ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೋವಿಡ್ 19 ಸ್ಪೋಟಗೊಂಡಿದ್ದು ಕಳೆದ 24 ಗಂಟೆಗಳಲ್ಲಿ 15,968 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಮೊದಲ ಬಾರಿಗೆ ಒಂದೇ ದಿನ 465 ಜನರು ಮೃತಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 4,56,183ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊವಿಡ್ ಮಹಾಮಾರಿಗೆ ಒಟ್ಟಾರೆಯಾಗಿ 14,467 ಮಂದಿ ಬಲಿಯಾಗಿದ್ದಾರೆ. ಪ್ರಮುಖವಾಗಿ ದೇಶದಲ್ಲಿ 1,83,022 ಸಕ್ರೀಯ ಪ್ರಕರಣಗಳಿದ್ದು, 2,58,685 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೇ 1,39,010 ಜನರಿಗೆ ಈ ವೈರಾಣು ಭಾಧಿಸಿದ್ದು, ದೆಹಲಿಯಲ್ಲಿ 66,602 ಮಂದಿ ಸೊಂಕಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 1 ಲಕ್ಷ ಜನಸಂಖ್ಯೆಗೆ 1 ಕೊರೋನಾ ಸಾವು ಸಂಭವಿಸುತ್ತಿದೆ. ಜಾಗತಿಕ 6.04ರ ಸಾವಿನ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂನ್ 1 ರಿಂದ ಇಲ್ಲಿಯವರೆಗೂ ಸುಮಾರು 2.5 ಲಕ್ಷ ಜನರು ಕೋವಿಡ್ ಗೆ ತುತ್ತಾಗಿದ್ದು, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ಉತ್ತರಪ್ರದೇಶದಲ್ಲಿ 70% ಕ್ಕಿಂತ ಅಧಿಕ ಸೊಂಕಿತರಿದ್ದಾರೆ.