Advertisement

5750 ಕ್ವಿಂಟಾಲ್‌ ನಕಲಿ ಬಿಡಿ ಬಿತ್ತನೆ ಬೀಜ ವಶ

04:34 PM Apr 25, 2020 | Suhan S |

ಬ್ಯಾಡಗಿ: ಪಟ್ಟಣದಲ್ಲಿ ವಿವಿಧ ಕೋಲ್ಡ್‌ ಸ್ಟೋರೇಜ್‌ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳ ತಂಡ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 6 ಕೋಟಿ ರೂ. ಮೌಲ್ಯದ 5,750 ಕ್ವಿಂಟಲ್‌ ನಕಲಿ ಬಿಡಿ ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.

Advertisement

ಎಸಿ ದಿಲೀಷ್‌, ಜಂಟಿ ಕೃಷಿ ನಿರ್ದೇಶಕ ಡಾ| ಬಿ. ಮಂಜುನಾಥ, ತಹಶೀಲ್ದಾರ್‌ ಶರಣಮ್ಮ ಹಾಗೂ ಸಿಪಿಐ ಭಾಗ್ಯವತಿ ನೇತೃತ್ವದ ತಂಡು ಪಟ್ಟಣದ ವೀರಶೈವ ಮುಕ್ತಿಧಾಮಕ್ಕೆ ಹೊಂದಿಕೊಂಡಿ ರುವ ಸೂರ್ಯ ಕೋಲ್ಡ್‌ ಸ್ಟೋರೇಜ್‌ ಹಾಗೂ ಛತ್ರ ಗ್ರಾಮದ ಬಳಿಯಿರುವ ವಕ್ರತುಂಡ ಕೋಲ್ಡ್‌ ಸ್ಟೋರೇಜ್‌ ಗಳ ಮೇಲೆ ದಾಳಿ ನಡೆಸಿ ನಕಲಿ ಬೀಜ ದಾಸ್ತಾನು ವಶಪಡಿಸಿಕೊಂಡಿದೆ. ಸೂರ್ಯ ಕೋಲ್ಡ್‌ ಸ್ಟೋರೇಜ್‌ನಲ್ಲಿದ್ದ 2950 ಕ್ವಿಂಟಲ್‌ ಹಾಗೂ ವಕ್ರತುಂಡ ಕೋಲ್ಡ್‌ ಸ್ಟೋರೇಜ್‌ನಲ್ಲಿದ್ದ ಸುಮಾರು 2800 ಕ್ವಿಂಟಲ್‌ ನಕಲಿ ಬಿಡಿ ಬಿತ್ತನೆ ವಶಪಡಿಸಿಕೊಂಡು ದೂರು ದಾಖಲಿಸಲಾಗಿದೆ. ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.

ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ಎಸ್‌. ಸ್ಫೂರ್ತಿ ಜಾಗೃತ ಕೋಶದ ಪ್ರಾಣೇಶ, ಬಸವರಾಜ ಮರಗಣ್ಣವರ, ಆರ್‌. ಮಂಜುನಾಥ, ಎಸ್‌.ಜಿ. ಕಂಬಳಿ, ಬಸವರಾಜ ಅಂಜುಟಗಿ, ಗಡಿಯಪ್ಪಗೌಡ್ರ, ಬೀರಪ್ಪ, ಅಶೋಕ ಬಾರ್ಕಿ, ಅಣ್ಣಪ್ಪ ದ್ಯಾಮನಗೌಡ್ರ, ಮಾರುತಿ ದೊಡ್ಮನಿ, ಪ್ರಭು ಚಿಕ್ಕನಗೌಡ್ರ ದಾಳಿ ನಡೆಸಿದ ತಂಡದಲ್ಲಿದ್ದರು.

ಸಂಸ್ಕರಿಸಿದ ಖುಲ್ಲಾ ಬೀಜ : ದಾಳಿ ಸಂದರ್ಭದಲ್ಲಿ ಸಂಸ್ಕರಿಸಿದ ಖುಲ್ಲಾ ಬಿತ್ತನೆ ಬೀಜಗಳ ದೊಡ್ಡ ಲಾಟ್‌ಗಳು ಪತ್ತೆ ಯಾಗಿವೆ. ಈ ಚೀಲಗಳ ಮೇಲೆ ಬ್ಯಾಡ್ಜ್ ನಂಬರ್‌, ಮೊಳಕೆ ಒಡೆಯುವ ಪ್ರಮಾಣ, ದರಪಟ್ಟಿ ಹಾಗೂ ಮುಕ್ತಾಯದ ಅವಧಿ (ಎಕ್ಸ್‌ ಪೈರಿ ಡೇಟ್‌) ಸೇರಿದಂತೆ ಕೃಷಿ ಇಲಾಖೆ ಅಥವಾ ಸರ್ಕಾರ ಅನುಮತಿ ನೀಡಿದ ಇನ್ಯಾವುದೇ ಅ ಧಿಕೃತ ಮೊಹರುಗಳು ಇರದಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ತಿರಸ್ಕೃತ ಬೀಜ ಶಂಕೆ ; ಪ್ರತಿವರ್ಷವೂ ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಬೀಜಗಳ ಮೊಳಕೆ ಪ್ರಮಾಣದ ಲ್ಯಾಬ್‌ ಟೆಸ್ಟಿಂಗ್‌ ನಡೆಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ರಿಜೆಕ್ಟ್ ಬೀಜಗಳನ್ನು ಸರ್ಕಾರದ ಕಣ್ತಪ್ಪಿಸಿ ಕಡಿಮೆ ದರಕ್ಕೆ ಮಾರಾಟ ಮಾಡುವ ಮಾಫಿಯಾದ ಕೈವಾಡವಿದ್ದು, ಅವರಿಂದ ಸಂಗ್ರಹಿಸಿದ ಬೀಜಗಳಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Advertisement

ಕೃತಕ ಅಭಾವ ಹುನ್ನಾರ : ಹಾವೇರಿ ಜಿಲ್ಲೆ ಏಷ್ಯಾದಲ್ಲೇ ಅತೀ ಹೆಚ್ಚು ಬೀಜೋತ್ಪಾದನೆ ಮಾಡುವ ಕೇಂದ್ರವಾಗಿದೆ. ಅದರಲ್ಲೂ ರಾಣಿಬೆನ್ನೂರು ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಬೀಜೋತ್ಪಾದನೆ ಕೇಂದ್ರಗಳಿವೆ. ಬೀಜ ಸಂಗ್ರಹದ ಹಿಂದೆ ಕೃತಕ ಅಭಾವ ಸೃಷ್ಟಿಸುವ ಹುನ್ನಾರ ಅಡಗಿರುವುದಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ಬಿತ್ತನೆ ಬೀಜದ ಮಾಲೀಕರು ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಕೋಲ್ಡ್‌ ಸ್ಟೋರೇಜ್‌ ಮಾಲೀಕರೇ ತಪ್ಪಿತಸ್ಥರೆಂದು ಪರಿಗಣಿಸಿ ಎರಡೂ ಕೋಲ್ಡ್‌ ಸ್ಟೋರೇಜ್‌ ಮಾಲೀಕರ ವಿರುದ್ಧ ಸಂಬಂಧಿಸಿದ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗುವುದು.-ಡಾ| ಬಿ. ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಕಳಪೆ ಬೀಜ ಮಾರಾಟ ದುರಂತದ ಸಂಗತಿ. ಯಾವುದೇ ಒತ್ತಡಕ್ಕೆ ಮಣಿಯದೆ ಕೂಡಲೇ ಎರಡೂ ಕೋಲ್ಡ್‌ ಸ್ಟೋರೇಜ್‌ಗಳನ್ನು ವಶಕ್ಕೆ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮವಾಗ ಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.-ಗಂಗಣ್ಣ ಎಲಿ, ರೈತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next