ನವದೆಹಲಿ: ದೇಶದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಆರಂಭದಿಂದ ಮೇ 1ರವರೆಗೆ 594 ವೈದ್ಯಕೀಯ ಸಿಬ್ಬಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘವು ಮಾಹಿತಿ ನೀಡಿದೆ.
ಫ್ರಂಟ್ ಲೈನ್ ವಾರಿಯರ್ಸ್ ಆಗಿರುವ ವೈದ್ಯರು ಕೋವಿಡ್ ಬಾಧಿತರನ್ನು ಗುಣಮುಖರಾಗಿಸುವಲ್ಲಿ ನಿರತರಾಗಿದ್ದಾರೆ. ಅಪಾಯಕಾರಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯ ಸಿಬ್ಬಂದಿ ಕೂಡ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇನ್ನು ದೇಶದಲ್ಲಿ ಒಂದೇ ದಿನ 1,27,510 ಮಂದಿಗೆ ಕೋವಿಡ್ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,55,287 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2,795 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 2,81,75,044 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,59,47,629 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,31,895 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 18,95,520 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಅತಿಹೆಚ್ಚು ವೈದ್ಯಕೀಯ ಸಿಬ್ಬಂದಿ ಮೃತಪಟ್ಟ Top 10 ರಾಜ್ಯಗಳು ಈ ಕೆಳಗಿನಂತಿವೆ:
- ದೆಹಲಿ – 107
- ಬಿಹಾರ – 96
- ಉತ್ತರ ಪ್ರದೇಶ – 67
- ರಾಜಸ್ಥಾನ – 43
- ಜಾರ್ಖಂಡ್ – 39
- ಆಂಧ್ರ ಪ್ರದೇಶ – 32
- ತೆಲಂಗಾಣ – 32
- ಗುಜರಾತ್ – 31
- ಪಶ್ಚಿಮ ಬಂಗಾಳ – 25
- ಒಡಿಶಾ-22