ಯಕ್ಕೆ ಸಂಬಂಧಿ ಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ 321 ಮನೆಗಳಿಗೆ ಹಾನಿಯಾಗಿದ್ದು, 275 ಮನೆಗಳು ಸಂಪೂರ್ಣ ನಾಶವಾಗಿವೆ. ದ.ಕ. ಜಿಲ್ಲೆ ಯಲ್ಲಿ ಒಟ್ಟು 274 ಕೋ. ರೂ. ನಷ್ಟ ಆಗಿರುವ ಅಂದಾಜು ಪಟ್ಟಿ ಸಿದ್ಧವಾಗಿದೆ.
-ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next