Advertisement

5,700 ದೂರವಾಣಿಗಳಿಗೆ ಇರೋದು 15 ಸಿಬಂದಿ!

12:47 AM Feb 29, 2020 | Sriram |

ಕುಂದಾಪುರ: ಪ್ರತಿನಿತ್ಯ ಬಿಎಸ್‌ಎನ್‌ಎಲ್‌ ದೂರವಾಣಿ ಹಾಳಾಗಿದೆ ಎಂದು ದೂರುಗಳು ಅಲ್ಲಲ್ಲಿ ಕೇಳಿಬರುತ್ತಿರುತ್ತವೆ. ಜತೆಜತೆಗೇ ಬ್ಯಾಂಕುಗಳಲ್ಲಿ ಕೂಡಾ ನೆಟ್‌ವರ್ಕ್‌ ಸಮಸ್ಯೆ ಎಂದು ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಬಿಎಸ್‌ಎನ್‌ಎಲ್‌ಗೆ ಶಾಪ ಹಾಕುವ ಮುನ್ನ ಅವರ ಸಿಬಂದಿ ಸಾಮರ್ಥ್ಯ ಗಮನಿಸಿದರೆ ಮತ್ತೆ ಯಾರೂ ದೂರವಾಣಿ ಲೈನ್‌ ಸರಿ ಇಲ್ಲ ಎಂದು ಕಿರಿಕಿರಿ ಮಾಡುವ ಸಾಧ್ಯತೆಯಿಲ್ಲ. ಏಕೆಂದರೆ ಕುಂದಾಪುರ, ಬೈಂದೂರು ತಾಲೂಕುಗಳ 5,700 ದೂರವಾಣಿಗಳ ನಿರ್ವಹಣೆಗೆ ಇಲಾಖೆಯಲ್ಲಿ ಇರುವುದು 15 ಸಿಬಂದಿ ಮಾತ್ರ!. ಸ್ವಯಂ ನಿವೃತ್ತಿ ಪಡೆದು ನಿರ್ಗಮಿಸಿದ ಕಾರಣ ಇರುವವರ ಮೇಲೆ ಭಾರ ಬಿದ್ದಿದೆ.

Advertisement

ಆರೋಪ
ಬಿಎಸ್‌ಎನ್‌ಎಲ್‌ ಗ್ರಾಹಕರಂತೂ ಸಿಬಂದಿಯ ಸೇವಾ ದಕ್ಷತೆ ಕುಸಿತದ ಆರೋಪ ಮಾಡುತ್ತಲೇ ಇರುತ್ತಾರೆ. ಇದರ ಮಧ್ಯೆ ಏಗುತ್ತಿರುವ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಸಂಸ್ಥೆಯ ಸಿಬಂದಿಗೆ ನೀಡಲಾಗಿರುವ ಸ್ವಯಂನಿವೃತ್ತಿ ಅವಕಾಶವು ಸಂಸ್ಥೆಯನ್ನು ಮತ್ತಷ್ಟು ಅಧೀರವಾಗಿಸಿದೆ.

45 ಮಂದಿ ನಿವೃತ್ತಿ
ಬಿಎಸ್ಸೆನ್ನೆಲ್‌ ಕುಂದಾಪುರ ವಿಭಾಗದಲ್ಲಿ ಏಕಕಾಲಕ್ಕೆ 45 ಮಂದಿ ಸಿಬಂದಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಖಾಸಗಿ ನೆಟ್‌ವರ್ಕ್‌ಗಳ ಭರಾಟೆಯ ನಡುವೆ ಹಲವು ತೊಡಕುಗಳ ಮಧ್ಯೆ ಒದ್ದಾಡುತ್ತಿರುವ ಈ ಸರಕಾರಿ ನೆಟ್‌ವರ್ಕ್‌ಗೆ ಸಿಬಂದಿ ಸ್ವಯಂ ನಿವೃತ್ತಿ ದೊಡ್ಡ ಹೊಡೆತ ನೀಡಿದೆ. ಗ್ರಾಮೀಣ ಭಾಗದ ಜನತೆಯ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಬಿಎಸ್ಸೆನ್ನೆಲ್‌ ಸಂಸ್ಥೆಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

60ರಲ್ಲಿ 15 ಉಳಿಕೆ
ಜ. 31ಕ್ಕಿಂತ ಮೊದಲು 6 ಮಂದಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದವರು ಈಗ ಅವರ ಸಂಖ್ಯೆ 3ಕ್ಕೆ ಇಳಿದಿದೆ. ಉಡುಪಿಯವರೇ ಎಜಿಎಂ ಆಗಿ ಪ್ರಭಾರ ಹೊಣೆಯಲ್ಲಿದ್ದಾರೆ. ಜೆಟಿಒ (ಜೂನಿಯರ್‌ ಟೆಲಿಕಾಂ ಆಫೀಸರ್‌) ಅವರು ಎಸ್‌ಡಿಇ (ಸಬ್‌ ಡಿವಿಜನಲ್‌ ಎಂಜಿನಿಯರ್‌) ಅವರ ಪ್ರಭಾರದಲ್ಲಿದ್ದಾರೆ. ಬಿಎಸ್ಸೆನ್ನೆಲ್‌ ಕುಂದಾಪುರ ವಿಭಾಗದ ಶಂಕರನಾರಾಯಣ, ತಲ್ಲೂರು, ಬೈಂದೂರು ವ್ಯಾಪ್ತಿಯಲ್ಲಿ ಒಟ್ಟು 60 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರಲ್ಲಿ 45 ಮಂದಿ ಸ್ವಯಂನಿವೃತ್ತಿ ಪಡೆದಿದ್ದಾರೆ. 60 ಮಂದಿ ನಿರ್ವಹಣೆ ಮಾಡುತ್ತಿದ್ದ ಕೆಲಸಗಳನ್ನು ಕೇವಲ 15 ಮಂದಿ ಮಾತ್ರ ನಿರ್ವಹಣೆ ಮಾಡಬೇಕಾದ ಅನಿವಾರ್ಯ ಸವಾಲು ಬಿಎಸ್ಸೆನ್ನೆಲ್‌ ಸಂಸ್ಥೆಯ ಮುಂದಿದೆ.

ಸಂಪರ್ಕಗಳು
ಕುಂದಾಪುರ ಬಿಎಸ್ಸೆನ್ನೆಎಲ್‌ ವ್ಯಾಪ್ತಿ ಯಲ್ಲಿ 34 ಎಕ್ಸ್‌ಚೇಂಜ್‌ಗಳಿವೆ. ಇವುಗಳಲ್ಲಿ ಈಗ 5,700ರಷ್ಟು ಸ್ಥಿರ ದೂರವಾಣಿ ಸಂಪರ್ಕಗಳು ಕಾರ್ಯಾಚರಿಸುತ್ತಿವೆ. 1,600 ಬ್ರಾಡ್‌ಬ್ಯಾಂಡ್‌ ಸಂಪರ್ಕಗಳಿವೆ. 400 ಫೈಬರ್‌ ಕನೆಕ್ಷನ್‌(ಎಫ್ಟಿಟಿಎಚ್‌) ಇದೆ.

Advertisement

ಕಡಿಮೆಯಾಗುತ್ತಿದೆ
ಒಂದು ಕಾಲದಲ್ಲಿ ಸ್ಥಿರ ದೂರವಾಣಿ ಎಂದರೆ ಬಿಎಸ್‌ಎನ್‌ಎಲ್‌ ಎಂಬಂತೆ ವರ್ಷಾನುಗಟ್ಟಲೆ ಕಾದು ಕುಳಿತು ಪಡೆಯುತ್ತಿದ್ದ, ಪ್ರಭುತ್ವ ಮೆರೆದ ಸ್ಥಿರ ದೂರವಾಣಿ ಸಂಪರ್ಕಗಳು ಈಗ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸೇವಾ ಬದ್ಧತೆ, ಗುಣಮಟ್ಟ ಹಾಗೂ ದಕ್ಷತೆಯ ಸಂಪರ್ಕ ಸೇತುವನ್ನು ಕೆಲವು ಅದಕ್ಷ ಸಿಬಂದಿಗಳಿಂದಾಗಿ ಉಳಿಸಿಕೊಳ್ಳ ಲಾಗದ ಕಾರಣ ಜನಸಾಮಾನ್ಯರಲ್ಲಿ ಬಿಎಸ್‌ಎನ್‌ಲ್‌ ಕುರಿತು ಹಲವು ಆರೋಪಗಳನ್ನು ಕೇಳುವಂತಾಯಿತು.

ಹಾಗಾಗಿಯೇ ಬಹುತೇಕ ಮಂದಿ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ನಿಂದ ದೂರವಾಗುತ್ತಿದ್ದಾರೆ. ಹಾಗಿದ್ದರೂ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಬಿಎಸ್ಸೆನ್ನೆಲ್‌ ಇನ್ನೂ ಜೀವಂತವಾಗಿದೆ. ಜನತೆಯ ಪಾಲಿಗೆ ಅನಿವಾರ್ಯವೂ ಆಗಿದೆ. ಸರಕಾರಿ ಕಚೇರಿಗಳು, ಬ್ಯಾಂಕಿಂಗ್‌ ಕ್ಷೇತ್ರಗಳಲ್ಲೂ ಬಿಎಸ್‌ಎನ್‌ಎಲ್‌ ಇಂದಿಗೂ ತನ್ನ ಪಾರಮ್ಯ ಮೆರೆದಿದೆ. ಸೇವಾನ್ಯೂನತೆಗೆ ಸಿಬಂದಿ ಕಡಿತವೂ ಕಾರಣ ಎನ್ನುವುದು ಈಗ ಕೇಳಿ ಬರುತ್ತಿರುವ ಸಮರ್ಥನೆ.

ಬಿಎಸ್ಸೆನ್ನೆಲ್‌ ಗ್ರಾಮೀಣ ಭಾಗದ ಜನರ ಸಂಪರ್ಕಕೊಂಡಿಯಂತಿತ್ತು. ಖಾಸಗಿ ನೆಟ್‌ವರ್ಕ್‌ಗಳ ಭರಾಟೆಯ ನಡುವೆಯೂ ಹೆಚ್ಚಿನ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲು ಶಕ್ತಿಮೀರಿ ಪ್ರಯತ್ನವನ್ನೂ ಮಾಡುತ್ತಿದೆ. ಆದರೆ ಸಿಬಂದಿ ಕೊರತೆ ಈ ಸರಕಾರಿ ನೆಟ್‌ವರ್ಕ್‌ಗೆ ದೊಡ್ಡ ಹೊಡೆತ ನೀಡಿರುವುದಂತೂ ಅಚ್ಚರಿಯಾಗಿ ಉಳಿದಿಲ್ಲ.

1.ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಬಿಎಸ್ಸೆನ್ನೆಲ್‌ ಇನ್ನೂ ಜೀವಂತವಾಗಿದೆ. ಜನತೆಯ ಪಾಲಿಗೆ ಅನಿವಾರ್ಯವೂ ಆಗಿದೆ.
2. ಸರಕಾರಿ ಕಚೇರಿಗಳು, ಬ್ಯಾಂಕಿಂಗ್‌ ಕ್ಷೇತ್ರಗಳಲ್ಲೂ ಬಿಎಸ್‌ಎನ್‌ಎಲ್‌ ಇಂದಿಗೂ ತನ್ನ ಪಾರಮ್ಯ ಮೆರೆದಿದೆ.
3.60 ಮಂದಿ ಮಾಡುತ್ತಿದ್ದ ಕೆಲಸವನ್ನು 15 ಜನರೇ ನಿಭಾ ಯಿಸುವುದೆಂದರೆ ಗ್ರಾಹಕರಿಗೆ ದಕ್ಷ ಸೇವೆ ಸಿಗುವುದು ಹೇಗೆ?
4.ಖಾಸಗಿ ನೆಟ್‌ವರ್ಕ್‌ಗಳ ವೇಗಕ್ಕೆ ಒಗ್ಗುವ ಅನಿವಾರ್ಯತೆಯಲ್ಲಿ ಬಿಎಸ್ಸೆನ್ನೆಲ್‌ ಇದ್ದರೂ ಸಿಬಂದಿ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ.

ಫ್ಲೈಓವರ್‌ ಅವಾಂತರ
ಕುಂದಾಪುರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಪ್ರತಿನಿತ್ಯ ಎಂಬಂತೆ ರಸ್ತೆ ಅಗೆಯಲಾಗುತ್ತದೆ. ಹಾಗೆ ಜೆಸಿಬಿ ಮೂಲಕ ಬಿಎಸ್ಸೆನ್ನೆಲ್‌ನವರಿಗೆ ಸೂಚನೆ ನೀಡದೇ ಅಗೆದು ಅಗೆದು ಹಾಕಿ ಇದ್ದಬದ್ದ ಕೇಬಲ್‌ಗ‌ಳನ್ನು ತುಂಡರಿಸಲಾಗುತ್ತದೆ. ಅಲ್ಲೆಲ್ಲಾ ಬಿಸಿಲಿನಲ್ಲಿ ಬೆವರಿಳಿಸಿಕೊಂಡು ತಲೆಗೂದಲಿನಂತಹ ಸೂಕ್ಷ್ಮ ವಯರುಗಳನ್ನು ಅತಿಸೂಕ್ಷ್ಮವಾಗಿ ಜೋಡಿಸುತ್ತಾ ಸಿಬಂದಿ ಕುಳಿತಿರುವುದು ಸಾಮಾನ್ಯವಾಗಿದೆ.

ಸ್ಪಂದಿಸಲಾಗುತ್ತಿದೆ
ಸಿಬಂದಿ ಕೊರತೆಯಿದ್ದರೂ ಸಾರ್ವಜನಿಕರ ದೂರುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ. ಸಿಬಂದಿ ಕೊರತೆ ಇರುವುದನ್ನು ಗ್ರಾಹಕರು ಕೂಡಾ ಗಮನಿಸಿ ನಮ್ಮ ಜತೆ ಸಹಕರಿಸಬೇಕು.
-ರಾಜೇಂದ್ರ,
ಪ್ರಭಾರ ಎಸ್‌ಡಿಇ, ಕುಂದಾಪುರ

ಉಳಿಸಿಕೊಳ್ಳಬೇಕು
ಬಿಎಸ್‌ಎನ್‌ಎಲ್‌ನಂತಹ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು. ಖಾಸಗೀಕರಣ ಮಾಡಬಾರದು. ಸರಕಾರಿ ಕಚೇರಿಗಳು ಸೇರಿದಂತೆ ಅನೇಕ ರಾಷ್ಟ್ರೀಯ ಗೌಪ್ಯತೆಗೆ ಸಂಬಂಧಿಸಿದ ಇಂಟರ್ನೆಟ್‌ ಸಂಪರ್ಕ ಖಾಸಗಿಯವರ ಪಾಲಿಗೆ ನೀಡಿದರೆ ಅದು ದೇಶಕ್ಕೆ ಅಪಾಯವೂ ಹೌದು.
-ರಾಜೇಶ್‌ ಕಾವೇರಿ,ಕುಂದಾಪುರ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next