Advertisement

57 ಲಕ್ಷ ಬಿಪಿಎಲ್‌ ಪಡಿತರ ಚೀಟಿ ರದ್ದು

03:45 AM Jul 12, 2017 | Team Udayavani |

ಶಿವಮೊಗ್ಗ: “ಸರ್ವಂ ಆಧಾರ ಮಯಂ’ ಎಂಬ ಮಂತ್ರ ಪಠಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಯ
ಪರಿಣಾಮ ಅನರ್ಹ ಪಡಿತರ ಚೀಟಿದಾರರ ಪತ್ತೆ ಹಚ್ಚುವ ಕೆಲಸ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಪಾಲಿಗೆ ವರದಾನವಾಗಿದೆ. ಆಧಾರ್‌ ಕಡ್ಡಾಯದ ಬಳಿಕ ಈ ತನಕ ಇಲಾಖೆ ರಾಜ್ಯಾದ್ಯಂತ ಬರೊಬ್ಬರಿ 57,88,296
ಅನರ್ಹ ಬಿಪಿಎಲ್‌ ಪಡಿತರ ಚೀಟಿಯನ್ನು ರದ್ದುಪಡಿಸಿದೆ.

Advertisement

ಬಡತನ ಮಟ್ಟದಿಂದ ಮೇಲೆತ್ತುವ ಉದ್ದೇಶದಿಂದ ಬಡ ವರ್ಗದ ಮಂದಿಗೆ ಸರ್ಕಾರ ವಿವಿಧ ರೀತಿಯ ಸೌಲಭ್ಯ
ನೀಡಿತ್ತು. ಆದರೆ ನಕಲಿ ಬಿಪಿಎಲ್‌ ಕಾರ್ಡುಗಳೇ ಹೆಚ್ಚಾಗಿ ಸರ್ಕಾರದ ಆಶಯದ ಮೂಲಕ್ಕೇ ಕೊಡಲಿ ಯೇಟು ಬಿದ್ದಿತ್ತು. ಸರ್ಕಾರದ ಹಣ ಅನವಶ್ಯಕವಾಗಿ ಹರಿದು ಹೋಗಿತ್ತು. ಈ ಹೊತ್ತಿನಲ್ಲಿ ನೆರವಿಗೆ ಬಂದ “ಆಧಾರ್‌’ ಈ ನಕಲಿ
ಕಾರ್ಡುಗಳನ್ನು ದೊಡ್ಡ ಮಟ್ಟದಲ್ಲಿ ನಿರ್ಮೂಲನೆ ಮಾಡಿದೆ. ಒಂದು ಕಾಲಕ್ಕೆ ಐಚ್ಛಿಕ ಆಗಿದ್ದ ಆಧಾರ್‌ ಇಂದು ಪ್ರತಿ
ಯೊಂದಕ್ಕೂ ಕಡ್ಡಾಯವಾಗ ತೊಡಗಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಧಾರ್‌ ಅನ್ನು ಗರಿಷ್ಠ ಮಟ್ಟ
ದಲ್ಲಿ ಬಳಸಿಕೊಳ್ಳತೊಡಗಿದೆ.

ಲಿಂಕ್‌ ಇಲ್ಲದ ಕಾರ್ಡ್‌ ಅನರ್ಹ: ಪಡಿತರ ಚೀಟಿಗೆ ಆಧಾರ್‌ ಸಂಪರ್ಕಗೊಳಿಸುವುದನ್ನು ಕಡ್ಡಾಯಗೊಳಿಸಿತು. ಪಡಿತರ
ಚೀಟಿಯೊಂದಿಗೆ ಆಧಾರ್‌ ಲಿಂಕ್‌ ಮಾಡಿ ಕೊಳ್ಳಲು ನೀಡಲಾಗಿದ್ದ ಮಾ.31ರ ಅವಧಿ ಮುಗಿದ ನಂತರ ಆಧಾರ್‌ ಲಿಂಕ್‌ ಇಲ್ಲದ ಪಡಿತರ ಚೀಟಿಯನ್ನು ಹಂತ ಹಂತವಾಗಿ ರದ್ದು ಮಾಡುತ್ತ ಬಂದಿರುವ ಇಲಾಖೆ ಈ ತನಕ 57ಲಕ್ಷ ಅನರ್ಹ ಪಡಿತರ ಚೀಟಿಯನ್ನು ರದ್ದು ಮಾಡಿರುವುದು ಗರಿಷ್ಠ ಸಾಧನೆಯಾಗಿದೆ. ಇದರ ಪರಿಣಾಮ ಒಂದು ಕಾರ್ಡ್‌ಗೆ ಒಂದು
ತಿಂಗಳಿಗೆ 5ಕೆಜಿ ಅಕ್ಕಿ ಲೆಕ್ಕ ಹಿಡಿದರೂ ಒಂದು ತಿಂಗಳಿಗೆ 2,89,41,480 ಕೆಜಿ ಅಕ್ಕಿ ಉಳಿತಾಯವಾದಂತಾಗಿದೆ.

ರಾಜ್ಯದಲ್ಲಿ ಗರಿಷ್ಠ ಮಟ್ಟದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದಾದ ಜಿಲ್ಲೆಗಳಲ್ಲಿ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳು
ಮುಂಚೂಣಿಯಲ್ಲಿವೆ. ಈ ಪೈಕಿ ಕಲಬುರ್ಗಿ 4,20,037, ರಾಯಚೂರು 4,19,766, ವಿಜಯಪುರ 3,63,219,
ಬೆಳಗಾವಿ 3,41,441 ಹಾಗೂ ಬಳ್ಳಾರಿ 2,66,080 ಕಾರ್ಡ್‌ಗಳು ಸೇರಿವೆ ಪ್ರಸ್ತುತ ರಾಜ್ಯಾದ್ಯಂತ 3,54,59,461 ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ದಾರರು ಉಳಿದುಕೊಂಡಿದ್ದಾರೆ.

ಆಧಾರ್‌ ಕಡ್ಡಾಯ: ರಾಜ್ಯಾದ್ಯಂತ ಅನರ್ಹ ಹಾಗೂ ನಕಲಿ ಪಡಿತರ ಚೀಟಿ ಗಳು ಇವೆ ಎಂಬ ಆರೋಪ ಕೇಳಿ ಬಂದ
ಹಿನ್ನೆಲೆಯಲ್ಲಿ ಪಡಿತರ ಚೀಟಿಯೊಂದಿಗೆ ಪಡಿತರ ಕುಟುಂಬದ ಪ್ರತಿಯೊಬ್ಬರೂ ತಮ್ಮ ಆಧಾರ್‌ ಅನ್ನು ಪಡಿತರ ಚೀಟಿ
ಸಂಖ್ಯೆಯೊಂದಿಗೆ ಕಡ್ಡಾಯವಾಗಿ ಲಿಂಕ್‌ ಮಾಡಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆ ನೀಡಿತ್ತು.

Advertisement

ಆರಂಭದಲ್ಲಿ ಇದನ್ನು ಪಡಿತರ ಚೀಟಿದಾರರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ಮಾ.31ರ ನಂತರವೂ ಬಹಳಷ್ಟು ಪಡಿತರ ಚೀಟಿದಾರರು ಆಧಾರ್‌ನ್ನು ಪಡಿತರ ಚೀಟಿಯೊಂದಿಗೆ ಲಿಂಕ್‌ ಮಾಡಿಕೊಳ್ಳಲಿಲ್ಲವೋ ಆಗ ಇಲಾಖೆ ಬಿಗಿ ಕ್ರಮಕ್ಕೆ ಮುಂದಾಯಿತು. ಇದರ ಪರಿಣಾಮ ಆಧಾರ್‌ನೊಂದಿಗೆ ಲಿಂಕ್‌ ಮಾಡಿಕೊಳ್ಳದ ಪಡಿತರ ಚೀಟಿಗೆ ಆಹಾರ ವಿತರಣೆಯನ್ನೇ ರದ್ದುಪಡಿಸಿತು.

ಇದರಿಂದಾಗಿ ಲಕ್ಷಾಂತರ ಕ್ವಿಂಟಲ್‌ ಪಡಿತರ ಉಳಿತಾಯವಾಯಿತು. ಮಾತ್ರವಲ್ಲ ನಕಲಿ ಕಾರ್ಡುಗಳ ಲೆಕ್ಕ ಸಿಗತೊಡಗಿತು. ಬಹಳಷ್ಟು ಪ್ರಕರಣದಲ್ಲಿ ಪಡಿತರ ಚೀಟಿಯಲ್ಲಿರುವವರ ಪೈಕಿ ಒಬ್ಬರು ತಮ್ಮ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿಕೊಂಡಿರುತ್ತಾರೆ. ಉಳಿದವರು ಮಾಡಿಕೊಂಡಿರುವುದಿಲ್ಲ. ಅಂತಹ ಸಂದರ್ಭದಲ್ಲೂ ಪಡಿತರ ಚೀಟಿ ರದ್ದಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next